ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಮತದಾನ ಶಾಂತಿಯುತ, ಬಹುತೇಕ ಕಡೆ ನೀರಸ

Published 27 ಏಪ್ರಿಲ್ 2024, 6:39 IST
Last Updated 27 ಏಪ್ರಿಲ್ 2024, 6:39 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ಬೆಳಿಗ್ಗೆ 9ಕ್ಕೆ ಶೇ8.98 ಮತದಾನ, 11ಕ್ಕೆ ಶೇ23,58, ಮಧ್ಯಾಹ್ನ 1ಕ್ಕೆ ಶೇ43.31 ಮತದಾನ, 3ಕ್ಕೆ 60.99, ಸಂಜೆ 5ಕ್ಕೆ ಶೇ77.74 ಮತದಾನವಾಗಿತ್ತು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 1,11,577 ಮಂದಿ ಪುರುಷ ಮತದಾರರು, 1,19,678 ಮಂದಿ ಮಹಿಳಾ ಮತದಾರರು, 8ಮಂದಿ ಇತರ ಮತದಾರರು ಸೇರಿ ಒಟ್ಟು 2,31,263 ಮಂದಿ ಮತದಾರರಿದ್ದಾರೆ.

ಶುಕ್ರವಾರ ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಯಿತಾದರೂ ಮತದಾರರು ಮಾತ್ರ ಮತಗಟ್ಟೆಗಳತ್ತ ಮುಖ ಮಾಡಲಿಲ್ಲ. ಬೆಳಿಗ್ಗೆ 10 ಮೀರಿದರೂ ತಾಲ್ಲೂಕಿನ ಬಹುತೇಕ ಮತಗಟ್ಟೆಗಳು ಖಾಲಿ ಕಂಡು ಬಂತು. ವಿಧಾನಸಭಾ ಚುನಾವಣೆಗಳಲ್ಲಿ ಕಂಡು ಬರುತ್ತಿದ್ದ ಮತದಾರರ ಸರದಿ ಸಾಲು ಕೆಲವೇ ಕೆಲ ಮತಗಟ್ಟೆಗಳಲ್ಲಿ ಮಾತ್ರ ಕಂಡು ಬಂತು. ಬೆಳಿಗ್ಗೆ ನೀರಸವಾಗಿದ್ದ ಮತದಾನ 10:30 ನಂತರ ಬಿರುಸುಗೊಂಡಿತು. ಸಂಜೆ ನಂತರ ಬಹುತೇಕ ಮತಗಟ್ಟೆಗಳಲ್ಲಿ ಸರದಿ ಸಾಲು ಕಂಡು ಬಂತು.

ತಾಲ್ಲೂಕಿನಲ್ಲಿ ಅತಿ ಹೆಚ್ಚು ಐದು ಮತಗಟ್ಟೆ ಹೊಂದಿರುವ ತಾಲ್ಲೂಕಿನ ಹೊಂಗನೂರು, ಪಟ್ಟಣದ ಮಂಗಳವಾರಪೇಟೆ ಸೇರಿದಂತೆ ಹಲವು ಮತಗಟ್ಟೆಗಳು ಮಧ್ಯಾಹ್ನದವರೆಗೆ ಖಾಲಿ ಇದ್ದವು.

ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ ಸ್ವಗ್ರಾಮ ಚಕ್ಕೆರೆ ಮತಗಟ್ಟೆಯಲ್ಲಿ, ಮಾಜಿ ಶಾಸಕರಾದ ಎಂ.ಸಿ.ಅಶ್ವತ್ಥ್ ಮಂಗಳವಾರಪೇಟೆ ಮತಗಟ್ಟೆಯಲ್ಲಿ, ಸಾದತ್ ಆಲಿಖಾನ್ ನಗರದ 26ನೇ ವಾರ್ಡ್ ಮತಗಟ್ಟೆಯಲ್ಲಿ, ಬೆಂಗಳೂರು ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಅಧ್ಯಕ್ಷ ರಘುನಂದನ್ ರಾಮಣ್ಣ ತಿಟ್ಟಮಾರನಹಳ್ಳಿ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರಿಂದ ತಾಲ್ಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆಗಳು ಇಲ್ಲದಂತೆ ಮತದಾನ ಸಂಪೂರ್ಣ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರ ಮತಗಟ್ಟೆ ಸಂಜೆ ವೇಳೆಗೆ ಸಂಪೂರ್ಣ ಖಾಲಿ ಇತ್ತು
ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರ ಮತಗಟ್ಟೆ ಸಂಜೆ ವೇಳೆಗೆ ಸಂಪೂರ್ಣ ಖಾಲಿ ಇತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT