ಶುಕ್ರವಾರ, ಮಾರ್ಚ್ 31, 2023
22 °C
ಪರೋಪಜೀವಿಗಳ ಮೂಲಕ ನಿಯಂತ್ರಣಕ್ಕೆ ಮುಂದಾದ ತೋಟಗಾರಿಕೆ ಇಲಾಖೆ

ರಾಮನಗರ: ತೆಂಗಿಗೆ ಕಪ್ಪುಮೂತಿ ಹುಳುವಿನ ಬಾಧೆ

ಆರ್. ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಜಿಲ್ಲೆಯ ‌ಪ್ರಮುಖ ಬೆಳೆಗಳಲ್ಲಿ ಒಂದಾದ ತೆಂಗಿಗೆ ಕಪ್ಪುಮೂತಿ ಹುಳುವಿನ ಬಾಧೆ ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯು ಪರೋಪಜೀವಿ ಕೀಟಗಳ ಮೊರೆ ಹೋಗಿದೆ.

ಜಿಲ್ಲೆಯ 35,500 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಮಾವು ನಂತರದ ಪ್ರಮುಖ ತೋಟಗಾರಿಕೆ ಬೆಳೆ ಇದಾಗಿದೆ. ಈ ಪೈಕಿ 1000–1200 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿನ ತೋಟಕ್ಕೆ ಈಗಾಗಲೇ ಈ ಕಪ್ಪುಹುಳು ದಾಂಗುಡಿ ಇಟ್ಟಿದೆ. ಹುಳುಗಳು ತೆಂಗಿನ ಗರಿಗಳನ್ನು ಮೇಯುವ ಕಾರಣ ಮರಗಳು ಒಣಗಿದಂತೆ ಕಂಡುಬರುತ್ತಿವೆ. ಇದರಿಂದಾಗಿ ಮರಗಳಲ್ಲಿ ಹಸಿರು ಕಡಿಮೆಯಾಗಿ ಆಹಾರೋತ್ಪಾದನೆ ಕುಂಠಿತಗೊಳ್ಳುವ ಕಾರಣ ಒಟ್ಟಾರೆ ಇಳುವರಿ ಕುಸಿತ ಕಾಣುತ್ತಿದೆ ಎನ್ನುತ್ತಾರೆ ಕೃಷಿ ತಜ್ಞರು.

ಎಲ್ಲೆಲ್ಲಿ ತೊಂದರೆ: ಜಿಲ್ಲೆಯ ನಾಲ್ಕೂ ತಾಲ್ಲೂಕಿನಲ್ಲಿಯೂ ಈ ರೋಗ ಬಾಧೆ ಕಾಣಿಸಿಕೊಂಡಿದೆ. ಅದರಲ್ಲಿಯೂ ರಾಮನಗರ ತಾಲ್ಲೂಕಿನ ಬೈರಮಂಗಲ ಸುತ್ತಮತ್ತ, ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿಪುರ ಹೋಬಳಿ, ಕನಕಪುರ ತಾಲ್ಲೂಕಿನ ಕೊಳ್ಳಿಗನಹಳ್ಳಿ ಸುತ್ತಲಿನ ತೆಂಗಿನ ತೋಟಗಳಲ್ಲಿ ಈ ಸೋಂಕು ಉಲ್ಬಣಗೊಳ್ಳುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಏನಿದು ಕಪ್ಪುಹುಳು: ಕಪ್ಪುಮೂತಿ ಹುಳು ಅರ್ಥಾತ್‌ ಕ್ಯಾಟರಿಪಿಲ್ಲರ್ ಚಿಟ್ಟೆಗಳಂತೆ ಹಾರಿ ಬಂದು ತೆಂಗಿನ ಎಲೆಗಳ ತಳಭಾಗದಲ್ಲಿ ತನ್ನ ಹಿಕ್ಕೆ ಹಾಗೂ ನೂಲಿನಿಂದ ನಿರ್ಮಿಸಿದ ಸುರಂಗಗಳಲ್ಲಿ ವಾಸಿಸುತ್ತದೆ. ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಇದರಿಂದ ಹಾನಿ ಹೆಚ್ಚಾದಾಗ ಮರಗಳು ಸುಟ್ಟಂತೆ ಕಂಡು
ಬರುತ್ತವೆ.

ಸಸ್ಯದ ದ್ಯುತಿ ಸಂಶ್ಲೇಷಣೆ ನಡೆಯುವ ಪ್ರಮುಖ ಭಾಗವಾದ ಎಲೆಯನ್ನೇ ಹಾಳುಮಾಡಿ ಮರದಿಂದ ಮರಕ್ಕೆ, ತೋಟದಿಂದ ತೋಟಕ್ಕೆ ರೋಗ ಸರಾಗವಾಗಿ ಹಬ್ಬುತ್ತದೆ. ಸಾಮಾನ್ಯವಾಗಿ ವರ್ಷಕ್ಕೆ 5 ಸಂತತಿಗಳನ್ನು ಪೂರ್ಣಗೊಳಿಸುವ ಈ ಹುಳದ ಹತೋಟಿ ಕೈಗೊಳ್ಳದಿದ್ದಲ್ಲಿ ಶೇ 60ರವರೆಗೂ ತೆಂಗಿನ ಇಳುವರಿಯಲ್ಲಿ ಕುಂಠಿತ ಆಗಬಹುದು ಎಂದು ವಿಜ್ಞಾನಿಗಳು
ಎಚ್ಚರಿಸುತ್ತಾರೆ.

ಪರಿಹಾರಗಳೇನು?: ಜಿಲ್ಲೆಯ ತೋಟಗಳಲ್ಲಿ ಈ ಕೀಟಬಾಧೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಹೀಗಾಗಿ ಕೆಲವೇ ಗರಿಗಳಲ್ಲಿ ಕಂಡು ಬಂದಾಗ ಬಿದ್ದ ಗರಿಗಳು ಇತರೆ ಕಸ ಕಡ್ಡಿಗಳನ್ನು ಸಂಗ್ರಹಿಸಿ ಸ್ವಚ್ಛ ಮಾಡಬೇಕು. ಹುಳು ಕಂಡುಬರುವ ಗರಿ ಅಥವಾ ಅದರ ಭಾಗಗಳನ್ನು ಮಾತ್ರ ಕತ್ತರಿಸಿ ಸುಡಬಹುದು ಎಂಬುದು ವಿಜ್ಞಾನಿಗಳ ಸಲಹೆ.

ಮುಳ್ಳಿಗೆ ಮುಳ್ಳಿನ ಮದ್ದು: ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು ಎಂಬ ಮಾತಿನಂತೆ ತೆಂಗಿಗೆ ಕಾಟ ಕೊಡುತ್ತಿರುವ ಕೀಟಗಳನ್ನು ಮತ್ತೊಂದು ಕೀಟದಿಂದಲೇ ನಿಯಂತ್ರಣಕ್ಕೆ ತರುವ ಕ್ರಮಕ್ಕೆ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮುಂದಾಗಿದ್ದಾರೆ. ಕೀಟಬಾಧೆಗೆ ರಾಸಾಯನಿಕ ಬಳಕೆಗಿಂತ ಜೈವಿಕ ತಂತ್ರಕ್ಕೆ ಹೆಚ್ಚು ಒತ್ತು
ನೀಡಲಾಗುತ್ತಿದೆ.

'ಅಂಥೋಕೋರಿಡ್‍ಬಗ್' ಎಂಬ ಪರ ಭಕ್ಷಕಗಳನ್ನು ಸಸ್ಯಕಾಶಿ ಲಾಲ್ ಬಾಗ್‍ನಿಂದ ಉಚಿತವಾಗಿ ತಂದು ಬಿಡುಗಡೆಗೊಳಿಸುವ ವಿಧಾನದಲ್ಲಿ ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆದಿದೆ. ಈ ಪರಾವಲಂಬಿ ಹುಳುಗಳು ಪರಾವಲಂಬಿ ಹುಳುಗಳನ್ನು ತೆಂಗಿನ ಜತೆಗೆ ಬಾದೆ ನೀಡುವ ಕೀಟದ ಮೊಟ್ಟೆಗಳನ್ನು ತಿಂದು ಹುಳುಗಳ ಸಂತಾನೋತ್ಪತ್ತಿ ನಿಯಂತ್ರಿಸಲಿವೆ.

ಕಪ್ಪುಹುಳುವಿನ ದೇಹದ ಮೊಟ್ಟೆಗಳ ಮೇಲೆ ಮೊಟ್ಟೆಯಿಟ್ಟು ಜೀವನ ಚಕ್ರ ನಡೆಸಿ ಅದರ ಸಂತತಿ ಕೊಲ್ಲುವ ಗೋನಿಯೋಜಸ್ ನೆಫಾಂಟಿಡಿಸ್ ಕೀಟಗಳನ್ನು ತರಿಸಲಾಗುತ್ತಿದೆ. ಅಧಿಕಾರಿಗಳು ಹಾಗೂ ಕೃಷಿ ತಜ್ಞರು ರೈತರ ಜೊತೆಗೂಡಿ ಹಾನಿಯಾಗಿರುವ ಪ್ರದೇಶಗಳಿಗೆ ಕೀಟಗಳನ್ನು ಬಿಡುತ್ತಿದ್ದಾರೆ. ಹೀಗೆ ಒಟ್ಟಾರೆ 3 ಲಕ್ಷದಷ್ಟು ಕೀಟಗಳನ್ನು ತೋಟಗಳಿಗೆ ಬಿಡಲು ಯೋಜಿಸಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವವನ್ನೂ ಸಲ್ಲಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು