ಭಾನುವಾರ, ಮೇ 9, 2021
28 °C
ಅಂಗಡಿ ಮುಂಗಟ್ಟುಗಳಿಗೆ ಬೀಗ ಹಾಕಿಸಿದ ಪೊಲೀಸರು

ರಾಮನಗರ ಭಾಗಶಃ ಲಾಕ್‌ಡೌನ್, ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕೋವಿಡ್ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ ಅಧಿಕಾರಿಗಳು ಚುರುಕಾಗಿದ್ದು, ಗುರುವಾರ ನಗರದ ವಿವಿಧೆಡೆ ಅಂಗಡಿ ಮುಂಗಟ್ಟುಗಳಿಗೆ ಬಾಗಿಲು ಹಾಕಿಸಿದರು.

ವಾರದ ದಿನಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿ ಇದ್ದರೂ, ಕೆಲವೊಂದು ವ್ಯಾಪಾರ–ವಹಿವಾಟು ಹಾಗೂ ಜನರ ಓಡಾಟಕ್ಕೆ ನಿರ್ಬಂಧಗಳನ್ನು ಹೇರಲಾಗಿದೆ. ಅದರಂತೆ ಬುಧವಾರದಿಂದಲೇ ಜಿಲ್ಲೆಯ ಚಿತ್ರಮಂದಿರಗಳು ಬಂದ್ ಆಗಿವೆ. ಜಿಲ್ಲೆಯಲ್ಲಿ ಎ ದರ್ಜೆಯ ಏಳು ದೇಗುಲಗಳು ಸೇರಿದಂತೆ 760ಕ್ಕೂ ಹೆಚ್ಚು ದೇವಾಲಯಗಳು ಇದ್ದು, ಎಲ್ಲೆಡೆಯೂ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.

ಯಾವುದೆಲ್ಲ ನಿಷೇಧ: ಬುಧವಾರ ಒಂದಿಷ್ಟು ಸಡಿಲಿಕೆ ನೀಡಿದ್ದ ಜಿಲ್ಲಾಡಳಿತ ಹಾಗೂ ಪೊಲೀಸರು ಗುರುವಾರ ನಿಯಮಗಳನ್ನು ಬಿಗಿ ಮಾಡಿದ್ದಾರೆ. ಅದರಂತೆ ಜಿಲ್ಲೆಯ ಎಲ್ಲ ಜಿಮ್‌ಗಳನ್ನು ಬಂದ್ ಮಾಡಲು ಆದೇಶಿಸಿದ್ದು, ಬಹುತೇಕ ಜಿಮ್‌ಗಳಿಗೆ ಬೀಗ ಬಿದ್ದಿದೆ. ಹೋಟೆಲ್‌ಗಳು, ಬಾರ್ ಮತ್ತು ರೆಸ್ಟೋರೆಂಟುಗಳಲ್ಲಿ ಆಹಾರ ಸರಬರಾಜಿಗೆ ಅನುಮತಿ ನಿರಾಕರಿಸಿದ್ದು, ಕೇವಲ ಪಾರ್ಸಲ್ ಸೇವೆಗೆ ಮಾತ್ರ ಪೊಲೀಸರು ಅನುಮತಿ ನೀಡಿದ್ದಾರೆ. ಕೆಲವೆಡೆ ಬೇಕರಿಗಳನ್ನೂ ಮುಚ್ಚಿಸಲಾಗಿದೆ. ಆಭರಣ ಮಾರಾಟ, ಮೊಬೈಲ್‌ ಮಾರಾಟ ಮಳಿಗೆಗಳು, ಜವಳಿ ಅಂಗಡಿಗಳಿಗೂ ಬೀಗ ಬಿದ್ದಿದೆ.

ಕಲ್ಯಾಣ ಮಂಟಪಗಳಲ್ಲಿ ಈ ಹಿಂದೆ ನಿಗದಿಯಾಗಿದ್ದ ಮದುವೆಗಳನ್ನು ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದ್ದು, ಅತಿಥಿಗಳ ಸಂಖ್ಯೆಯನ್ನು 50ಕ್ಕೆ ಮಿತಿಗೊಳಿಸಿದೆ. ನಿಯಮ ಉಲ್ಲಂಘನೆ ಮಾಡಿದ ಕಲ್ಯಾಣ ಮಂಟಪಗಳಿಗೆ ಈಗಾಗಲೇ ಅಧಿಕಾರಿಗಳು ದಂಡ ವಿಧಿಸಿದ್ದಾರೆ.

ಸದ್ಯ ವಾಹನಗಳ ಓಡಾಟಕ್ಕೆ ಅನುಮತಿ ಇದೆಯಾದರೂ ಜನರ ಓಡಾಟ ಕಡಿಮೆ ಆಗಿದೆ. ಗುರುವಾರ ಎಪಿಎಂಸಿ ಮಾರುಕಟ್ಟೆ ಹಾಗೂ ರೇಷ್ಮೆಗೂಡು ಮಾರುಕಟ್ಟೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ತರಕಾರಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಜನಸಂದಣಿ ಹೆಚ್ಚಿದ್ದು, ಅಂತರ ಪಾಲನೆ ನಿಯಮ ಮಾತ್ರ ಕಣ್ಮರೆ ಆಗಿತ್ತು. ಶನಿವಾರದಿಂದ ತರಕಾರಿ ಮಾರುಕಟ್ಟೆಯನ್ನು ತೆರೆದ ಮೈದಾನಕ್ಕೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಆಸ್ಪತ್ರೆಗಳು, ಖಾಸಗಿ ಕ್ಲಿನಿಕ್, ಮೆಡಿಕಲ್ ಸ್ಟೋರ್‌ಗಳು ಸೇರಿದಂತೆ ವೈದ್ಯಕೀಯ ಸೇವಾ ಕ್ಷೇತ್ರದ ಎಲ್ಲ ಸೇವೆಗಳಿಗೆ ಯಾವುದೇ ಅಡ್ಡಿ ಆಗಿಲ್ಲ. ಇದನ್ನು ಹೊರತುಪಡಿಸಿ ಸದ್ಯ ದಿನಸಿ ಅಂಗಡಿಗಳು, ಹಣ್ಣು ಮತ್ತು ತರಕಾರಿ ಮಾರಾಟ ಅಗತ್ಯ ಸೇವೆಗಳ ವಹಿವಾಟಿಗೆ ಅನುಮತಿ ದೊರೆತಿದೆ. ಬಾರ್, ವೈನ್‌ ಸ್ಟೋರ್‌ಗಳ ವಹಿವಾಟಿಗೆ ಸದ್ಯ ಯಾವುದೇ ತೊಂದರೆ
ಆಗಿಲ್ಲ.

ನಿಷೇಧಾಜ್ಞೆ ಜಾರಿ: ಜಿಲ್ಲೆಯಾದ್ಯಂತ ಮೇ 4ರವರೆಗೆ ಸೆಕ್ಷನ್‌ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ಆದೇಶ ಹೊರಡಿಸಿದ್ದಾರೆ

ಪೂರ್ವಾನುಮತಿ ಪಡೆದಿರುವ ಮದುವೆ ಕಾರ್ಯಕ್ರಮಗಳ ಸಂದರ್ಭಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ 4ಕ್ಕಿಂತ ಹೆಚ್ಚಿನ ಜನರು ಗುಂಪು ಕೂಡುವಂತಿಲ್ಲ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ಸಂಚಾರ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ವಾಪಸ್ ಹಿನ್ನೆಲೆಯಲ್ಲಿ ಗುರುವಾರ ಸಾರಿಗೆ ಸಂಸ್ಥೆ ಬಸ್‌ಗಳು ಎಂದಿನಂತೆ ಸಂಚರಿಸಿದವು. ಬಹುತೇಕ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು. ಮುಷ್ಕರದ ಕಾರಣಕ್ಕೆ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಪ್ರವೇಶ ಪಡೆದಿದ್ದ ಖಾಸಗಿ ಬಸ್‌ಗಳು ಅಲ್ಲಿಂದ ಹೊರಬಂದವು. ಗುರುವಾರ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇತ್ತು.

ವಾರಾಂತ್ಯದಲ್ಲೂ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚಾರ ಕೈಗೊಳ್ಳಲಿವೆ. ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು