ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಎಪಿ ಸ್ಪತಂತ್ರ ಸ್ಪರ್ಧೆ

Published 2 ಜುಲೈ 2024, 5:24 IST
Last Updated 2 ಜುಲೈ 2024, 5:24 IST
ಅಕ್ಷರ ಗಾತ್ರ

ರಾಮನಗರ: ‘ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಎಪಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ, ಸ್ವತಂತ್ರವಾಗಿ ಕಣಕ್ಕಿಳಿಯಲಿದೆ’ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಟಿ. ನಾಗಣ್ಣ ಹೇಳಿದರು.

‘ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲಾಗುತ್ತಿದೆ. ಅದಕ್ಕಾಗಿ, ಎಲ್ಲಾ ಜಿಲ್ಲೆಗಳಲ್ಲಿ ಪಕ್ಷಕ್ಕೆ ನೂತನ ಪದಾಧಿಕಾರಿಗಳನ್ನು ಆಐ್ಕೆ ಮಾಡಿ, ಜವಾಬ್ದಾರಿ ನೀಡಲಾಗುತ್ತಿದೆ. ಅದರಂತೆ, ರಾಮನಗರ ಜಿಲ್ಲೆಯಲ್ಲೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಈಗಿನಿಂದಲೇ ಚುನಾವಣಾ ತಯಾರಿ ಆರಂಭಿಸುವಂತೆ ಸೂಚನೆ ನೀಡಲಾಗಿದೆ’ ಎಂದು ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅಭಿವೃದ್ಧಿ ಬಿಟ್ಟು ಹಿಂದುತ್ವದ ಆಧಾರದ ಮೇಲೆಯೇ ರಾಜಕಾರಣ ಮಾಡಿಕೊಂಡು ಬಂದಿದ್ದ ಬಿಜೆಪಿಗೆ, ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ರಾಮ ಮಂದಿರವಿರುವ ಕ್ಷೇತ್ರವಷ್ಟೇ ಅಲ್ಲದೆ, ವಿವಿಧ ಪುಣ್ಯ ಸ್ಥಳಗಳಿರುವ ಕ್ಷೇತ್ರಗಳಲ್ಲಿಯು ಬಿಜೆಪಿ ಸೋತಿರುವುದು, ಜನ ಇವರ ಕೋಮುವಾದ ರಾಜಕಾರಣಕ್ಕೆ ಎಷ್ಟು ಬೇಸತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ಸರ್ವಾಧಿಕಾರಿ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿನ ಅಂತರವೂ ಕಡಿಮೆಯಾಗಿರುವುದು, ಅವರ ವರ್ಚಸ್ಸು ಕುಸಿದಿರುವುದನ್ನು ತೋರಿಸುತ್ತದೆ. ಇದೇ ಕಾರಣಕ್ಕೆ ಜನ ಮೋದಿ ಅವರ 400 ಸೀಟು ಗುರಿಗೆ ಕ್ಯಾರೇ ಎನ್ನದೆ, ದೇಶದಲ್ಲಿ ಪ್ರಬಲ ವಿರೋಧ ಪಕ್ಷಕ್ಕೆ ಮಣೆ ಹಾಕಿದ್ದಾರೆ. ಸರ್ವಾಧಿಕಾರಕ್ಕೆ ತಡೆಯೊಡ್ಡುವುದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕಾಂಗ್ರೆಸ್‌ಗೆ ಜೊತೆ ಕೈ ಜೋಡಿಸಿತ್ತು’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಬೈರೇಗೌಡ,  ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ ಕುಶಲಸ್ವಾಮಿ, ಮುಖಂಡರಾದ ನಂಜಪ್ಪ, ಕಾಳೇಗೌಡ, ಮಂಚೇಗೌಡ, ಎನ್.ಎಂ. ಹರೀಶ್, ಶಿಲ್ಪ, ಬಾಬು, ವೆಂಕಟೇಶ್, ಅಬ್ಬುಲ್ಲಾ ಖಾನ್, ಕಿರಣ್‌ಕುಮಾರ್, ನಾಗರತ್ನ, ಗಂಗಾಧರ್, ಹಕೀಮ್ ಪಾಷ, ಮೋಹನ್ ಹಾಗೂ ಇತರರು ಇದ್ದರು.

ಬೈರೇಗೌಡ ಪುನರಾಯ್ಕೆ ಎಎಪಿ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬೈರೇಗೌಡ ಅವರು ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಬಾಬು ಸಂಘಟನಾ ಕಾರ್ಯದರ್ಶಿಯಾಗಿ ವೆಂಕಟೇಶ್ ಕಾರ್ಯದರ್ಶಿಯಾಗಿ ಗಿರೀಶ್ ಮಹಿಳಾ ಘಟಕದ ಅಧ್ಯಕ್ಷರಾಗಿ ಶಿಲ್ಪ ರಾಮನಗರ ತಾಲ್ಲೂಕು ಅಧ್ಯಕ್ಷರಾಗಿ ರಾಮಕೃಷ್ಣಯ್ಯ ಚನ್ನಪಟ್ಟಣ ಅಧ್ಯಕ್ಷರಾಗಿ ಮಂಚೇಗೌಡ ಮಾಗಡಿ ಅಧ್ಯಕ್ಷರಾಗಿ ಹರೀಶ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಎಲ್ಲರಿಗೂ ನೇಮಕಾತಿ ಪತ್ರ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT