ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆಯ ನಿರೀಕ್ಷೆಯಲ್ಲಿ ಹೋಟೆಲ್‌ ಉದ್ಯಮ

ಮಾಲೀಕರಿಂದ ಸುರಕ್ಷತೆಗೆ ಒತ್ತು; ನಿಯಮಗಳ ಪಾಲನೆ
Last Updated 10 ಜೂನ್ 2020, 14:38 IST
ಅಕ್ಷರ ಗಾತ್ರ

ರಾಮನಗರ: ಲಾಕ್‌ಡೌನ್‌ ಸಂಕಷ್ಟಕ್ಕೆ ನಲುಗಿದ್ದ ಹೋಟೆಲ್‌ ಉದ್ಯಮ ಇನ್ನೂ ಚೇತರಿಸಿಕೊಂಡಿಲ್ಲ. ಈ ನಡುವೆ ಗ್ರಾಹಕರಲ್ಲಿ ಭರವಸೆ ಮೂಡಿಸಲು ಹೋಟೆಲ್‌ ಮಾಲೀಕರು ಹೊಸ ಪ್ರಯತ್ನಗಳನ್ನೂ ಮಾಡತೊಡಗಿದ್ದಾರೆ.

ಮಾರ್ಚ್‌ 23ರ ನಂತರ ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮ ಸಂಪೂರ್ಣ ಬಂದ್ ಆಗಿತ್ತು. ಆದರೆ ಇದೇ 8ರಿಂದ ರಾಜ್ಯ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿ ಹೋಟೆಲ್‌ ಆರಂಭಕ್ಕೆ ಅನುಮತಿ ನೀಡಿತ್ತು. ಜಿಲ್ಲೆಯಲ್ಲಿಯೂ ಹೋಟೆಲ್‌ಗಳು ಆರಂಭ ಆಗಿದೆಯಾದರೂ ಗ್ರಾಹಕರಿಗೆ ಇನ್ನೂ ಸುರಕ್ಷತೆಯ ಭರವಸೆ ಮೂಡಿಲ್ಲ. ಹೀಗಾಗಿ ವ್ಯಾಪಾರ ಪೂರ ಕಳೆಗುಂದಿದೆ ಎನ್ನುತ್ತಾರೆ ಹೋಟೆಲ್‌ಗಳ ಮಾಲೀಕರು.

ವಿನೂತನ ಪ್ರಯತ್ನ: ಕೆಲವು ಹೋಟೆಲ್‌ಗಳು ಗ್ರಾಹಕರಿಗೆ ಸುರಕ್ಷತಾ ಕ್ರಮಗಳನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡುತ್ತಿವೆ. ಶುಚಿತ್ವಕ್ಕೆ ಮೊದಲ ಆದ್ಯತೆ ನೀಡತೊಡಗಿವೆ. ರಾಮನಗರದ ಹಳೇ ಬಸ್‌ ನಿಲ್ದಾಣ ವೃತ್ತದಲ್ಲಿರುವ ವಿಷ್ಣು ಭವನ ಹೋಟೆಲ್ ಮಾಲೀಕರು ಹ್ಯಾಂಡ್ ಸಾನಿಟೈಜರ್ ಬಳಕೆ ಜೊತೆಗೆ ಅಡಕೆ ತಟ್ಟೆಯಲ್ಲಿ ತಿಂಡಿ ತಿನಿಸುಗಳನ್ನು ಕೊಡುತ್ತಿದ್ದಾರೆ. ಎದುರು ಬದುರು ಮತ್ತು ಅಕ್ಕ ಪಕ್ಕ ಕೂರುವ ಪ್ರತಿ ಗ್ರಾಹಕರ ನಡುವೆ ಪಾರದರ್ಶಕ ಫೈಬರ್ ಪರದೆಯನ್ನು ಪ್ರತಿ ಟೈಬಲ್‌ನಲ್ಲಿ ಅಳವಡಿಸಲಾಗಿದೆ. ಯಾವುದೇ ಗ್ರಾಹಕ ಅಕ್ಕಪಕ್ಕದಲ್ಲಿ ಕುಳಿತರೂ ಟೇಬಲ್ ಮೇಲಿರುವ ಪಾರದರ್ಶಕ ಫೈಬರ್ ಪರದೆ ಇವರನ್ನು ಯಾವುದೇ ಸೋಂಕು ಪಕ್ಕದಲ್ಲಿ ಇಲ್ಲವೇ ಎದುರಿಗೆ ಕುಳಿತವರಿಗೆ ತಗುಲದಂತೆ ಕ್ರಮ ವಹಿಸಿದ್ದಾರೆ. ಇದರ ಜತೆಗೆ, ಪ್ರತಿ ಬಾರಿ ಊಟವಾದ ನಂತರ ಟೇಬಲ್ ಸ್ವಚ್ಛಗೊಳಿಸುವ ವೇಳೆ ಈ ಪರದೆಯನ್ನು ಸಹ ಸ್ಯಾನಿಟೈಜ್ ಮಾಡಲಾಗುತ್ತದೆ.

ಜಿಲ್ಲೆಯ ಇನ್ನೂ ಸಾಕಷ್ಟು ಹೋಟೆಲ್‌ಗಳಲ್ಲೂ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಮೂಲಕ ಹೋಟೆಲ್ ಉದ್ಯಮವನ್ನು ಮತ್ತೆ ಹಳಿಗೆ ತರುವ ಪ್ರಯತ್ನ ನಡೆದಿದೆ.

ನಿಯಮಗಳೇನು: ಹೋಟೆಲ್‌ನಲ್ಲಿ ಕೂರುವ ಮತ್ತು ನಿಲ್ಲುವ ಸಾಮರ್ಥ್ಯದ ಶೇ.50ರಷ್ಟು ಮಂದಿಗಷ್ಟೇ ಹೋಟೆಲ್ ಪ್ರವೇಶಕ್ಕೆ ಅವಕಾಶ ನೀಡಬೇಕು, ಸ್ಯಾನಿಟೈಜರ್ ಕಡ್ಡಾಯಗೊಳಿಸಬೇಕು, ಹೋಟೆಲ್ ಪ್ರವೇಶ ಮಾಡುವ ಪ್ರತಿ ಗ್ರಾಹಕನ ದೇಹದ ಉಷ್ಣಾಂಶವನ್ನು ಪರೀಕ್ಷೆ ಮಾಡಿಯೇ ಒಳ ಬಿಡಬೇಕು. ಹೋಟೆಲ್‌ನ ಆಸನ ವ್ಯವಸ್ಥೆಯಲ್ಲಿಯೂ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎನ್ನುವ ಸೂಚನೆಯನ್ನು ಜಿಲ್ಲಾಡಳಿತವು ಹೋಟೆಲ್‌ ಮಾಲೀಕರಿಗೆ ನೀಡಿದೆ.

ಜಿಲ್ಲೆಯ ಪ್ರಮುಖ ಹೋಟೆಲ್‌ಗಳಲ್ಲಿ ಈ ನಿಯಮ ಪಾಲನೆಯಾಗುತ್ತಿದ್ದು, ಒಂದು ಟೇಬಲ್‌ನಲ್ಲಿ ಇಬ್ಬರಿಗೇ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೆ, ಹೋಟೆಲ್ ಪ್ರವೇಶಿಸುವ ಪ್ರತಿ ಗ್ರಾಹಕನಿಗೂ ಸ್ಯಾನಿಟೈಜರ್ ನೀಡಲಾಗುತ್ತಿದೆ. ಬಹುತೇಕ ಹೋಟೆಲ್‌ಗಳಲ್ಲಿ ಅಡಿಕೆ ತಟ್ಟೆಗಳು ಮತ್ತು ಬಳಸಿ ಬಿಸಾಡುವ ಪೇಪರ್ ಲೋಟಗಳನ್ನೇ ಬಳಸುವ ಮೂಲಕ ಗ್ರಾಹಕರಿಗೆ ಕರೊನಾ ಭೀತಿ ಇಲ್ಲದಂತೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಸ್ಥಳೀಯವಾಗಿ ಹೆಚ್ಚಿನ ಹೋಟೆಲ್‌ಗಳಲ್ಲಿ ಬಿಸಿ ನೀರು ಬಳಕೆ ಮಾಡಿ ಪಾತ್ರೆಗಳನ್ನು ತೊಳೆಯುವ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ಅಡಕೆ ತಟ್ಟೆಗಳ ಮೊರೆ ಹೋಗಿದ್ದಾರೆ.

ಉದ್ಯೋಗದ ನಿರೀಕ್ಷೆಯಲ್ಲಿ

ಜಿಲ್ಲೆಯಲ್ಲಿ ಹೋಟೆಲ್‌ ಉದ್ಯಮವನ್ನೇ ನಂಬಿಕೊಂಡು ಸಾವಿರಾರು ಮಂದಿ ಬದುಕು ಕಟ್ಟಿಕೊಂಡಿದ್ದರು. ಅದರಲ್ಲೂ ಸಪ್ಲೈಯರ್‌ಗಳು, ಅಡುಗೆ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ... ಹೀಗೆ ಸಾಕಷ್ಟು ಮಂದಿಗೆ ಹೋಟೆಲ್‌ ಉದ್ಯಮ ನೆಲೆ ಒದಗಿಸಿತ್ತು. ಆದರೆ ಕೊರೊನಾ ಕಾರಣಕ್ಕೆ ಇವೆರೆಲ್ಲ ದುಡಿಮೆಯಿಂದ ವಂಚಿತರಾಗಿದ್ದರು. ಇದೀಗ ಹೋಟೆಲ್‌ಗಳು ಮತ್ತೆ ಆರಂಭವಾಗಿವೆ. ಆದರೆ ಗ್ರಾಹಕರ ಕೊರತೆಯ ಕಾರಣ ಪೂರ್ಣ ಪ್ರಮಾಣದಲ್ಲಿ ಕಾರ್ಮಿಕರಿಗೆ ಉದ್ಯೋಗ ದೊರೆಯುತ್ತಿಲ್ಲ. ಈ ಉದ್ಯಮ ಚೇತರಿಕೆ ಕಂಡರಷ್ಟೇ ಇವರಿಗೆಲ್ಲ ಉದ್ಯೋಗವೂ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT