ಚನ್ನಪಟ್ಟಣ: ತಾಲ್ಲೂಕಿನ ಬುಕ್ಕಸಾಗರ ಗ್ರಾಮದ ಬಳಿ ಕಾರಿನಲ್ಲಿ ಬರುತ್ತಿದ್ದ ಶಿವರಾಮು ಎಂಬುವರನ್ನು ಅಡ್ಡಗಟ್ಟಿ ಅವರ ಬಳಿ ಇದ್ದ ಹಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚನ್ನಪಟ್ಟಣದ ಕನಕ ನಗರದ ನರಸಿಂಹ (25), ಅಕ್ಕೂರು ಗ್ರಾಮದ ಆನಂದ (29), ಎಸ್.ಎಂ. ಹಳ್ಳಿಯ ನಾಗರಾಜು (24), ಲಾಳಾಘಟ್ಟದ ಕುಮಾರ್ ಆಲಿಯಾಸ್ ಮಾಯ (37), ಮದ್ದೂರು ತಾಲ್ಲೂಕಿನ ವಡ್ಡರದೊಡ್ಡಿ ಗ್ರಾಮದ ಕೆ. ವಿಷ್ಣು (23), ಬೆಂಗಳೂರು ಗಿರಿನಗರದ ಟಾಂಗು ಅಲಿಯಾಸ್ ರೇಣುಕುಮಾರ್ (27) ಬಂಧಿತರು. ಆರೋಪಿಗಳಿಂದ ₹ 1.25 ಲಕ್ಷ ನಗದು, ಎರಡು ಬೈಕ್, 16 ಗ್ರಾಂ ಚಿನ್ನದ ಸರ ವಶಪಡಿಸಿ
ಕೊಳ್ಳಲಾಗಿದೆ.
ಮದ್ದೂರು ತಾಲ್ಲೂಕಿನ ವಡ್ಡರದೊಡ್ಡಿ ಗ್ರಾಮದ ಕೆ. ವಿಷ್ಣು ಹಾಗೂ ಬೆಂಗಳೂರು ಗಿರಿನಗರದ ಟಾಂಗು ಅಲಿಯಾಸ್ ರೇಣುಕುಮಾರ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ.
ಫೆ. 26 ರಂದು ಚನ್ನಪಟ್ಟಣ ಕನಕ ನಗರದ ಚಿಕನ್ ಸೆಂಟರ್‌ವೊಂದರಲ್ಲಿ ಕೆಲಸ ನಿರ್ವಹಿಸುವ ಶಿವರಾಮು ಹಳ್ಳಿಗಳ ರೀಟೆಲ್ ಅಂಗಡಿಗಳಿಗೆ ಪೂರೈಸಿದ್ದ ಕೋಳಿಗಳ ಹಣವನ್ನು ವಸೂಲಿ ಮಾಡಿಕೊಂಡು ಕಾರಿನಲ್ಲಿ ಚನ್ನಪಟ್ಟಣದ ಕಡೆಗೆ
ಬರುತ್ತಿದ್ದರು. ಈ ವೇಳೆ ಬುಕ್ಕಸಾಗರ ಗ್ರಾಮದ ಬಳಿ ಗ್ಲಾಸಿನ ಮೇಲೆ ಆರೋಪಿಗಳು ಮೊಟ್ಟೆ ಎಸೆದು ಕಾರನ್ನು ಅಡ್ಡಗಟ್ಟಿದ್ದರು. ಮಾರಕಾಸ್ತ್ರಗಳಿಂದ ಕಾರಿನ ಗಾಜನ್ನು ಒಡೆದಿದ್ದರು. ಬಳಿಕ ಶಿವರಾಮು ಬಳಿಯಿದ್ದ ₹ 2.70 ಲಕ್ಷ ನಗದು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಶಿವರಾಮು ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.