ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ–ರಾಜ್ಯ ರೈತ ಪರ ಬಜೆಟ್ ರೂಪಿಸಲಿ: ರವಿಕಿರಣ ಪುಣಚ

ಕರಾಳ ಕೃಷಿ ಕಾಯ್ದೆಗಳ ರದ್ದುಗೊಳಿಸಲು ಆಗ್ರಹ: ರೈತ ಸಂಘದಿಂದ ಫೆ. 10ಕ್ಕೆ ಹಕ್ಕೊತ್ತಾಯ ಮಂಡನೆ
Published 21 ಜನವರಿ 2024, 12:46 IST
Last Updated 21 ಜನವರಿ 2024, 12:46 IST
ಅಕ್ಷರ ಗಾತ್ರ

ರಾಮನಗರ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದೇಶದ ಅನ್ನದಾತರಾದ ರೈತರ ಪರವಾಗಿ ಬಜೆಟ್ ರೂಪಿಸಿ ಮಂಡಿಸಬೇಕು. ರೈತರ ಪಾಲಿಗೆ ಕರಾಳವಾಗಿರುವ ಕೃಷಿ ಕಾಯ್ದೆಗಳನ್ನು ಎರಡೂ ಸರ್ಕಾರಗಳು ಕೂಡಲೇ ರದ್ದುಪಡಿಸಬೇಕು. ಈ ನಿಟ್ಟಿಲ್ಲಿ ರೈತ ಸಂಘವು ಫೆ. 10ಕ್ಕೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಕ್ಕೋತ್ತಾಯ ಮಂಡನೆ ಸಮಾವೇಶ ಹಮ್ಮಿಕೊಂಡಿದೆ’ ಎಂದು ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ ಹೇಳಿದರು.

‘ಸಮಾವೇಶಕ್ಕೆ ಪೂರ್ವಭಾವಿಯಾಗಿ ರೈತ ಸಂಘದ ಆರು ಜಿಲ್ಲೆಗಳ ವ್ಯಾಪ್ತಿಯ ಬೆಂಗಳೂರು ವಿಭಾಗೀಯ ಪದಾಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಲಾಗುತ್ತಿದೆ. ಫೆ. 10ರಂದು ರೈತರು ಟ್ರಾಕ್ಟರ್ ಮತ್ತು ಇನ್ನಿತರ ಕೃಷಿ ವಾಹನಗಳ ಪೆರೇಡ್ ಮಾಡಲಿದ್ದಾರೆ’ ಎಂದು ನಗರದಲ್ಲಿ ಎಪಿಎಂಸಿ ಆವರಣದಲ್ಲಿರುವ ರೈತ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನಡೆದ ಐತಿಹಾಸಿ ಹೋರಾಟಕ್ಕೆ ಮಣಿದಿದ್ದ ಕೇಂದ್ರ ಸರ್ಕಾರ,  ಕಾಯ್ದೆಗಳನ್ನು ವಾಪಸ್ ಪಡೆಯುವ ಭರವಸೆ ನೀಡಿತ್ತು. ಜೊತೆಗೆ, ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವ ಹಾಗೂ ಹೋರಾಟದಲ್ಲಿ ಹುತಾತ್ಮರಾದ ರೈತರ ಕುಟುಂಬಗಳಿಗೆ ಪರಿಹಾರದ ಭರವಸೆ ನೀಡಿತ್ತು’ ಎಂದು ಹೇಳಿದರು.

‘ಸರ್ಕಾರದ ಮಾತಿಗೆ ಗೌರವ ಕೊಟ್ಟ ರೈತರು ಹೋರಾಟ ಅಂತ್ಯಗೊಳಿಸಿದರು. ಆದರೆ, ಸರ್ಕಾರ  ಮಾತ್ರ ಭರವಸೆ ಈಡೇರಿಸದೆ ಮಾತು ತಪ್ಪಿತು.  ಅಲ್ಲದೆ, ಜಿ–20 ಶೃಂಗಸಭೆಯಲ್ಲಿ ಕೃಷಿ ಕಾಯ್ದೆಗಳ ಜಾರಿ ಕುರಿತು ಮತ್ತೆ ಸರ್ಕಾರ ಪ್ರತಿಪಾದನೆ ಮಾಡಿರುವುದು ರೈತರಿಗೆ ಮಾಡಿದ ದ್ರೋಹವಾಗಿದೆ. ರೈತರ ಮೇಲೆ ವಾಹನ ಹರಿಸಿ ಕೊಂದ ಕೇಂದ್ರ ಸಚಿವರ ಪುತ್ರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಿಲ್ಲ’ ಎಂದು ಕಿಡಿಕಾರಿದರು.

‘ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ನೀರಾವರಿ ಸೇರಿದಂತೆ ಹಲವು ಯೋಜನೆಗಳಿಗೆ ತನ್ನ ಪಾಲಿನ ಅನುದಾನ ಕೊಟ್ಟಿಲ್ಲ. ಜಿಎಸ್‌ಟಿ ಪಾಲು ಕೊಡುವಲ್ಲೂ ವಿಳಂಬ ಮಾಡುತ್ತಿದೆ. ಇದೆಲ್ಲದರ ಕುರಿತು ಹಕ್ಕೋತ್ತಾಯ ಮಂಡಿಸಿ, ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ರೈತರ ಮಕ್ಕಳಿಗೆ ಹೆಣ್ಣು ಸಿಗದಿರುವುದು ಸಾಮಾಜಿಕ ಪಿಡುಗಾಗಿ ಪರಿಣಮಿಸುತ್ತಿದೆ. ಈ ಕುರಿತು ರೈತ ಸಂಘವು ಗಂಭೀರವಾದ ಚಿಂತನೆ ನಡೆಸಿದ್ದು, ಇದಕ್ಕೆ ಪರಿಹಾರವಾಗಿ ಸರ್ಕಾರಕ್ಕೆ ಸೂಕ್ತ ಸಮಯದಲ್ಲಿ ಸಭೆ ನಡೆಸಿ ಸಲಹೆಗಳನ್ನು ಸಂಗ್ರಹಿಸಿ, ಅದನ್ನು ಸರ್ಕಾರಕ್ಕೆ ನೀಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು

ಸಂಘದ ರಾಜ್ಯ ಕಾರ್ಯದರ್ಶಿ ಗೋಪಾಲ್ ಮಾದೇಗೌಡ, ವಿವಿಧ ಜಿಲ್ಲೆಗಳ ಮುಖಂಡರಾದ ರಮ್ಯ ರಾಮಣ್ಣ, ಚಂದ್ರಶೇಖರ್, ಲಕ್ಷ್ಮೀನಾರಾಯಣ ರೆಡ್ಡಿ, ಶಂಕರಪ್ಪ, ನಾರಾಯಣ ಸ್ವಾಮಿ, ಮುನಿರಾಜು, ನಾಗರತ್ನಮ್ಮ, ರಾಮೇಗೌಡ, ಲೋಕೇಶ್, ಶಿವಲಿಂಗಯ್ಯ, ಎಸ್.ಪಿ. ಮಠ ಹಾಗೂ ಇತರರು ಇದ್ದರು.

ಮೇಕೆದಾಟು ಯೋಜನೆ ಜಾರಿಗೆ ಆಗ್ರಹ

‘ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆಗಾಗಿ ಪಾದಯಾತ್ರೆ ಮಾಡಿದ ಕಾಂಗ್ರೆಸ್ ನಾಯಕರು ಅಧಿಕಾರಕ್ಕೇರುತ್ತಿದ್ದಂತೆ ಯೋಜನೆಯನ್ನು ಮರೆತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ಯೋಜನೆಗೆ ರಾಜ್ಯ ಸರ್ಕಾರ ಆದಷ್ಟು ಬೇಗ ಚಾಲನೆ ನೀಡಬೇಕು’ ಎಂದು ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಕೆ. ಮಲ್ಲಯ್ಯ ಆಗ್ರಹಿಸಿದರು. ‘ಬೆಂಗಳೂರು–ಮೈಸೂರು ರಸ್ತೆಯಲ್ಲಿರುವ ರೇಷ್ಮೆ ಗೂಡಿನ ಮಾರುಕಟ್ಟೆ ಕಿರಿದಾಗಿದೆ. ಅಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲ. ಹಾಗಾಗಿ ಚನ್ನಪಟ್ಟಣ ಬಳಿಯ ಹೊಸ ಮಾರುಕಟ್ಟೆ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ ಇಲ್ಲಿನ ಮಾರಕಟ್ಟೆಯನ್ನು ಅಲ್ಲಿಗೆ ಸ್ಥಳಾಂತರಿಸಬೇಕು. ಸರ್ಕಾರವು ಬರದ ಹಿನ್ನೆಲೆಯಲ್ಲಿ ಬೆಳೆ ಹಾನಿ ಪರಿಹಾರವನ್ನು ಕೇವಲ ₹2 ಸಾವಿರ ನೀಡುತ್ತಿದೆ. ಇದರ ಬದಲು ಹಾನಿ ಪ್ರಮಾಣಕ್ಕೆ ತಕ್ಕಂತೆ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT