ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ | ಒಡೆದ ಹೆಂಚು, ಪಡಸಾಲೆಯಲ್ಲಿ ಪಾಠ

Published 6 ಜುಲೈ 2024, 5:41 IST
Last Updated 6 ಜುಲೈ 2024, 5:41 IST
ಅಕ್ಷರ ಗಾತ್ರ

ಕನಕಪುರ: ಕುಸಿದಿರುವ ಶಾಲಾ ಕೊಠಡಿ ಚಾವಣಿ, ಒಡೆದು ಹೋಗಿರುವ ಹೆಂಚು, ಕಿತ್ತು ಹೋಗಿರುವ ನೆಲದ ಗಾರೆ, ಬಿರುಕು ಬಿಟ್ಟಿರುವ ಗೋಡೆ.. ಇದು  ಕೋನಮಾನಹಳ್ಳಿ ಸರ್ಕಾರಿ ಶಾಲೆಯ ದುಸ್ಥಿತಿ.

1974- 75ನೇ ಸಾಲಿನಲ್ಲಿ ಪ್ರಾರಂಭವಾದ ಈ ಶಾಲೆ ಶ್ರೀಮಂತರ ಮಕ್ಕಳನ್ನು ಆಕರ್ಷಿಸುತ್ತಿತ್ತು.

ಇದಕ್ಕೆ ಕಾರಣ ಇಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ, ಶಿಕ್ಷಕರ ಕಾಳಜಿಯಾಗಿತ್ತು. ಇಂತಹ ಶಾಲೆ ಬೀಳುವ ಸ್ಥಿತಿ ತಲುಪಿದೆ.

ಈ ಶಾಲೆಯಲ್ಲಿ 21 ಮಕ್ಕಳು ಕಲಿಯುತ್ತಿದ್ದು, ಒಂದನೇ ತರಗತಿ ಮಕ್ಕಳಿಂದಲೇ ಇಂಗ್ಲಿಷ್‌, ಕನ್ನಡ, ಗಣಿತ ಕಲಿಸುತ್ತಾರೆ. ಅಳ್ಳಿಮಾರನಹಳ್ಳಿ, ಹೊನಗನದೊಡ್ಡಿ, ಕೋನಮಾನ ಹಳ್ಳಿಯಿಂದ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಆದರೆ, ಶಾಲಾ ಕಟ್ಟಡದ ಸಮಸ್ಯೆ ಕಾಡುತ್ತಿದೆ. ಕಟ್ಟಡ ತುಂಬಾ ಹಳೆಯದಾಗಿದ್ದು, ಮಳೆ ಬಂದಾಗ ಸೋರುತ್ತದೆ. ಮತ್ತೊಂದು ಕೊಠಡಿಯಲ್ಲಿ ಜಂತೆಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ.

ಕೊಠಡಿಗಳು ಬೀಳುವ ಸ್ಥಿತಿಯಲ್ಲಿರುವುದರಿಂದ ಶಾಲಾ ಮಕ್ಕಳಿಗೆ ಪಡಸಾಲೆಯಲ್ಲಿ ತರಗತಿಗಳು ನಡೆಯುತ್ತಿವೆ.

ಈ ಬಗ್ಗೆ ಶಿಕ್ಷಕರು, ಪೋಷಕರು ಶಿಕ್ಷಣ ಇಲಾಖೆ ಹಾಗೂ ಸಚಿವರು, ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ಬೀಳುವ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಶಾಲಾ ಮಕ್ಕಳು ಭಯದಿಂದ ಪಾಠ ಕಲಿಯುವಂತಾಗಿದೆ.

ಶಾಲೆಗೆ ಭೇಟಿ ನೀಡಿ ಪರಿಶೀಲನೆ

ಬಿಇಒ ಪ್ರಭಾರಿಯಾಗಿ ಈಗಷ್ಟೇ ಚಾರ್ಜ್‌ ತೆಗೆದುಕೊಂಡಿದ್ದೇನೆ. ಕೋನಮಾನಹಳ್ಳಿ ಸರ್ಕಾರಿ ಶಾಲಾ ಕೊಠಡಿ ದುಸ್ಥಿತಿಯಲ್ಲಿದೆ ಎಂಬುದು ತಿಳಿದು ಬಂದಿದೆ. ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದ. ಮಳೆಯಿಂದ ಹಾನಿ ಆಗಿರುವ ಶಾಲೆ ಕೊಠಡಿ ಮಾಹಿತಿ ವರದಿಯನ್ನು ಈಗಾಗಲೇ ಕೊಡಲಾಗಿದೆ. ಅದರಲ್ಲಿ ಈ ಶಾಲೆ ಇದೆಯಾ ಎಂದು ನೋಡಿ ಕ್ರಮ ಕೈಗೊಳ್ಳಲಾಗುವುದು.

- ಸ್ವರೂಪ ಕೆ.ಎಸ್‌., ಪ್ರಭಾರ ಬಿಇಒ, ಕನಕಪುರ

ಭಯಭೀತರಾದ ಮಕ್ಕಳು

ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿರುವುದರಿಂದ ಸುತ್ತಮುತ್ತಲ ಗ್ರಾಮಗಳಿಂದ ಇಲ್ಲಿಗೆ ಮಕ್ಕಳು ಬರುತ್ತಿದ್ದಾರೆ. ಶಾಲಾ ಕೊಠಡಿಗಳು ಹಾಳಾಗಿರುವುದರಿಂದ ಮಕ್ಕಳನ್ನು ಕೂರಿಸಲು ಭಯವಾಗುತ್ತಿದೆ. ಅದಕ್ಕಾಗಿ ಪಡಸಾಲೆಯಲ್ಲಿ ತರಗತಿಗಳನ್ನು ಮಾಡುತ್ತಿದ್ದೇವೆ.

- ಎಲ್.ಸಿ.ರೂಪಶ್ರೀ, ಪ್ರಭಾರ ಮುಖ್ಯ ಶಿಕ್ಷಕಿ

ಕೊಠಡಿ ನಿರ್ಮಿಸಬೇಕಿದೆ

ನಾವು ಈ ಶಾಲೆಗೆ ಬಂದಾಗ 10 ಮಕ್ಕಳು ಮಾತ್ರ ಇದ್ದರು. ಒಂದನೇ ತರಗತಿಯಿಂದಲೇ ಕನ್ನಡ, ಇಂಗ್ಲಿಷ್, ಗಣಿತ ಕಲಿಸುತ್ತಿದ್ದೇವೆ. ಹಾಗಾಗಿ ಬೇರೆ ಗ್ರಾಮದ ಮಕ್ಕಳು ಇಲ್ಲಿಗೆ ಬರುತ್ತಾರೆ. ಕೊಠಡಿಗಳ ಚಾವಣಿ ಹಾಳಾಗಿರುವುದರಿಂದ ಮಳೆ ಬಂದಾಗ ಸೋರುತ್ತದೆ. ಒಳಗೆ ನಿಲ್ಲಲು ಆಗುವುದಿಲ್ಲ. ಕೊಠಡಿಗಳನ್ನು ಹೊಸದಾಗಿ ನಿರ್ಮಿಸಬೇಕಿದೆ.

-ವಿನುತಾ ಕೆ.ಆರ್, ಸಹ ಶಿಕ್ಷಕಿ

ಕೊಠಡಿ ಬೀಳುವಂತಾಗಿವೆ

ಖಾಸಗಿ ಶಾಲೆಗಳಲ್ಲಿ ಸಿಗದಂತಹ ಶಿಕ್ಷಣ ಇಲ್ಲಿ ಸಿಗುತ್ತಿದೆ. ಶಿಕ್ಷಕರು ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಆದರೆ, ಶಾಲಾ ಕೊಠಡಿಗಳು ಬೀಳುವಂತಾಗಿವೆ. 

- ಪುಟ್ಟಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ, ಕೋನಮಾನಹಳ್ಳಿ

ಈವರೆಗೂ ಕಟ್ಟಡ ನಿರ್ಮಾಣವಾಗಿಲ್ಲ

ಶಾಲಾ ದುಷ್ಥಿತಿ ಬಗ್ಗೆ ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಬಿಇಒ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಆದರೆ, ಈವರೆಗೂ ಹೊಸ ಕಟ್ಟಡ ನಿರ್ಮಾಣವಾಗಿಲ್ಲ. ಈಗಲಾದರೂ ಹೊಸ ಕೊಠಡಿ ನಿರ್ಮಾಣ ಮಾಡಿಕೊಡಬೇಕು.

-ಕೆ.ಎಂ.ಶ್ರೀನಿವಾಸ್, ಪೋಷಕರು, ಕೋನಮಾನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT