ಮಂಗಳವಾರ, ಮೇ 17, 2022
26 °C
ಪ್ರಧಾನಿ ನರೇಂದ್ರ ಮೋದಿಗೆ ಶಾಸಕ ಎಚ್‌.ಡಿ. ಕುಮಾರಸ್ವಾಮಿ ಮನವಿ

ರೈತರ ಸಮಸ್ಯೆ ಪರಿಹರಿಸಲು ಆಗ್ರಹ: ಎಚ್‌.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ರೈತರ ಸಮಸ್ಯೆಗಳನ್ನು ಪರಿಹರಿಸಿ, ದೇಶದಲ್ಲಿ ಶಾಂತಿ ಕಾಪಾಡಲು ಪ್ರಧಾನ ಮಂತ್ರಿ ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು. 

ತಾಲ್ಲೂಕಿನಲ್ಲಿ ಭಾನುವಾರ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರೈತರು ದೆಹಲಿಯಲ್ಲಿ ಕಳೆದ 70ಕ್ಕೂ ಹೆಚ್ಚು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ. ಈಗ ರೈತರು ಮುಂದಿನ ಅಕ್ಟೋಬರ್‌‌ವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ. ಹೋರಾಟ ಯಾವ ಸ್ವರೂಪ ಪಡೆಯುತ್ತದೋ ಗೊತ್ತಿಲ್ಲ. ಹಾಗಾಗಿ, ರೈತರ ಜೊತೆ ಮಾತುಕತೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವುದು ಒಳಿತು
ಎಂದು ಅಭಿಪ್ರಾಯಪಟ್ಟರು.

ಪ್ರಧಾನ ಮಂತ್ರಿಗಳಿಗೆ ರೈತರ ಬಗ್ಗೆ ಗೌರವ ಇದ್ದರೆ ಅವರನ್ನು ಕರೆದು ಸಭೆ ಮಾಡಬೇಕಿತ್ತು. ಕೃಷಿ ಮಂತ್ರಿಯ ನೇತೃತ್ವದಲ್ಲಿ ಸಭೆ ಮಾಡಿಸಿದ್ದಾರೆ. ಅದರ ಬದಲು ತಾವೇ ಸಭೆ ಮಾಡಲಿ. ಕೇಂದ್ರ ಸರ್ಕಾರದ ಕಾಯ್ದೆಗಳಿಂದ ರೈತರಿಗೆ ಏನು ಅನುಕೂಲವಾಗಿದೆ ಎಂಬುದನ್ನು ತಿಳಿಸಿಕೊಡಲಿ. ರೈತರ ಗೊಂದಲಗಳನ್ನು ಪರಿಹರಿಸುವ ಮನಸ್ಸು ಮಾಡಬೇಕು ಎಂದರು.

ಜಾತಿ ರಾಜಕೀಯ ನೋಡುತ್ತಿದ್ದೇನೆ: ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ರಾಜಕೀಯ ವಿಚಾರವನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಧಾರ್ಮಿಕ ಗುರುಗಳೇ ತಮ್ಮ ಸಮಾಜದ ಪರವಾಗಿ ಹೋರಾಟಕ್ಕಿಳಿದಿದ್ದಾರೆ. ಹಾಗಾಗಿ, ಇದು ದಾರಿತಪ್ಪುವ ಮುನ್ನ ಸರ್ಕಾರ ಎಚ್ಚರಿಕೆವಹಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.

ರಾಜಿ ಇಲ್ಲ: ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿಯಾಗುತ್ತೇವೆ. ಜನವಿರೋಧಿ ನೀತಿಗಳ ವಿಚಾರದಲ್ಲಿ ಎಂದಿಗೂ ರಾಜಿ ಇಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕಾಗಿ ಮೈತ್ರಿಯಾಗಿದ್ದೇವೆ. ಅದನ್ನು ಬಿಟ್ಟು ಬೇರೆ ರೀತಿ ಹೊಂದಾಣಿಕೆ ಇಲ್ಲ. ವಿಷಯಾಧಾರಿತವಾಗಿ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಇದು ಇತರೆ ವಿಚಾರಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಉದ್ಯಾನ, ಗೌಡಗೆರೆ ಗ್ರಾಮದಲ್ಲಿ ನಿರ್ಮಿಸಿರುವ ವಿನಾಯಕ ದೇವಸ್ಥಾನವನ್ನು ಅವರು ಉದ್ಘಾಟಿಸಿದರು.

ನಂತರ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು