ಗುರುವಾರ , ಆಗಸ್ಟ್ 11, 2022
23 °C

ವೃಷಭಾವತಿ ನದಿ ತಿರುವು: ನೀರಿ ಸಲಹೆ ಪಡೆಯಲು ಸರ್ಕಾರ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಮನಗರ ಜಿಲ್ಲೆ ಬೈರಮಂಗಲ ಕೆರೆಗೆ ವೃಷಭಾವತಿ ನದಿಯ ಕಲುಷಿತ ನೀರು ಸೇರುವುದನ್ನು ತಪ್ಪಿಸಲು ನದಿ ತಿರುವು ಯೋಜನೆ ಅನುಷ್ಠಾನ ಸಂಬಂಧ ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ(ನೀರಿ) ಸಲಹೆ ಪರಿಗಣಿಸಲಾಗುವುದು’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

‘ಈ ಸಂಬಂಧ ಡಿ.5ರಂದು ನೀರಿ ಸಂಸ್ಥೆಗೆ ಪತ್ರ ಬರೆಯಲಾಗಿದ್ದು, 3ನೇ ವಾರದಲ್ಲಿ ಸ್ಥಳ ಪರಿಶೀಲನೆ ಮಾಡುವುದಾಗಿ ತಿಳಿಸಿದ್ದಾರೆ. ಅದರಂತೆ ಪರಿಶೀಲನೆ ನಡೆಸಿದ ಮೂರ್ನಾಲ್ಕು ದಿನಗಳಲ್ಲಿ ಸಾಧಕ–ಬಾಧಕ ಕುರಿತು ಮಧ್ಯಂತರ ವರದಿ ಸಿಗಬಹುದು’ ಎಂದು ಸರ್ಕಾರ ವಿವರ ಸಲ್ಲಿಸಿತು.

ವೃಷಭಾವತಿ ನದಿ ತಿರುವು ಯೋಜನೆ ಪ್ರಶ್ನಿಸಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿದರು.

ನೀರಿ ಸಲಹೆ ಪಡೆಯಲು ಸಿದ್ಧವಿರುವುದಾಗಿ ಸರ್ಕಾರ ಸಲ್ಲಿಸಿದ ಹೇಳಿಕೆ ದಾಖಲಿಸಿಕೊಂಡ ಪೀಠ, ‘ಅರ್ಜಿದಾರರು ತಜ್ಞರ ಜತೆ ಸಮಾಲೋಚಿಸಿರುವ ವಿವರ ಮತ್ತು ದಾಖಲೆ ಸಲ್ಲಿಸಲಿ. ನೀರಿ ಸಂಸ್ಥೆಯಿಂದಲೂ ವರದಿ ಬರಲಿ, ಬಳಿಕವೇ ನಿರ್ಧರಿಸೋಣ’ ಎಂದು ತಿಳಿಸಿ ವಿಚಾರಣೆಯನ್ನು ಜ.15ಕ್ಕೆ ಮುಂದೂಡಿತು. ಮಧ್ಯಂತರ ತಡೆಯಾಜ್ಞೆಯನ್ನೂ ವಿಸ್ತರಿಸಿತು.

‘ವೃಷಭಾವತಿ ನದಿ ತಿರುವು ಯೋಜನೆಯನ್ನು ಸರ್ಕಾರ ಅವೈಜ್ಞಾನಿಕವಾಗಿ ರೂಪಿಸಿದೆ. 2018ರ ನವೆಂಬರ್‌ 23ರಲ್ಲಿ ₹110 ಕೋಟಿ ಬಿಡುಗಡೆ ಮಾಡಿದೆ. ಈ ಯೋಜನೆಯಿಂದ ಕೆರೆ ವ್ಯಾಪ್ತಿ ಕುಗ್ಗಲಿದೆ. ಕೆರೆ ನಂಬಿಕೊಂಡಿರುವ ರೈತರು ತೊಂದರೆಗೆ ಸಿಲುಕಲಿದ್ದಾರೆ. ಹೀಗಾಗಿ, ಯೋಜನೆ ರದ್ದುಗೊಳಿಸಬೇಕು’ ಎಂಬುದು ಅರ್ಜಿದಾರರ ಕೋರಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು