ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ನಿವೇಶನ ಹಂಚಿಕೆ ಬರೀ ಕನಸು

ರಾಮನಗರ ಸುತ್ತಮುತ್ತ ಗಗನಕ್ಕೇರಿದ ಭೂಮಿ ಬೆಲೆ: ಜಮೀನು ನೀಡಲು ಮಾಲೀಕರ ಹಿಂದೇಟು
Last Updated 2 ಅಕ್ಟೋಬರ್ 2019, 13:20 IST
ಅಕ್ಷರ ಗಾತ್ರ

ರಾಮನಗರ: ರಾಜಧಾನಿಗೆ ಹತ್ತಿರದಲ್ಲಿ ಇರುವ ರಾಮನಗರದಲ್ಲಿ ಸ್ವಂತ ಸೂರು ಕಟ್ಟಿಕೊಳ್ಳುವ ಕನಸು ಸಾವಿರಾರು ಬಡವರದ್ದು. ಆದರೆ ನಿವೇಶನ ಅಲಭ್ಯತೆ ಈ ಜನರ ಕನಸಿಗೆ ಕೊಳ್ಳಿ ಇಟ್ಟಿದೆ.

ರಾಮನಗರವು ಜಿಲ್ಲಾ ಕೇಂದ್ರವಾಗಿ ರೂಪುಗೊಂಡು ದಶಕ ಕಳೆದಿದೆ. ಇಲ್ಲಿ ಬಡತನ ರೇಖೆಗಿಂತ ಕೆಳಗಿರುವ
ನಗರವಾಸಿಗಳಿಗೆ ಮನೆ ನಿರ್ಮಾಣ ಮಾಡಿಕೊಡುವ ಸಂಬಂಧ ಆಗ್ಗಾಗ್ಗೆ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತಿದೆ. ಆದರೆ ಅದಕ್ಕೆ ಬೇಕಾದ ಭೂಮಿಯ ಲಭ್ಯತೆ ಇಲ್ಲದಿರುವುದು ಅಧಿಕಾರಿಗಳಿಗೆ ತಲೆನೋವು ತಂದಿದೆ.

ರಾಮನಗರ ಪಟ್ಟಣ ಪ್ರದೇಶ ಒಂದರಲ್ಲಿಯೇ ಏಳು ಸಾವಿರಕ್ಕೂ ಹೆಚ್ಚು ಜನರು ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ನಿವೇಶನ ಹಂಚಿಕೆ ಸಲುವಾಗಿ ಹಲವೆಡೆ ಜಮೀನಿನ ಹುಡುಕಾಟ ನಡೆದಿದೆ. ರಾಮನಗರದ ಕಸಬಾ ಹೋಬಳಿಯ ಹರೀಸಂದ್ರ ಬಳಿ ಸುಮಾರು 69 ಎಕರೆ ಜಮೀನನ್ನು ಜಿಲ್ಲಾಡಳಿತ ಗುರ್ತು ಮಾಡಿ, ಸರ್ಕಾರಕ್ಕೆ ಪತ್ರವನ್ನು ಬರೆಯಿತು. ಆದರೆ, ರಾಜೀವ್ ಗಾಂಧಿ ವಸತಿ ನಿಗಮವು ಮಾರುಕಟ್ಟೆ ಮೌಲ್ಯ ಕೊಟ್ಟು ಜಮೀನು ಖರೀದಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಈವರೆಗೂ ಸರ್ಕಾರ ಮತ್ತು ಜಮೀನು ಮಾಲೀಕರ ನಡುವೆ ಕೊಡು–ಬಿಡುವ ಲೆಕ್ಕಾಚಾರ ನಡೆದೇ ಇದೆ.

ರಾಜೀವ್ ಗಾಂಧಿ ವಸತಿ ನಿಗಮವು ಪ್ರತಿ ಎಕರೆಗೆ ₨28 ಲಕ್ಷ ಮಿತಿಯೊಳಗೆ ಖರೀದಿ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ಆದರೆ ರಾಷ್ಟ್ರೀಯ ಹೆದ್ದಾರಿಗಾಗಿ ವಶಪಡಿಸಿಕೊಂಡ ಜಮೀನುಗಳಿಗೆ ಹೆಚ್ಚಿನ ಪರಿಹಾರ ಮೊತ್ತ ದೊರೆತಿರುವುದರಿಂದ ಸ್ಥಳೀಯರು ಕಡಿಮೆ ಮೊತ್ತಕ್ಕೆ ಜಮೀನು ನೀಡಲು ನಿರಾಕರಿಸುತ್ತಿದ್ದಾರೆ.

ಬೆಲೆ ಹೆಚ್ಚಳ ಅಗತ್ಯ: ಆರ್‌ಜೆಎಚ್‌ಸಿಎಲ್ ಪ್ರಸ್ತುತ ನಿಗದಿಪಡಿಸಿರುವ ಮಾರ್ಗಸೂಚಿ ದರದಲ್ಲಿ ರೈತರು ಜಮೀನು ಕೊಡಲು ಒಪ್ಪಿಗೆ ನೀಡದೇ ಇರುವುದರಿಂದ, ನಿಗಮ ತನ್ನ ನಿಯಮವನ್ನು ಸಡಿಲಿಸಬೇಕಿದೆ. ಒಂದು ಎಕರೆ ಜಮೀನಿನ ಪ್ರಸ್ತುತ ಮಾರುಕಟ್ಟೆ ದರ ₨75 ಲಕ್ಷ–1 ಕೋಟಿ ಇದೆ. ಇಂತಹ ಸಂದರ್ಭದಲ್ಲಿ ಎಕರೆಗೆ ಕೇವಲ ₨ 28 ಲಕ್ಷ ದರ ನಿಗದಿ ಮಾಡಿದರೆ ಜಮೀನು ನೀಡಲು ರೈತರು ಸಿದ್ಧರಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಮಾರುಕಟ್ಟೆ ದರದಲ್ಲಿ ಜಮೀನು ಖರೀದಿಗೆ ಜಿಲ್ಲಾಡಳಿತ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಗೋಮಾಳವೂ ಇಲ್ಲ: ಕಡಿಮೆ ಮೊತ್ತಕ್ಕೆ ಜಮೀನು ಲಭ್ಯವಿಲ್ಲದ ಕಾರಣ, ಗೋಮಾಳಗಳನ್ನು ಹುಡುಕುವಂತೆ ಸರ್ಕಾರ ನಿರ್ದೇಶನ ನೀಡಿದೆ. ಆದರೆ, ರಾಮನಗರ ಸುತ್ತ ಮುತ್ತಲ ಪ್ರದೇಶದಲ್ಲಿ ಗೋಮಾಳಗಳ ಕೊರತೆಯೂ ಹೆಚ್ಚಾಗಿದ್ದು, ಇವುಗಳ ಲಭ್ಯತೆಯೂ ಇಲ್ಲದ ಕಾರಣ ಅಧಿಕಾರಿಗಳು ಹುಡುಕು ಸುತ್ತಾಗಿದ್ದಾರೆ.

ನನೆಗುದಿಗೆ ಬಿದ್ದ ಯೋಜನೆಗಳು
ರಾಮನಗರ ನಗರಸಭೆ ವ್ಯಾಪ್ತಿಯ ಕೊತ್ತೀಪುರ ಬಳಿ ಜಿ ಪ್ಲಸ್‌ 3 ಮಾದರಿಯಲ್ಲಿ ಸುಮಾರು 800 ಮನೆಗಳ ನಿರ್ಮಾಣಕ್ಕೆ 7.10 ಎಕರೆ ಜಮೀನನ್ನು ಹಸ್ತಾಂತರ ಮಾಡಲಾಗಿದೆ. ಆದರೆ ಈವರೆವಿಗೂ ಮನೆಗಳ ನಿರ್ಮಾಣಕ್ಕೆ ರಾಜೀವ್ ಗಾಂಧಿ ವಸತಿ ನಿಗಮ ಮುಂದಾಗಿಲ್ಲ.

ಮತ್ತೊಂದೆಡೆ ದೊಡ್ಡಮಣ್ಣು ಗುಡ್ಡೆ ಬಳಿ ದಶಕದ ಹಿಂದೆ ನಿರ್ಮಾಣ ಮಾಡಿರುವ 240 ಮನೆಗಳು ಈಗ ಶಿಥಿಲಾವಸ್ಥೆಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿಗೆ ಆರ್‌ಜೆಎಚ್‌ಎಎಲ್‌ ಟೆಂಡರ್‌ ಕರೆದಿದೆ. ದುರಸ್ತಿ ಕಾಮಗಾರಿ ಪೂರ್ಣಗೊಂಡ ಬಳಿಕ ಮತ್ತೆ ಮನೆಗಳ ಹಂಚಿಕೆ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT