ಭಾನುವಾರ, ಮಾರ್ಚ್ 7, 2021
22 °C
ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ

‘ಶಿಸ್ತು, ಸಮಯಪಾಲನೆ ಸಾಧನೆಗೆ ಹಾದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ‘ವಿದ್ಯಾರ್ಥಿಗಳು ಶಿಸ್ತು ಮತ್ತು ಸಮಯ ಪಾಲನೆಗೆ ಒತ್ತು ಕೊಟ್ಟಾಗ ಮಾತ್ರ ಸಾಧಕರಾಗಲು ಸಾಧ್ಯ’ ಎಂದು ಚನ್ನಾಂಬಿಕ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಂಪುರ ರಾಜಣ್ಣ ಅಭಿಪ್ರಾಯಪಟ್ಟರು.

ಇಲ್ಲಿನ ಯಲಚಿಪಾಳ್ಯ ಗ್ರಾಮದಲ್ಲಿ ಚನ್ನಾಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶನಿವಾರ ಏರ್ಪಡಿಸಿದ್ದ 2019-20ನೇ ಶೈಕ್ಷಣಿಕ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಪೋಷಕರ ಹಿರಿಮೆ ಹೆಚ್ಚಿಸುವ ಹಾಗೂ ತಾಯಿ ನೆಲವನ್ನು ಪ್ರೀತಿಸುವ ಮೂಲಕ ಭವಿಷ್ಯದ ದಿನಗಳನ್ನು ವಿದ್ಯಾರ್ಥಿಗಳು ಸುಂದರಗೊಳಿಸಿಕೊಳ್ಳಬೇಕು. ಸಮಾಜದಲ್ಲಿ ಗೌರವಯುತವಾಗಿ ಬದುಕುವ ಕಲೆಯನ್ನು ಶಿಕ್ಷಣ ಕಟ್ಟಿಕೊಡುತ್ತದೆ. ಶಿಕ್ಷಣದ ಜೊತೆಗೆ ನಾಯಕತ್ವ ಗುಣ ಬೆಳೆಸಿಕೊಳ್ಳುವವರು ಸಮಾಜದ ಆಸ್ತಿಯಾಗುತ್ತಾರೆ’ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಅ.ಮಾ.ರುದ್ರಮಾದಪ್ಪ ಮಾತನಾಡಿ, ‘ಸಾಹಿತ್ಯ, ಸಂಸ್ಕೃತಿ ಮತ್ತು ಕ್ರೀಡೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಳಶಪ್ರಾಯವಾದವು. ಸಮಾಜ ಸುಧಾರಕರ ಜೀವನ ಮತ್ತು ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ಸಾಮಾಜಿಕ ಕಳಕಳಿ, ಪರಿಸರ ಪ್ರಜ್ಞೆ, ಮೌಢ್ಯ ನಿವಾರಣೆ, ದುಶ್ಚಟಮುಕ್ತ ಜೀವನ ಹಾಗೂ ಜಾತಿ ವಿನಾಶದಂತಹ ಮೌಲ್ಯಯುತ ಅಂಶಗಳತ್ತ ಯುವಜನರು ಗಮನಹರಿಸಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪೂರ್ಣಿಮ ನಿಂಗೇಗೌಡ ಮಾತನಾಡಿ, ‘ನೈತಿಕ ಮೌಲ್ಯ, ಕೌಶಲ ಮತ್ತು ಸಾಧಿಸುವ ಛಲ ವಿದ್ಯಾರ್ಥಿಗಳನ್ನು ಪ್ರಗತಿಯತ್ತ ಮುನ್ನಡೆಸುತ್ತವೆ’ ಎಂದರು.

ಚನ್ನಾಂಬಿಕ ಪದವಿ ಕಾಲೇಜು ಪ್ರಾಂಶುಪಾಲ ವಿಜಯ್ ರಾಂಪುರ, ಹಿರಿಯ ಜಾನಪದ ಗಾಯಕ ಚೌ.ಪು.ಸ್ವಾಮಿ, ಮುಖ್ಯ ಶಿಕ್ಷಕ ಆರ್.ವಿ.ವೆಂಕಟಸ್ವಾಮಿ, ಉಪನ್ಯಾಸಕ ಎಚ್.ಕೆ. ದಿನೇಶ್ ಭಾಗವಹಿಸಿದ್ದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.