ಬುಧವಾರ, ಜನವರಿ 22, 2020
28 °C
ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ l ದಶಕದಿಂದ ನಡೆಯುತ್ತಿರುವ ಪ್ರಮುಖ ಒತ್ತಾಯ

ರಾಮನಗರ ಬದಲಿಗೆ ‘ನವ ಬೆಂಗಳೂರು’ಹೆಸರು ಮತ್ತೆ ಮುನ್ನೆಲೆಗೆ: ವ್ಯಾಪಕ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆ ಹೆಸರನ್ನು ರಾಮನಗರದ ಬದಲು ‘ನವ ಬೆಂಗಳೂರು’ ಎಂದು ಬದಲಿಸಬೇಕೆನ್ನುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ಸರ್ಕಾರ ಜಿಲ್ಲೆಯ ಮರು ನಾಮಕರಣಕ್ಕೆ ಮುಂದಾಗಿದೆ ಎನ್ನುವ ಸಂಗತಿ ಇದಕ್ಕೆ ಕಾರಣ.

ಜಾಗತಿಕ ಹೂಡಿಕೆದಾರರನ್ನು ಸೆಳೆದು ಕೈಗಾರಿಕಾ ಪ್ರಗತಿಗೆ ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳು ಇದ್ದರೂ ಹೆಚ್ಚಿನ ಪ್ರಗತಿ ಆಗಿಲ್ಲ. ಹೀಗಾಗಿ ರಾಮನಗರದ ಹೆಸರನ್ನು ‘ನವ ಬೆಂಗಳೂರು’ ಎಂದು ಬದಲಿಸಿದಲ್ಲಿ ಉದ್ಯಮಿಗಳು ಹೂಡಿಕೆಗೆ ಹೆಚ್ಚು ಆಸಕ್ತಿ ತೋರಿ, ಬಂಡವಾಳ ಹರಿದು ಬರಬಹುದು ಎನ್ನುವುದು ಸರ್ಕಾರದ ಅಂದಾಜು. ಒಂದೊಮ್ಮೆ ಜಿಲ್ಲೆಯ ಹೆಸರು ಬದಲಾದರೂ ‘ರಾಮನಗರ’ ಎಂಬ ತಾಲ್ಲೂಕಿನ ಹೆಸರು ಹಾಗೆಯೇ ಉಳಿಯಲಿದೆ.

2007ರ ಆಗಸ್ಟ್‌ 23ರಂದು ಅಂದಿನ ಜೆಡಿಎಸ್‌–ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಮನಗರ ಜಿಲ್ಲಾ ಕೇಂದ್ರವಾಗಿಸಿಕೊಂಡು ಪ್ರತ್ಯೇಕ ಜಿಲ್ಲೆ ಘೋಷಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಭಜಿಸಿ ಈ ಜಿಲ್ಲೆ ಅಸ್ತಿತ್ವಕ್ಕೆ ಬಂದಿತ್ತು.

ರಾಮನಗರ ಜಿಲ್ಲಾ ಕೇಂದ್ರವಾದರೂ ಜಿಲ್ಲೆಯ ಹೆಸರನ್ನು ಮಾತ್ರ ‘ಬೆಂಗಳೂರು ದಕ್ಷಿಣ’ ಎಂದು ನಾಮಕರಣ ಮಾಡುವಂತೆ ಶಾಸಕ ಡಿ.ಕೆ. ಶಿವಕುಮಾರ್ ಸೇರಿ ಹಲವರು ಒತ್ತಾಯಿಸಿದ್ದರು.

ಜಿಲ್ಲೆಯ ಹೆಸರಿಗೆ ‘ಬೆಂಗಳೂರು’ ಸೇರಿಕೊಂಡರೆ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಸಿಗುತ್ತದೆ. ಕೈಗಾರಿಕೆ ಬೆಳವಣಿಗೆಗೂ ಅನುಕೂಲ. ಆರ್ಥಿಕವಾಗಿ ಇನ್ನಷ್ಟು ಪ್ರಗತಿ ಆಗುತ್ತದೆ. ಹೀಗಾಗಿ ಬೆಂಗಳೂರು ಹೆಸರನ್ನೇ ಇಡಬೇಕು ಎಂದು ದಶಕದಿಂದಲೂ ಒತ್ತಾಯಿಸುತ್ತಾ ಬರಲಾಗಿದೆ.

ಮತ್ತೊಂದು ಹೆಸರಿಡಲು ವಿರೋಧ
ಜಿಲ್ಲೆಯ ಹೆಸರು ಮರು ನಾಮಕರಣ ಸುದ್ದಿ ಚರ್ಚೆಯಾಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಅದಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ‘ಬಿಜೆಪಿ ಸರ್ಕಾರವು ಹಿಂದೆ ಎಚ್‌.ಡಿ. ಕುಮಾರಸ್ವಾಮಿ ರಾಮನಗರಕ್ಕೆ ನೀಡಿದ್ದ ಯೋಜನೆಗಳನ್ನು ಒಂದೊಂದಾಗಿ ಕಿತ್ತುಕೊಳ್ಳುತ್ತಿದೆ. ಈಗ ಅವರು ಘೋಷಿಸಿದ ಜಿಲ್ಲೆಯ ಹೆಸರನ್ನೇ ಬದಲಿಸಲು ಹೊರಟು ಮತ್ತೆ ರಾಜಕೀಯ ಮಾಡುತ್ತಿದೆ’ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದುತ್ವ ಪ್ರತಿಪಾದಿಸುವ ಬಿಜೆಪಿ, ರಾಮನ ಹೆಸರಿನ ಜಿಲ್ಲೆಗೆ ಮತ್ತೊಂದು ಹೆಸರಿಡಬಾರದು ಎಂದು ಕೆಲವರು ಬರೆದಿದ್ದಾರೆ.

ಕೇವಲ ಕೈಗಾರಿಕೆ ಸೆಳೆಯುವ ಸಲುವಾಗಿ ಹೆಸರು ಬದಲಿಸುವುದು ಸರಿಯಲ್ಲ. ಇದರಿಂದ ರಾಮನಗರವೂ ಬೆಂಗಳೂರಿನಂತೆ ವಲಸಿಗರ ನಾಡಾಗುತ್ತದೆ. ಇಲ್ಲಿನ ಕೃಷಿ, ಈ ನೆಲದ ಸಂಸ್ಕೃತಿ ಹಾಳಾಗುತ್ತದೆ. ಜಿಲ್ಲೆಗೆ ಪ್ರತ್ಯೇಕ ಅಸ್ತಿತ್ವ ಇದ್ದು, ಅದನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂಬುದು ಕೆಲವರ ಆಗ್ರಹವಾಗಿದೆ.

ಹೆಸರು ಬದಲಿಸಿದರೆ ಅಭಿವೃದ್ಧಿಯಾದೀತೇ?: ಎಚ್‌ಡಿಕೆ

ಬೆಂಗಳೂರು: ‘ರಾಮನಗರ ಜಿಲ್ಲೆಗೆ ಅದರದೇ ಆದ ಇತಿಹಾಸವಿದೆ. ಆ ಲೆಕ್ಕಾಚಾರದಲ್ಲೇ ಜಿಲ್ಲೆಯಾಗಿ ಘೋಷಣೆ ಮಾಡಿದ್ದೆ. ಈಗ ಅದರ ಹೆಸರನ್ನು ನವ ಬೆಂಗಳೂರು ಎಂದು ಬದಲಿಸಿದ ತಕ್ಷಣ ಅಭಿವೃದ್ಧಿ ಆಗುತ್ತದೆಯೇ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಹಾಗೂ ಚನ್ನಪಟ್ಟಣ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ರಾಮನಗರ ಹೆಸರಿನ ಬಗ್ಗೆ ಭಾವನಾತ್ಮಕ ಸಂಬಂಧ ಇರುವುದೂ ಸಹಜ. ರಾಮ ಭಕ್ತರಾದ ಬಿಜೆಪಿಯವರು ಹೆಸರು ಬದಲಿಸಲು ಮುಂದಾಗಿರುವುದು ಸರಿಯಲ್ಲ. ಹೆಸರು ಬದಲಾಯಿಸಿದರೆ ಆಗುವ ಪರಿಣಾಮವನ್ನು ಅವರೇ ಎದುರಿಸಬೇಕು’ ಎಂದಿದ್ದಾರೆ.

ಹೈದರಾಬಾದ್‌ ಕರ್ನಾಟಕದ ಹೆಸರನ್ನು ‘ಕಲ್ಯಾಣ ಕರ್ನಾಟಕ’ ಎಂದು ಬದಲಿಸಿದ ತಕ್ಷಣ ಏನು ಬದಲಾವಣೆ ಆಗಿದೆ ಎಂದಿದ್ದಾರೆ.

‘ಜಿಲ್ಲೆ ಘೋಷಣೆ ಮಾಡಿದ ಬಳಿಕ 10 ಸಾವಿರ ಎಕರೆಯಲ್ಲಿ ಬಿಡದಿ ಬಳಿ ಟೌನ್‌ಶಿಪ್‌ ನಿರ್ಮಾಣಕ್ಕೆ 12 ವರ್ಷಗಳ ಹಿಂದೆಯೇ ₹400 ಕೋಟಿ ನೀಡಿದ್ದೆ. ನನ್ನ ಬಳಿಕ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರು ಡಿಎಲ್‌ಎಫ್‌ಗೆ ನೀಡಿದ್ದ ಹಣವನ್ನು ವಾಪಸ್ ಪಡೆದರು. ಆಗಲೇ ನವ ಬೆಂಗಳೂರು ಮಾಡದೇ ಇರುವವರು ಈಗ ಏನುಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು