ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಐಜೂರು ಪಿಎಸ್‌ಐ ಅಮಾನತು ರದ್ದು

Published 5 ಮಾರ್ಚ್ 2024, 19:50 IST
Last Updated 5 ಮಾರ್ಚ್ 2024, 19:50 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲಾ ವಕೀಲರ ಸಂಘದ 40 ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ ಆರೋಪದ ಮೇಲೆ ಅಮಾನತು ಆಗಿದ್ದ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ಸಯ್ಯದ್ ತನ್ವೀರ್ ಹುಸೇನ್ ಅವರ ಅಮಾನತು ಆದೇಶ ರದ್ದುಪಡಿಸಲಾಗಿದೆ.

ಕೇಂದ್ರ ವಲಯದ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಅವರು ಮಾರ್ಚ್ 1ರಂದು ಅಮಾನತು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.

ವಕೀಲರ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಫೆ. 21ರಂದು ಐಜೂರು ಠಾಣೆ ಪಿಎಸ್‌ಐ ಅಮಾನತು ಗೊಳಿಸಲಾಗಿತ್ತು. ಅವರ ವಿರುದ್ಧ ವಿಚಾರಣೆ ನಡೆಸಿ ವರದಿ ನೀಡುವಂತೆ ಚನ್ನಪಟ್ಟಣ ಡಿವೈಎಸ್‌ಪಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚಿಸಿದ್ದರು.

ವಿಚಾರಣೆ ನಡೆಸಿದ ಡಿವೈಎಸ್‌ಪಿ ‘ಸಾಕ್ಷಿದಾರರ ವಿಚಾರಣೆ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ, ಇತರ ತಾಂತ್ರಿಕ ಸಾಕ್ಷ್ಯ ಹಾಗೂ ದಾಖಲೆ ಪರಿಶೀಲಿಸಿದಾಗ ತನ್ವೀರ್ ಅವರು ಬಾಹ್ಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಕರಣ ದಾಖಲಿಸಿದ್ದಾರೆ. ಒಂದು ಕೋಮಿನ ಜನರಿಗೆ ಸಹಾಯ ಮಾಡುವ ಉದ್ದೇಶ ಹೊಂದಿರಲಿಲ್ಲ’ ಎಂದು ವರದಿ ಕೊಟ್ಟಿದ್ದಾರೆ. ಈ ವರದಿ ಆಧಾರದ ಮೇಲೆ  ಅಮಾನತು ಆದೇಶ ರದ್ದುಪಡಿಸಲಾಗಿದೆ ಎಂದು ಐಜಿಪಿ ಹೇಳಿದ್ದಾರೆ.

ಕಾರಣವಾಗಿದ್ದ ಫೇಸ್‌ಬುಕ್‌ ಪೋಸ್ಟ್

ವಾರಾಣಸಿಯ ಗ್ಯಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ನ್ಯಾಯಾಲಯ ಆದೇಶದ ವಿರುದ್ಧ ರಾಮನಗರ ವಕೀಲ ಚಾನ್ ಪಾಷಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.  ಫೆ.3ರಂದು ಬಿಜೆಪಿಯ ಶಿವಾನಂದ ದೂರಿನ ಮೇರೆಗೆ ಪಾಷಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಜಿಲ್ಲಾ ವಕೀಲರ ಸಂಘ ಪಾಷಾ ವಿರುದ್ಧ ಕ್ರಮ ಕೈಗೊಳ್ಳಲು ಫೆ. 6ರಂದು ಸಭೆ ಕರೆಯಿತು. ಸೌಹಾರ್ದವಾಗಿ ಪ್ರಕರಣ ಬಗೆಹರಿಸಿಕೊಳ್ಳಿ ಎಂದು ಮನವಿ ಸಲ್ಲಿಸಲು ದಲಿತರು ಪ್ರಗತಿಪರರು ಸಭೆಗೆ ತೆರಳಿದ್ದರು. ಆಗ ಗಲಾಟೆ ನಡೆದಿತ್ತು. ವಕೀಲರ ಸಂಘದ ಅಧ್ಯಕ್ಷ ಬಿ.ಎಂ. ಶ್ರೀವತ್ಸ ಅಂದು ರಾತ್ರಿ ಪಾಷಾ ಮತ್ತು 40 ಮುಖಂಡರ ವಿರುದ್ಧ ನೀಡಿದ್ದ ದೂರಿನ ಮೇರೆಗೆ ಐಜೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದಕ್ಕೆ ಪ್ರತಿಯಾಗಿ ಫೆ.7ರಂದು ರಫೀಕ್‌ ಖಾನ್ ದೂರಿನ ಮೇರೆಗೆ 40 ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದ ಐಜೂರು ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ವಕೀಲರು ಧರಣಿ ಆರಂಭಿಸಿದ್ದರು. ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ ವಕೀಲರು ಪಿಎಸ್‌ಐ ಅಮಾನತಿಗೆ ಪಟ್ಟು ಹಿಡಿದಿದ್ದರು. ಜಿಲ್ಲಾಧಿಕಾರಿ ಕಚೇರಿ ಎದುರು ಎರಡು ದಿನ ಅಹೋರಾತ್ರಿ ಧರಣಿ ಸೇರಿದಂತೆ ಫೆ. 12ರಿಂದ 20ರವರೆಗೆ 9 ದಿನ ಪ್ರತಿಭಟನೆ ನಡೆಸಿದ್ದರು. ರಾಜ್ಯದ ವಿವಿಧ ಭಾಗಗಳ ವಕೀಲರು ಕೈ ಜೋಡಿಸಿದ್ದರು. ಜೆಡಿಎಸ್ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ವಕೀಲರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿ ಪಿಎಸ್‌ಐ ಅಮಾನತಿಗೆ ಒತ್ತಾಯಿಸಿದ್ದರು. ಇದರೊಂದಿಗೆ ರಾಜಕೀಯ ತಿರುವು ಪಡೆದಿದ್ದ ಧರಣಿ ವಿಷಯ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಧ್ವನಿಸಿತ್ತು. ತಮ್ಮ ಬೇಡಿಕೆ ಈಡೇರಿಕೆಗಾಗಿ ಫೆ. 22ರಂದು ವಕೀಲರು ವಿಧಾನಸೌಧ ಚಲೋ ಕರೆ ಕೊಟ್ಟಿದ್ದರು. ಇದರ ಬೆನ್ನಲ್ಲೇ ಫೆ. 21ರಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಪಿಎಸ್‌ಐ ಅಮಾನತು ವಿಷಯವನ್ನು ಅಧಿವೇಶನದಲ್ಲಿ ಪ್ರಕಟಿಸಿದ್ದರು. ಇಡೀ ಪ್ರಕರಣಕ್ಕೆ ಮೂಲ ಕಾರಣನಾದ ವಕೀಲ ಚಾನ್‌ಪಾಷಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಬಳಿಕ ವಕೀಲರು ಹೋರಾಟ ಕೈ ಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT