ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ| ಪರಿಶಿಷ್ಟರಿಗೆ ನಿವೇಶನ ಮಂಜೂರು ಮಾಡಿ: ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾ ಮಟ್ಟದ ಜಾಗೃತ– ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Published 11 ಜುಲೈ 2023, 7:08 IST
Last Updated 11 ಜುಲೈ 2023, 7:08 IST
ಅಕ್ಷರ ಗಾತ್ರ

ರಾಮನಗರ: ‘ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ಪ್ರತಿಬಂಧ ಕಾಯ್ದೆ ಅನುಷ್ಠಾನ ಹಾಗೂ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ನಿವೇಶನ ನೀಡುವುದಕ್ಕೆ ಸಂಬಂಧಿಸಿದಂತೆ, ನಿವೇಶನರಹಿತರ ಪರಿಶಿಷ್ಟ ಸಮುದಾಯದವರ ಮಾಹಿತಿಯನ್ನು ಸಂಗ್ರಹಿಸಬೇಕು. ಸರ್ಕಾರಿ ಜಮೀನು ಎಲ್ಲೆಲ್ಲಿ ಇದೆ ಎಂಬುದರ ವಿವರ ಸಂಗ್ರಹಿಸಿ ಹಂಚಿಕೆ ಮಾಡಲು ಮುಂದಾಗಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ನಗರಸಭೆ, ಪುರಸಭೆ, ಕೆಎಸ್‌ಆರ್‌ಟಿಸಿ, ಎಪಿಎಂಸಿ ವಾಣಿಜ್ಯ ಮಳಿಗೆಗಳ ಹಂಚಿಕೆಯಲ್ಲಿ ಮೀಸಲಾತಿ ಪಾಲಿಸಬೇಕು. ಪ್ರಾತಿನಿಧ್ಯತೆಗೆ ಅನುಸಾರವಾಗಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರಿಗೂ ಹಂಚಿಕೆ ಮಾಡಬೇಕು. ನಿರುದ್ಯೋಗಿ ಯುವಜನರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಸ್ಮಶಾನ ಮಂಜೂರು ಮಾಡಿ: ‘ಸಮುದಾಯದವರಿಗೆ ಸ್ಮಶಾನ ಭೂಮಿಯನ್ನು ಮಂಜೂರು ಮಾಡಬೇಕು.ಭೂಮಿಯಲ್ಲಿ ಮೂಲಸೌಕರ್ಯ ಕಲ್ಪಿಸಬೇಕು. ಶವಸಂಸ್ಕಾರಕ್ಕೆ ಪ್ರೋತ್ಸಾಹಧನ ನೀಡಬೇಕು. ಸ್ಮಶಾನದ ಜಾಗವು ಕಲ್ಲುಬಂಡೆ ಅಥವಾ ಕೆರೆಗಳಲ್ಲಿ ಇದ್ದು, ಶವ ಸಂಸ್ಕಾರಕ್ಕೆ ಯೋಗ್ಯವಾಗಿಲ್ಲದಿದ್ದರೆ, ಬೇರೆ ಜಾಗವನ್ನು ಗುರುತಿಸಬೇಕು’ ಎಂದು ತಹಶೀಲ್ದಾರರಿಗೆ ಸಲಹೆ ನೀಡಿದರು.

‘ಜಿಲ್ಲೆಯ 126 ಗ್ರಾಮ ಪಂಚಾಯಿತಿಗಳ ಆದಾಯದ ಮಾಹಿತಿಯನ್ನು ಪಡೆಯಬೇಕು. ಆ ಪೈಕಿ, ಇದುವರೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಎಷ್ಟು ವೆಚ್ಚ ಮಾಡಲಾಗಿದೆ ಎಂಬುದರ ಮಾಹಿತಿಯನ್ನು ಸಲ್ಲಿಸಬೇಕು’ ಎಂದು ತಾ.ಪಂ. ಇಒಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಯೋಗೇಶ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಶಿವಲಿಂಗಯ್ಯ, ದೊಡ್ಡಯ್ಯ, ಕೃಷ್ಣಮೂರ್ತಿ, ಡಾ. ಗೋವಿಂದಯ್ಯ, ಕಿರಣ್, ವೆಂಕಟೇಶ್ ಹಾಗೂ ಇತರರು ಇದ್ದರು.

ಮಳಿಗೆ ಹಂಚಿಕೆಯಲ್ಲಿ ಮೀಸಲಾತಿ ನಿಯಮ ಪಾಲಿಸಿ ಸ್ಮಶಾನ ಭೂಮಿ ಮಂಜೂರು ಮಾಡಿ ಸೌಕರ್ಯ ಕಲ್ಪಿಸಿ ಪರಿಶಿಷ್ಟರಿಗೆ ಮಾಡಿರುವ ಖರ್ಚಿನ ಮಾಹಿತಿ ಸಲ್ಲಿಸಲು ಸೂಚನೆ

ಸಹಾಯಧನ ಹೆಚ್ಚಳಕ್ಕೆ ಆಗ್ರಹ ‘ಅತಿ ಹೆಚ್ಚು ಅಂಕಗಳನ್ನು ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ₹1 ಸಾವಿರ ಸಹಾಯಧನ ಅವರ ಶಾಲಾ–ಕಾಲೇಜಿನ ಶುಲ್ಕ ಪಾವತಿಗೂ ಸಾಕಾಗದು. ಈ ಮೊತ್ತವನ್ನು ₹10 ಸಾವಿರಕ್ಕೆ ಏರಿಸಬೇಕು’ ಎಂದು ಸಮತಾ ಸೈನಿಕ ದಳದ ಯುವ ಘಟಕದ ಅಧ್ಯಕ್ಷ ಡಾ. ಗೋವಿಂದಯ್ಯ ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ನಿಯಮದ ಪ್ರಕಾರ ಸಹಾಯಧನ ನೀಡಲಾಗುತ್ತಿದೆ. ನಿಮ್ಮ ಬೇಡಿಕೆ ಕುರಿತು ಸರ್ಕಾರಕ್ಕೆ ಪತ್ರ ಬರೆದು ಸಹಾಯಧನದ ಮೊತ್ತವನ್ನು ₹10 ಸಾವಿರಕ್ಕೆ ಹೆಚ್ಚಿಸಲು ಮನವಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಹಲ್ಲೆ: ಆರೋಪಿ ಬಂಧನವಾಗದಿದ್ದಕ್ಕೆ ಆಕ್ರೋಶ

ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಹೇಮಾಪುರದಲ್ಲಿ ಆರತಿ ಮುಟ್ಟಿದ ಪರಿಶಿಷ್ಟ ಸಮುದಾಯದ ಶಿಕ್ಷಕನ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಮುಖಂಡರು ಪ್ರಕರಣ ದಾಖಲಾಗಿ ಹತ್ತು ದಿನವಾದರೂ ಆರೋಪಿಗಳನ್ನು ಇನ್ನೂ ಬಂಧಿಸದಿರುವುದರ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಪೊಲೀಸರೇ ಆರೋಪಿಗಳ ಜೊತೆ ಶಾಮೀಲಾಗಿದ್ದಾರೆ. ತಾಲ್ಲೂಕಿನಲ್ಲಿ ಪರಿಶಿಷ್ಟರ ಮೇಲೆ ನಡೆಯುವ ಎಷ್ಟೋ ದೌರ್ಜನ್ಯಗಳು ಬೆಳಕಿಗೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಕಾರ್ತಿಕ್‌ ರೆಡ್ಡಿ ‘ಆರೋಪಿಗಳು ತಲೆ ಮರೆಸಿಕೊಂಡಿದ್ದು ಬಂಧನಕ್ಕಾಗಿ 2 ತಂಡಗಳನ್ನು ರಚಿಸಲಾಗಿದೆ. ಪ್ರಕರಣದಲ್ಲಿ ಸಿಬ್ಬಂದಿ ಕರ್ತವ್ಯಲೋಪ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT