ರಾಮನಗರ: ‘ಸ್ಮಶಾನಕ್ಕಾಗಿ ಜಿಲ್ಲೆಯಲ್ಲಿ ಸ್ಥಳದ ಕೊರತೆ ಇಲ್ಲ. ಆದರೆ, ಜಾತಿ ಆಧಾರದ ಮೇಲೆ ಸ್ಮಶಾನಕ್ಕಾಗಿ ಭೂಮಿ ನೀಡುವುದಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ಸಾರ್ವಜನಿಕವಾಗಿ ಗುರುತಿಸಿರುವ ಸ್ಮಶಾನದಲ್ಲಿ ಜಾತಿ ಕಾರಣಕ್ಕೆ ಅಂತ್ಯಸಂಸ್ಕಾರ ನೆರವೇರಿಸಲು ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ (ದೌರ್ಜನ್ಯ ಪ್ರತಿಬಂಧಕ) ತಿದ್ದುಪಡಿ ಕಾಯ್ದೆ-2015ರ ಅನುಷ್ಠಾನಕ್ಕೆ ಸಂಬಂಧಿಸಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ, ಸ್ಮಶಾನ ಸಮಸ್ಯೆ ಕುರಿತು ಸಮಿತಿ ಸದಸ್ಯರು ಎತ್ತಿದ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
‘ಜಿಲ್ಲೆಯಲ್ಲಿರುವ ಸ್ಮಶಾನಗಳ ಸರ್ವೇ ಮಾಡಿಸಿ ಗಡಿ ಗುರುತು ಹಾಕಬೇಕು. ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ವ್ಯವಸ್ಥೆ ಮಾಡರಬೇಕು. ಸ್ಥಳದಲ್ಲಿ ಸಾರ್ವಜನಿಕ ಸ್ಮಶಾನ ಎಂಬ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಲು ಎಲ್ಲಾ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ವಿಳಂಬ ಮಾಡಬಾರದು’ ಎಂದು ಸೂಚಿಸಿದರು.
‘ಒಂದು ಸಾವಿರ ಜನಸಂಖ್ಯೆಗೆ 18 ಗುಂಟೆ ಜಾಗವವನ್ನು ಸಾರ್ವಜನಿಕ ಸ್ಮಶಾನಕ್ಕಾಗಿ ಪ್ರತಿ ಗ್ರಾಮಕ್ಕೆ ಒದಗಿಸಲಾಗುತ್ತದ. ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಏನಾದರೂ ಸಮಸ್ಯೆಗಳಿದ್ದಲ್ಲಿ ಅದನ್ನು ಪರಿಹರಿಸಲಾಗುವುದು. ಈಗಾಗಲೇ, ಸಾರ್ವಜನಿಕವಾಗಿ ಗುರುತಿಸಿರುವ ಸ್ಮಶಾನ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ’ ಎಂದು ಹೇಳಿದರು.
ಕೆರೆ ಪಕ್ಕ ಸ್ಮಶಾನ: ‘ಚನ್ನಪಟ್ಟಣ ತಾಲ್ಲೂಕಿನ ಎಸ್.ಎಂ. ಹಳ್ಳಿಯಲ್ಲಿ ಕೆರೆಗೆ ಹೊಂದಿಕೊಂಡಿರುವ ಜಾಗವನ್ನು ಸ್ಮಶಾನಕ್ಕೆ ನೀಡಲಾಗಿದೆ. ಕೆರೆ ಮೈದುಂಬಿದರೆ ಇಡೀ ಜಾಗವನ್ನು ನೀರು ಆವರಿಸಿಕೊಳ್ಳಲಿದೆ’ ಎಂದು ಸಮಿತಿ ಸದಸ್ಯ ರೋಹಿತ್ ಸಭೆಯ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ಡಿ.ಸಿ, ‘ಜೀವಿತ ಕೆರೆಗಳ ಜಾಗದಲ್ಲಿ ಸ್ಮಶಾನಕ್ಕೆ ಜಾಗ ನೀಡಲು ಅವಕಾಶವಿಲ್ಲ. ಎಸ್.ಎಂ. ಹಳ್ಳಿ ಸಮಸ್ಯೆಯನ್ನು ಪರಿಶೀಲಿಸಿ ಪರಿಹರಿಸಬೇಕು’ ಎಂದು ಚನ್ನಪಟ್ಟಣ ತಹಶೀಲ್ದಾರ್ ನರಸಿಂಹಮೂರ್ತಿ ಅವರಿಗೆ ಸೂಚಿಸಿದರು.
ಸಿಗದ ಪೌತಿ ಖಾತೆ: ‘ದೊಡ್ಡಮಣ್ಣುಗುಡ್ಡೆ ಮತ್ತು ಚಿಕ್ಕಮಣ್ಣುಗುಡ್ಡೆ ಹಳ್ಳಿಗಳಲ್ಲಿರುವ ಪರಿಶಿಷ್ಟ ಸಮುದಾಯದವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅವರ ಜಮೀನಿಗೆ ಪೌತಿ ಖಾತೆಯೇ ಆಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು’ ಎಂದು ಸಮಿತಿ ಸದಸ್ಯ ಚೆಲುವರಾಜು ಒತ್ತಾಯಿಸಿದರು.
ಅದಕ್ಕೆ ಡಿ.ಸಿ, ‘ದೊಡ್ಡಮಣ್ಣುಗುಡ್ಡೆ ಮತ್ತು ಚಿಕ್ಕಮಣ್ಣುಗುಡ್ಡೆ ಪ್ರದೇಶವು ಅರಣ್ಯ ವ್ಯಾಪ್ತಿಗೆ ಸೇರಿದೆ. ಆ ಪ್ರದೇಶವನ್ನು ಜನವಸತಿ ಪ್ರದೇಶವಾಗಿ ಪರಿವರ್ತಿಸಲು ಅನುಮತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು. ‘ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿರುವ ಮಳಿಗೆಗಳ ಹಂಚಿಕೆಯಲ್ಲಿ ಮೀಸಲಾತಿ ಪಾಲಿಸದೆ, ಪರಿಶಿಷ್ಟರಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಸದಸ್ಯ ಗೋಪಾಲಕೃಷ್ಣ ಹೇಳಿದಾಗ, ‘ಆ ಕುರಿತು ಪ್ರಸ್ತಾವ ಸಲ್ಲಿಸಿ’ ಎಂದು ಪುರಸಭೆ ಮುಖ್ಯಾಧಿಕಾರಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚಂದ್ರಯ್ಯ ಉಪ ವಿಭಾಗಾಧಿಕಾರಿ ಬಿನೋಯ್, ಡಿವೈಎಸ್‌ಪಿ ದಿನಕರ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ಸಮಿತಿ ಸದಸ್ಯರಾದ ಕುಂಬಾಪುರ ಬಾಬು, ಶಿವರಾಜು, ಶಿವಕುಮಾರ್, ಮಹೇಶ್, ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಇಒಗಳು, ನಗರಸಭೆ ಪೌರಾಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಇತರರು ಇದ್ದರು.
‘ದೌರ್ಜನ್ಯ ಪ್ರಕರಣದಲ್ಲಿ ಮೃತಪಟ್ಟವರ ಅವಲಂಬಿತರಿಗೆ 24 ತಾಸಿನೊಳಗೆ ಪರಿಹಾರದ ಜೊತೆಗೆ ಒಬ್ಬರಿಗೆ ಅನುಕುಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗುವುದು. ಪಿಂಚಣಿ ಸಂತ್ರಸ್ತರ ಮಕ್ಕಳಿಗೆ ವಸತಿ ಶಾಲೆ ಸೌಕರ್ಯದ ಜೊತೆಗೆ ಕೃಷಿ ಭೂಮಿ ಮಂಜೂರು ಮಾಡಲಾಗುವುದು. ಸಂತ್ರಸ್ತರಿಗೆ ನಿಯಮಾನುಸಾರ ಸೌಲಭ್ಯಗಳನ್ನು ಕಾಲಮಿತಿಯೊಳಗೆ ಒದಗಿಸಲಾಗುವುದು. ಈ ವಿಷಯದಲ್ಲಿ ಅಧಿಕಾರಿಗಳು ವಿಳಂಬ ಮಾಡಬಾರದು’ ಎಂದು ಜಿಲ್ಲಾಧಿಕಾರಿ ಯಶವಂತ್ ಸೂಚಿಸಿದರು. ‘560 ಉಪ ಗ್ರಾಮ ನಿರ್ಮಾಣ’ ‘ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ 560 ಉಪ ಗ್ರಾಮಗಳನ್ನು ನಿರ್ಮಿಸಲಾಗುತ್ತಿದೆ. ಇವು ಗ್ರಾಮ ಠಾಣಾ ವ್ಯಾಪ್ತಿಗೆ ಸೇರದ ಸರ್ಕಾರದ ಜಮೀನು ಮತ್ತು ಸರ್ವೇ ನಂಬರ್‌ಗಳನ್ನು ಹೊಂದಿರುತ್ತವೆ. ಇವುಗಳನ್ನು ಉಪ ಗ್ರಾಮಗಳೆಂದು ಘೋಷಿಸಿ ಅವುಗಳಿಗೆ ಇ-ಖಾತೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.