ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಷಾರಾಮಿ ರೆಸಾರ್ಟ್‌ನಲ್ಲಿ ಪಿಡಿಒ ವಾಸ...

Published 27 ಮಾರ್ಚ್ 2024, 22:52 IST
Last Updated 27 ಮಾರ್ಚ್ 2024, 22:52 IST
ಅಕ್ಷರ ಗಾತ್ರ

ರಾಮನಗರ: ಅಕ್ರಮವಾಗಿ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ತಾಲ್ಲೂಕಿನ ಮಂಚನಾಯಕ
ನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಯತೀಶ್ ಚಂದ್ರ ಅವರ ಮನೆ ಹಾಗೂ ಕಚೇರಿ ಸೇರಿದಂತೆ ಅವರಿಗೆ ಸೇರಿದ ಐದು ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಅಧಿಕಾರಿಯ ಐಷಾರಾಮಿ ಜೀವನ ಕಂಡು ದಂಗಾಗಿದ್ದಾರೆ.

ಕರ್ತವ್ಯ ನಿಮಿತ್ತ ಅವರು ಬಿಡದಿ ಸಮೀಪದ ದುಬಾರಿ ಈಗಲ್ಟನ್ ರೆಸಾರ್ಟ್‌ನಲ್ಲಿ ಮನೆ ಬಾಡಿಗೆಗೆ ಪಡೆದು ವಾಸವಾಗಿದ್ದರು. ಬೆಳಿಗ್ಗೆಯೇ ರೆಸಾರ್ಟ್‌ಗೆ ತೆರಳಿದ ಪೊಲೀಸರು ಯತೀಶ್ ಅವರ ವಿಚಾರಣೆ ನಡೆಸಿದರು. ಮನೆ ಜೊತೆಗೆ ಕಚೇರಿಯನ್ನು ಪರಿಶೀಲಿಸಿ ದಾಖಲೆ ಹಾಗೂ ಕಡತ ವಶಕ್ಕೆ ಪಡೆದಿದ್ದಾರೆ.

ಯತೀಶ್ ಅವರ ಮಾಸಿಕ ಸಂಬಳ ಮತ್ತು ರೆಸಾರ್ಟ್‌ನಲ್ಲಿ ಪಾವತಿಸುತ್ತಿರುವ ಬಾಡಿಗೆ ಮೊತ್ತದ ನಡುವಣ ವ್ಯತ್ಯಾಸ ಪರಿಶೀಲಿಸಲಾಗುತ್ತಿದೆ. ಯತೀಶ್ ಅವರ ಇತರ ಆದಾಯದ ಮೂಲಗಳನ್ನು ಸಹ ಪರಿಶೀಲನೆ ನಡೆಸಲಾಗುತ್ತಿದೆ. ಯತೀಶ್ ಸಹೋದ್ಯೋಗಿಯಾಗಿರುವ ಚನ್ನಪಟ್ಟಣ ತಾಲ್ಲೂಕಿನ ಮೈಲನಾಯಕನಹಳ್ಳಿ ಪಿಡಿಒ ಒಬ್ಬರ ಚನ್ನಪಟ್ಟಣದಲ್ಲಿರುವ ಮನೆ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ. ಮನೆಯಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋಟ್ಯಂತರ ರೂಪಾಯಿ ಅವ್ಯವಹಾರ: ‘ಪಂಚಾಯಿತಿಯಲ್ಲಿ ವಾರ್ಷಿಕ ಸುಮಾರು ₹60 ಕೋಟಿ ತೆರಿಗೆ ವಸೂಲಿಯಾಗುತ್ತದೆ. ಈ ಹಣವನ್ನು ಯತೀಶ್ ದುರುಪಯೋಗ ಮಾಡಿಕೊಂಡಿದ್ದಾರೆ. ಕುಡಿಯುವ ನೀರು ಸಾಮಗ್ರಿ ಖರೀದಿಯಲ್ಲಿ ಅಕ್ರಮ, ಲೇಔಟ್ ಮಾಡದ ಜಾಗಕ್ಕೆ ಇ- ಖಾತೆ ನೀಡುವುದು ಸೇರಿದಂತೆ ಹಲವು ಅವ್ಯವಹಾರ ನಡೆಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು’ ಎಂದು ಮಂಚನಾಯಕನ
ಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶೇಷಗಿರಿಹಳ್ಳಿ ಶಿವಣ್ಣ ಒತ್ತಾಯಿಸಿದರು.

‘ಯತೀಶ್ ಅಕ್ರಮವಾಗಿ ಹಣ ಸಂಪಾದಿಸುತ್ತಿರುವ ಕುರಿತು ತಾಲ್ಲೂಕು ಪಂಚಾಯಿತಿ ಇ.ಒ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ಕೊಟ್ಟಿದ್ದೆ. ಆದರೆ, ಇಬ್ಬರೂ ಕ್ರಮ ಕೈಗೊಳ್ಳಲಿಲ್ಲ. ಕಡೆಗೆ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೆ. ಪೊಲೀಸರೇ ದಾಳಿ ನಡೆಸಿದ್ದಾರೆ’ ಎಂದರು.

ಮನೆಯಲ್ಲಿ ₹2.23 ಕೋಟಿ ಆಸ್ತಿ ಪತ್ತೆ (ಮೈಸೂರು ವರದಿ): ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಮಂಚನಾಯಕಹಳ್ಳಿ ಪಿಡಿಒ ಯತೀಶ್‌ ಅವರ ಇಲ್ಲಿನ ರಾಘವೇಂದ್ರ
ನಗರದ ಮನೆ ಮೇಲೆ ಬುಧವಾರ ಬೆಳಿಗ್ಗೆ ದಿಢೀರ್‌ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ₹ 2.23 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.

ಯತೀಶ್‌ ಅವರ ಬಳಿ ₹ 1.16 ಕೋಟಿ ಮೌಲ್ಯದ 4 ನಿವೇಶನಗಳಿದ್ದು, 2 ನಿವೇಶನಗಳಲ್ಲಿ ಮನೆ ನಿರ್ಮಾಣ ಕಾಮಗಾರಿ ನಡೆಸಿದ್ದಾರೆ. ಮನೆಯೊಂದರ ಮೌಲ್ಯ ₹ 92 ಲಕ್ಷವಾಗಿದೆ.

‘ಚರಾಸ್ತಿಯಲ್ಲಿ ₹ 5.31 ಲಕ್ಷ ನಗದು, ₹ 24.83 ಲಕ್ಷ ಮೌಲ್ಯದ 448 ಗ್ರಾಂ ಚಿನ್ನ, ₹ 71,800 ಮೌಲ್ಯದ 415 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ₹ 22.98 ಲಕ್ಷ ಮೌಲ್ಯದ ವಾಹನಗಳು ಹಾಗೂ ₹ 39.59 ಲಕ್ಷ ಮೌಲ್ಯದ ಇತರ ಬೆಲೆಬಾಳುವ ವಸ್ತುಗಳೂ ಇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎಸ್‌‍ಪಿ ಸಜಿತ್, ಡಿವೈಎಸ್‌ಪಿ ಕೃಷ್ಣಯ್ಯ, ಇನ್‌ಸ್ಪೆಕ್ಟರ್‌ ರೂಪಶ್ರೀ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT