ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆಯಲ್ಲಿ ಹೊಸ ಅನ್ವೇಷಣೆ: ರೈತ ಮಹಿಳೆ ಸಾಧನೆಗೆ ಮೆಚ್ಚುಗೆ

ಎಚ್.ಎಂ. ರಮೇಶ್
Published 21 ಏಪ್ರಿಲ್ 2024, 6:01 IST
Last Updated 21 ಏಪ್ರಿಲ್ 2024, 6:01 IST
ಅಕ್ಷರ ಗಾತ್ರ

ಚನ್ನಪಟ್ಟಣ: ಹೈನುಗಾರಿಕೆ ರೈತರ ಪ್ರಮುಖ ಉಪಕಸುಬು. ಹೈನುಗಾರಿಕೆಯನ್ನು ನಂಬಿ ಬದುಕು ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿರುವ ಹಲವಾರು ಕುಟುಂಬಗಳು ನಮ್ಮ ಕಣ್ಣ ಮುಂದಿವೆ. ಹೈನುಗಾರಿಕೆಯಲ್ಲಿ ರೈತ ಮಹಿಳೆಯರು ಸಹ ತೊಡಗಿಕೊಂಡು ಕ್ಷೀರಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ತಾಲ್ಲೂಕಿನ ಭೂಹಳ್ಳಿ ಗ್ರಾಮದ ರೈತ ಮಹಿಳೆ ಸುಜಾತ ವೆಂಕಟೇಶ್.

ಗ್ರಾಮದ ರೈತ ಮಹಿಳೆ ಸುಜಾತ ತನ್ನ ಪತಿ ವೆಂಕಟೇಶ್, ಪುತ್ರ ಹೇಮಂತ್ ಸಹಕಾರದೊಂದಿಗೆ ಇಂದು ಹೈನುಗಾರಿಕೆಯಲ್ಲಿ ತನ್ನದೇ ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ. ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಹೈನುಗಾರಿಕೆಯಲ್ಲಿ ದಕ್ಷಿಣ ಭಾರತದಲ್ಲೆ ಅತಿ ಹೆಚ್ಚು ಹಾಲು ಉತ್ಪಾದಿಸುವ ಸಂಘದ ಸದಸ್ಯೆ ಎಂಬ ಗೌರವಕ್ಕೂ ಇವರು ಪಾತ್ರರಾಗಿದ್ದಾರೆ.

ಮೂಲತಃ ರೈತಾಪಿ ಕುಟುಂಬದ ಸುಜಾತ ಅವರಿಗೆ ಏಳು ಎಕರೆ ಜಮೀನು ಇದೆ. ತಮ್ಮ ಜಮೀನಿನಲ್ಲಿ ತೆಂಗು, ವೀಳ್ಯದೆಲೆ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಇವರ ಕೈ ಹಿಡಿದಿರುವುದು ಮಾತ್ರ ಹೈನುಗಾರಿಕೆ.

ಕಳೆದ ಹತ್ತು ವರ್ಷಗಳ ಹಿಂದೆ ಕೇವಲ ಎರಡು ರಾಸುಗಳಿಂದ ಇವರ ಹೈನುಗಾರಿಕೆ ಆರಂಭಗೊಂಡು ಈಗ 15ಕ್ಕೂ ಹೆಚ್ಚು ರಾಸುಗಳು ಇವರ ಬಳಿ ಇವೆ. ಈ ರಾಸುಗಳಿಂದ ಪ್ರತಿನಿತ್ಯ 250ಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದನೆ ಮಾಡಿ ಮಾದರಿ ರೈತ ಮಹಿಳೆ ಎನಿಸಿಕೊಂಡಿದ್ದಾರೆ.

ತಮ್ಮ ಜಮೀನಿನಲ್ಲಿ ಸೀಮೆಹಸು ಫಾರಂ ನಿರ್ಮಿಸಿಕೊಂಡಿರುವ ಇವರ ಬಳಿ ಎಚ್.ಎಫ್, ಜೆರ್ಸಿ, ಹಾಲ್ ಬ್ಲಾಕ್ ತಳಿಯ 14 ರಾಸುಗಳಿವೆ. ಜೊತೆಗೆ ನಾಲ್ಕು ಪಡ್ಡೆ ಕರುಗಳಿವೆ. ಹೈನುಗಾರಿಕೆಯನ್ನು ಪ್ರಮುಖ ಕಸುಬಾಗಿಸಿಕೊಂಡಿರುವ ಇವರು ಇದರಲ್ಲಿ ಲಾಭ ಕಾಣಬಹುದು, ರೈತರು ತಮ್ಮ ಬದುಕನ್ನು ಹಸನಾಗಿಸಿಕೊಳ್ಳಬಹುದು ಎಂಬುದನ್ನು ಸಾಧಿಸಿ ತೋರಿಸಿಕೊಟ್ಟಿದ್ದಾರೆ. ತಮ್ಮ ರಾಸುಗಳಿಗೆ ಬೇಕಾದ ಮೇವನ್ನು ತಮ್ಮ ಜಮೀನಿನಲ್ಲಿಯೆ ಇವರು ಬೆಳೆದುಕೊಳ್ಳುವುದರಿಂದ ಇವರ ಹೈನುಗಾರಿಕೆಗೆ ಯಾವುದೇ ತೊಂದರೆ ಎದುರಾಗಿಲ್ಲ.

ಇವರು ಹೈನುಗಾರಿಕೆಗೆ ವೈಜ್ಞಾನಿಕತೆಗಳನ್ನು ಅಳವಡಿಸಿಕೊಂಡಿರುವುದು ಇವರ ಕ್ಷೀರ ಸಾಧನೆಗೆ ಪ್ರಮುಖ ಕಾರಣವಾಗಿದೆ. ಸುಸಜ್ಜಿತ ಕೊಟ್ಟಿಗೆಯಲ್ಲಿ ರಾಸುಗಳಿಗೆ ರಬ್ಬರ್ ನೆಲಹಾಸು, ರಾಸುಗಳಿಗೆ ಬೇಕಾದ ಮೇವನ್ನು ಕತ್ತರಿಸಲು ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರದ ಮೂಲಕ ಹಾಲು ಶೇಖರಣೆ ಇತ್ಯಾದಿಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಆಧುನಿಕ ತಂತ್ರಜ್ಞಾನದಿಂದ ಇವರ ಹೈನುಗಾರಿಕೆಗೆ ಶ್ರಮದ ಉಳಿತಾಯ ಹಾಗೂ ಸಮಯದ ಉಳಿತಾಯವಾಗುತ್ತಿದೆ.

ಹೈನುಗಾರಿಕೆಯಿಂದ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಸಾಧಿಸಿ ತೋರಿಸಿರುವ ರೈತ ಮಹಿಳೆ ಸುಜಾತ ವೆಂಕಟೇಶ್ ಇತರ ಮಹಿಳೆಯರಿಗೆ ಆದರ್ಶವಾಗಿದ್ದಾರೆ. ಮಹಿಳೆಯರು ಎಂದರೆ ಮೂಗುಮುರಿಯುವವರ ಮಧ್ಯೆ ಸಾಧನೆ ಮಾಡಿರುವ ಇವರು ಮಹಿಳಾ ಸ್ವಾವಲಂಬನೆಗೆ ಹಿಡಿದ ಕೈಗನ್ನಡಿಯಂತಿದ್ದಾರೆ. ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಕೊಂಡು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಇವರ ಕಿವಿಮಾತಾಗಿದೆ.

'ರಾಸು ಸಾಕಾಣಿಕೆಯಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲವಿದೆ. ನಮ್ಮ ಕುಟುಂಬದ ಎಲ್ಲರೂ ಹೈನುಗಾರಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇವೆ. ಬಮೂಲ್ ಒಕ್ಕೂಟದಿಂದಲೂ ಹಲವು ಸವಲತ್ತುಗಳನ್ನು ಪಡೆದುಕೊಂಡಿದ್ದೇವೆ. ಹೈನುಗಾರಿಕೆಯಲ್ಲಿ ಅಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ ಶ್ರಮ ಹಾಗೂ ಬಂಡವಾಳ ಕಡಿಮೆಯಾಗಿ ಲಾಭ ಹೆಚ್ಚಾಗುತ್ತದೆ.' - ಸುಜಾತ ವೆಂಕಟೇಶ್, ರೈತ ಮಹಿಳೆ, ಭೂಹಳ್ಳಿ.

ಬೆಸ್ಟ್ ವುಮೆನ್ ಡೈರಿ ಫಾರ್ಮರ್ ಪ್ರಶಸ್ತಿ

ಸುಜಾತ ವೆಂಕಟೇಶ್ ಅವರ ಹೈನುಗಾರಿಕೆಯ ಸಾಧನೆಗೆ 2023ರಲ್ಲಿ ಇಂಡಿಯನ್ ಡೈರಿ ಅಸೋಸಿಯೇಷನ್ ವತಿಯಿಂದ ‘ಬೆಸ್ಟ್ ವುಮೆನ್ ಡೈರಿ ಫಾರ್ಮರ್’ ಪ್ರಶಸ್ತಿ ದೊರೆತಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ಇವರು ಈ ಪ್ರಶಸ್ತಿ ಪಡೆದಿದ್ದಾರೆ.

ಹೈನುಗಾರಿಕೆಯಲ್ಲಿ ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಹಾಲು ಉತ್ಪಾದನೆ ಮಾಡಿದ್ದಾರೆ ಎನ್ನುವ ಸಾಧನೆಗೆ ಇವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಗೆ ಬಮುಲ್ ವತಿಯಿಂದ ಇವರನ್ನು ಆಯ್ಕೆ ಮಾಡಲಾಗಿತ್ತು. ಇವರ ಈ ಸಾಧನೆಗೆ ಬಮುಲ್ ಒಕ್ಕೂಟದಿಂದ, ಸ್ಥಳೀಯ ಸಂಘ–ಸಂಸ್ಥೆಗಳಿಂದಲೂ ಹಲವಾರು ಗೌರವ ಪುರಸ್ಕಾರಗಳು ದೊರಕಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT