ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲಾ, ಪ್ರೌಢ, ಪಿಯು ಶಿಕ್ಷಣ ವಿಲೀನ ಮರು ಪರಿಶೀಲಿಸಿ: ಚಿಂತಕ ಬಂಜೆಗೆರೆ ಜಯಪ್ರಕಾಶ್

ಸಾಂಸ್ಕೃತಿಕ ಸ್ಪರ್ಧೆಗಳ‌ ಉದ್ಘಾಟನಾ ಸಮಾರಂಭದಲ್ಲಿ ಚಿಂತಕ ಬಂಜೆಗೆರೆ ಜಯಪ್ರಕಾಶ್ ಒತ್ತಾಯ
Published 30 ನವೆಂಬರ್ 2023, 7:47 IST
Last Updated 30 ನವೆಂಬರ್ 2023, 7:47 IST
ಅಕ್ಷರ ಗಾತ್ರ

ರಾಮನಗರ: ‘ಪ್ರೌಢ ಶಿಕ್ಷಣ ಮಂಡಳಿಯನ್ನು ಇತ್ತೀಚೆಗೆ ಶಾಲಾ ಶಿಕ್ಷಣ ಎಂದು ಮರು ನಾಮಕರಣ ಮಾಡಿರುವ ಸರ್ಕಾರ, ಶಾಲಾ ಶಿಕ್ಷಣ ಇಲಾಖೆಯೊಳಗೆ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ವಿಲೀನಗೊಳಿಸಿದೆ. ಕಲಸು ಮೆಲೋಗರವಾಗಿರುವ ಈ ನಿರ್ಧಾರವನ್ನು ಸರ್ಕಾರ ಮರು ಪರಿಶೀಲಿಸಬೇಕು’ ಎಂದು ಚಿಂತಕ ಡಾ. ಬಂಜೆಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.

ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ) ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ‌ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಶಿಕ್ಷಣಕ್ಕೆ ಅದರದ್ದೇ ಆದ ವಿಧಾನ ಮತ್ತು ವಿನ್ಯಾಸವಿದೆ. ಎಲ್ಲವನ್ನೂ ನಾವು ಮಿಶ್ರಣ ಮಾಡಬಾರದು. ತರಗತಿಗಳೆಂದರೆ ಕೇವಲ ಸಂಖ್ಯೆಗಳಲ್ಲ. ಒಂದೊಂದು ವಯೋಮಾನಕ್ಕೂ, ಒಂದೊಂದು ರೀತಿಯ ಕಲಿಕಾ ವಿಧಾನ ಮತ್ತು ಸಾಮರ್ಥ್ಯವಿರುತ್ತದೆ. ಅದಕ್ಕೆ ತಕ್ಕಂತೆ, ಶಿಕ್ಷಣ ಒದಗಿಸುವುದಕ್ಕೆ ಬೇಕಾದ ಮಂಡಳಿ ಮತ್ತು ಇಲಾಖೆಯನ್ನು ಹಳೇ ಪದ್ಧತಿಯಲ್ಲಿ ರೂಪಿಸಲಾಗಿತ್ತು’ ಎಂದರು.

‘ಹೊಸ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುವುದೆಂದರೆ, ಅವಸರಕ್ಕೆ ವಿವಿಧ ಹಂತಗಳ ಶಿಕ್ಷಣವನ್ನು ವಿಲೀನಗೊಳಿಸಿ ಮರುನಾಮಕರಣ ಮಾಡುವುದಲ್ಲ. ಅದರಲ್ಲೂ ಶಾಲಾ ಶಿಕ್ಷಣದೊಳಗೆ ಪದವಿಪೂರ್ವ ಶಿಕ್ಷಣವನ್ನು ಸೇರಿಸಿರುವುದು ಯಾವ ರೀತಿಯಲ್ಲೂ ಸೂಕ್ತವಾಗಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಸಚಿವರು ಹಾಗೂ ಸಂಬಂಧಪಟ್ಟ ಮೇಲಧಿಕಾರಿಗಳು ಚಿಂತನೆ ನಡೆಸಬೇಕು. ಅಲ್ಲದೆ, ಸರ್ಕಾರದ ನಿರ್ಧಾರದ ಬಗ್ಗೆ ಉಪನ್ಯಾಸಕರು ಕೈಗೊಂಡಿರುವ ಹೋರಾಟವನ್ನು ನಾನು ಬೆಂಬಲಿಸುತ್ತೇನೆ’ ಎಂದು ತಿಳಿಸಿದರು.

‘ಭವಿಷ್ಯದ ತಯಾರಿ’: ‘ಪದವಿ ಪೂರ್ವ ಹಂತದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ವಿದ್ಯಾರ್ಥಿಗಳ ಭವಿಷ್ಯಕ್ಕೆ ತಯಾರಿ ಇದ್ದಂತೆ.‌ ಯಾವ ಪ್ರತಿಭೆಯೂ ಒಮ್ಮೆಲೆ ಅವತರಿಸುವುದಿಲ್ಲ‌‌. ಅದಕ್ಕೆ ಸತತ ಪ್ರಯತ್ನ, ತರಬೇತಿ ಹಾಗೂ ಶ್ರದ್ಧೆ ಬೇಕು. ಪರೀಕ್ಷೆಯಲ್ಲಿ ಅಂಕ ಗಳಿಸಲು ಮನಸ್ಸಿಟ್ಟು ತಯಾರಿ ನಡೆಸುವಂತೆ, ಪಠ್ಯೇತರ ಚಟುವಟಿಕೆಗಳಿಗೂ ತಯಾರಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಶಿಕ್ಷಣಕ್ಕೆ ಶ್ರದ್ಧೆ ಮತ್ತು ಪ್ರಯತ್ನ ಮುಖ್ಯ. ಈ ಹಂತದಲ್ಲಿ ಬೋಧಕರು ಮಾರ್ಗದರ್ಶಕರಷ್ಟೇ. ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸಮಾನತೆ ಹಾಗೂ ಕಂದಾಚಾರ ತುಂಬಿರುವ ದೇಶವನ್ನು ಪುನರ್ ‌ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ಮೇಣದ ಮುದ್ದೆಯಾಗಿ ಬರುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಉತ್ತಮ ರೂಪ ಕೊಟ್ಟು, ಭವಿಷ್ಯದಲ್ಲಿ ಅವರು ಬೆಳಗುವಂತೆ ಮಾಡಬೇಕು. ಆ ಮೂಲಕ, ದೇಶ ನಿರ್ಮಾಣ ಕಾರ್ಯಕ್ಕೆ ಇಬ್ಬರೂ ಕೊಡುಗೆ ನೀಡಬೇಕು’ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ. ಶಿವಣ್ಣ, ‘ಒಂದೆರಡು ದಿನದ ತಯಾರಿಯಿಂದ ಯಾವುದೇ ಸಾಧನೆ ಮಾಡಲಾಗದು. ನಿರಂತರ ಅಧ್ಯಯನಶೀಲತೆ ಇದ್ದವರು ಮತ್ತು ಪ್ರಯೋಗಮುಖಿಯಾಗಿರುವವರು ಮಾತ್ರ ಪರೀಕ್ಷೆ, ಸ್ಪರ್ಧೆಗಳಲ್ಲಿ ಹಾಗೂ ನಿಜಜೀವನದಲ್ಲಿ ಯಶಸ್ಸು ಗಳಿಸುತ್ತಾರೆ’ ಎಂದರು.

ಡಿಡಿಪಿಯು ಸಿ.ಕೆ. ಗೋವಿಂದರಾಜು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಕೆ. ಅನ್ಸರ್ ಉಲ್ ಹಕ್ ಅತಿಥಿಗಳನ್ನು ಸ್ವಾಗತಿಸಿದರು. ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಆರ್. ಕುಮಾರಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಬೈರೇಗೌಡ, ಪ್ರಾಂಶುಪಾಲರ ಸಂಘದ ಖಜಾಂಚಿ ಬಿ. ಮಹೇಶ್, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್. ವೇಣುಗೋಪಾಲ್, ಎನ್‌ವಿಡಿ ಜಿಲ್ಲಾ ಸಂಚಾಲಕ ಎಂ.ಎನ್. ಪ್ರದೀಪ್ ಇದ್ದರು.

ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷ ಬಿ. ಉಮೇಶ್ ಕಾರ್ಯಕ್ರಮ ನಿರೂಪಣೆ ಹಾಗೂ ಉಪನ್ಯಾಸಕ ಸಿ. ಬೆಟ್ಟಸ್ವಾಮಿ ವಂದನಾರ್ಪಣೆ ಮಾಡಿದರು.

ಶಿಕ್ಷಣವು ಪದವಿ ಪ್ರಮಾಣಪತ್ರ ಹಾಗೂ ಉದ್ಯೋಗಾರ್ಹತೆ ಕೊಡುತ್ತದೆ. ಆದರೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ವ್ಯಕ್ತಿತ್ವಕ್ಕೆ ಕಳೆ ತರುತ್ತವೆ
– ಡಾ. ಬಂಜೆಗೆರೆ ಜಯಪ್ರಕಾಶ್ ಚಿಂತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT