21ರಂದು ಹಿಂದಿ ಹೇರಿಕೆ ವಿರೋಧಿಸಿ ಪ್ರತಿಭಟನೆ: ವಾಟಾಳ್ ನಾಗರಾಜ್ ಹೇಳಿಕೆ

ರಾಮನಗರ: ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನೀತಿ ವಿರೋಧಿಸಿ ಇದೇ 21ರಂದು ಬೆಂಗಳೂರಿನಲ್ಲಿ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜು ಹೇಳಿದರು.
ಐಜೂರು ವೃತ್ತದಲ್ಲಿ ಶುಕ್ರವಾರ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ಕೇಂದ್ರದ ಬಿಜೆಪಿ ಸರ್ಕಾರವು ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ. ಇದನ್ನು ವಿರೋಧಿಸಿ 21ರಂದು ಹಿಂದಿ ವಿರೋಧಿ ಚಳವಳಿ ನಡೆಸಲಾಗುತ್ತದೆ. ಅಂದು ಬೆಂಗಳೂರಿನ ಮೈಸೂರು ಬ್ಯಾಂಕ್, ಕೇಂಪೇಗೌಡ ರಸ್ತೆ ಹಾಗೂ ಎಲ್ಲಾ ಬ್ಯಾಂಕ್‍ಗಳ ಮುಂದೆ ಪ್ರತಿಭಟನೆ ನಡೆಸಿ ಹಿಂದಿ ಭೂತದಹನ ಮಾಡಲಾಗುತ್ತದೆ ಎಂದು ಹೇಳಿದರು.
ಬ್ಯಾಂಕ್‌ನಲ್ಲಿ ಹಿಂದಿ ಬರಹದ ಚೆಕ್ ಕೊಡುತ್ತಾರೆ. ಆದರೆ, ಅದೇ ಬ್ಯಾಂಕ್ ಗಳಿಗೆ ಕನ್ನಡಿಗರ ಹಣ ಬೇಕು. ಆದರೆ, ಕನ್ನಡ ಭಾಷೆ ಬೇಡ. ಇದರ ವಿರುದ್ಧ ಬ್ಯಾಂಕ್‌ಗಳಿಗೆ ನುಗ್ಗುತೇವೆ. ರಾಜ್ಯದ ಸಂಸದರು ಹಿಂದಿ ಭಾಷೆ ಹೇರಿಕೆಯ ವಿರುದ್ಧ ಲೋಕಸಭೆಯಲ್ಲಿ ಮಾತನಾಡಬೇಕು ಎಂದು ಆಗ್ರಹಿಸಿದರು.
ಹಿಂದಿ ಹೇರಿಕೆಯಿಂದ ಕನ್ನಡ ಬೆಳೆಯಲ್ಲ. ಮುಂದಿನ ದಿನಗಳಲ್ಲಿ ಹಿಂದಿ ಭಾಷೆ ಪ್ರಬಲ ಆಗಿ ಕನ್ನಡಕ್ಕೆ ಧಕ್ಕೆ ಆಗುತ್ತದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಹಿಂದಿ ಭಾಷೆ ಹೇರಿಕೆ ವಿರುದ್ಧ ಕ್ರಿಯಾಸಮಿತಿ ರಚನೆ ಮಾಡುತ್ತೇವೆ. ಸರ್ಕಾರಿ ಸಮಾರಂಭಗಳು ಕನ್ನಡದಲ್ಲಿ ನಡೆಯಬೇಕು. ಹಿಂದಿ ಚಲನಚಿತ್ರಗಳನ್ನು ಕರ್ನಾಟಕದಲ್ಲಿ ತೆರೆ ಕಾಣಲು ಬಿಡುವುದಿಲ್ಲ. ರಾಜ್ಯ ಸರ್ಕಾರ ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡುವುದನ್ನು ಬಿಟ್ಟು ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಜಯಕುಮಾರ್, ಗಾಯಿತ್ರಿಬಾಯಿ, ಮಂಗಳಮ್ಮ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.