ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾರಂಭದ ಸಂಭ್ರಮ; ವಿದ್ಯಾರ್ಥಿಗಳಿಗೆ ಅದ್ಧೂರಿ ಸ್ವಾಗತ

ವಿದ್ಯಾರ್ಥಿನಿಯ ಪಾದಪೂಜೆ ಮಾಡಿದ ಬಿಇಒ; ಎತ್ತಿನ ಬಂಡಿಯಲ್ಲಿ ಶಾಲೆಗೆ ಬಂದ ಚಿಣ್ಣರು; ವಿವಿಧೆಡೆ ಮೆರವಣಿಗೆ
Published 1 ಜೂನ್ 2024, 4:52 IST
Last Updated 1 ಜೂನ್ 2024, 4:52 IST
ಅಕ್ಷರ ಗಾತ್ರ

ರಾಮನಗರ: ಶಾಲಾರಂಭದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶುಕ್ರವಾರ ಶಾಲೆಗಳಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಬೇಸಿಗೆ ರಜೆ ಮುಗಿಸಿ ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಅದ್ಧೂರಿ ಸ್ವಾಗತ ನೀಡಿದರು. ಹೊಸ ಧಿರಿಸಿನಲ್ಲಿ ಮೆರವಣಿಗೆಯಲ್ಲಿ ಬಂದ ಚಿಣ್ಣರು ತಮ್ಮ ಅಲಂಕೃತ ಶಾಲೆಯನ್ನು ಕಂಡು ಖುಷಿಯಾದರು. ಹಲವೆಡೆ ಮಕ್ಕಳಿಗೆ ಸಿಹಿ ವಿತರಿಸಲಾಯಿತು.

ಎತ್ತಿನ ಬಂಡಿಯಲ್ಲಿ ಶಾಲೆಗೆ ಬಂದ ತಾಲ್ಲೂಕಿನ ಬಿಡದಿ ಹೋಬಳಿಯ ಬನ್ನಿಕುಪ್ಪೆ ಬಿ. ಕ್ಲಸ್ಟರ್‌ನ ಬೆತ್ತನಗೆರೆಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷವಾದ ಸ್ವಾಗತ ಸಿಕ್ಕಿತು. ಬೆಳಿಗ್ಗೆಯೇ ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ಅವರು, ವಿದ್ಯಾರ್ಥಿನಿಯ ಪಾದಪೂಜೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮೊದಲ ದಿನದ ಸ್ವಾಗತ ಕೋರಿದರು.

ವಿವಿಧೆಡೆ ವಿದ್ಯಾರ್ಥಿಗಳನ್ನು ಮೆರವಣಿಗೆಯಲ್ಲಿ ಶಾಲೆಗೆ ಕರೆ ತರಲಾಯಿತು. ಕೆಲವೆಡೆ ಡೊಳ್ಳು, ಪೂಜಾ ಕುಣಿತ ಸೇರಿದಂತೆ ಜಾನಪದ ಕಲಾತಂಡಗಳಿಂದ ವಿದ್ಯಾರ್ಥಿಗಳಿಗೆ ಸ್ವಾಗತ ಸಿಕ್ಕಿತು. ಕೆಲವೆಡೆ ವಿದ್ಯಾರ್ಥಿಗಳು ಪೂರ್ಣಕುಂಭ ಮತ್ತು ಕಳಸ ಹೊತ್ತು ಶಾಲೆಗೆ ಬಂದರು. ಹೊಸ ದಾಖಲಾತಿಗಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಮೆರವಣಿಗೆ ಮಾಡಿದರು. ಬಹುತೇಕ ಕಡೆ ಮೊದಲ ದಿನವೇ ವಿದ್ಯಾರ್ಥಿಗಳೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.

ಮಕ್ಕಳೊಂದಿಗೆ ಬಂದ ಪಾಲಕರು: ಕೆಲ ಗ್ರಾಮಗಳಲ್ಲಿ ತಂದೆ–ತಾಯಂದಿರು ಹಾಗೂ ಕುಟುಂಬದವರು ತಮ್ಮ ಮಕ್ಕಳನ್ನು ಅಲಂಕೃತ ಎತ್ತಿನ ಬಂಡಿ, ಸೇರಿದಂತೆ ತಮ್ಮ ಖಾಸಗಿ ವಾಹನದಲ್ಲಿ ಕರೆತಂದರು. ಮಕ್ಕಳಿಗಾಗಿ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮಕ್ಕೆ ತಾವು ಸಾಕ್ಷಿಯಾದರು. ಶಾಲಾವರಣದಲ್ಲಿ ಸುತ್ತಾಡಿ ತಮ್ಮ ಮಕ್ಕಳ ಶಾಲೆಯ ವಾತಾವರಣವನ್ನು ಕಣ್ತುಂಬಿಕೊಂಡರು.

ಮುಂದಿನ ತರಗತಿಗೆ ಬಡ್ತಿ ಹೊಂದಿದವರ ಹಾಗೂ ಹೊಸದಾಗಿ ಶಾಲೆಗೆ ಸೇರಿದ ಮಕ್ಕಳ ತಂದೆ–ತಾಯಂದಿರುವ ತಮ್ಮ ಮಕ್ಕಳ ಕುರಿತು, ಶಿಕ್ಷಕರ ಜೊತೆ ಚರ್ಚಿಸಿದರು. ವರ್ಷದ ಪಾಠ–ಪ್ರವಚನ ಹಾಗೂ ಪಠ್ಯೇತರ ಚಟುವಟಿಕೆಗಳ ಮಾಹಿತಿ ಪಡೆದರು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಜೊತೆಗೆ ಶಾಲೆಯಲ್ಲಿರುವ ಸೌಲಭ್ಯಗಳ ಕುರಿತು ಶಿಕ್ಷಕರು ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು.

ಅಕ್ಷರಾಭ್ಯಾಸ: ಹೊಸದಾಗಿ ದಾಖಲಾದ ವಿದ್ಯಾರ್ಥಿಗಳಿಗೆ ಬೆತ್ತನೆಗೆರೆ ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡಿಸಿ, ಶುಭ ಕೋರಲಾಯಿತು. ಈ ವೇಳೆ ಮಾತನಾಡಿದ ಬನ್ನಿಕುಪ್ಪೆ ಬಿ. ಕ್ಲಸ್ಟರ್ಸ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಚಿಕ್ಕವೀರಯ್ಯ, ‘ಭೀಮ ಡಾ. ಬಿ.ಆರ್. ಅಂಬೇಡ್ಕರ್ ಆದದ್ದು, ನರೇಂದ್ರ ವಿವೇಕಾನಂದ ಆದದ್ದು, ಪುಟ್ಟಪ್ಪ ಕುವೆಂಪು ಆದದ್ದು ಶಿಕ್ಷಣದಿಂದ. ಶಿಕ್ಷಣ ಈ ಜಗತ್ತನ್ನು ಬದಲಿಸಬಲ್ಲ ಶ್ರೇಷ್ಠ ಸಾಧನ’ ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ಶಿಕ್ಷಣ ಸಂಯೋಜಕರಾದ ನಂಜುಂಡಪ್ಪ, ದುಂಡು ಮಾದಯ್ಯ, ಮುಖ್ಯ ಶಿಕ್ಷಕ ವೆಂಕಟೇಶಯ್ಯ, ಬಸವರಾಜು, ಜಯಲಕ್ಷ್ಮಮ್ಮ, ರಮೇಶ್, ಶಕುಂತಲಾ ಹಾಗೂ ಗ್ರಾಮಸ್ಥರು ಇದ್ದರು.

ಖಾಸಗಿ ಶಾಲೆಗಳಲ್ಲಿಲ್ಲ ಸಂಭ್ರಮ: ಶಾಲಾರಂಭದ ಸಂಭ್ರಮ ಖಾಸಗಿ ಶಾಲೆಗಳಲ್ಲಿ ಅಷ್ಟಾಗಿ ಕಾಣಲಿಲ್ಲ. ಶಾಲೆಗಳಲ್ಲಿ ತಿಂಗಳಿಂದಲೇ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ. ರಜೆ ಕಳೆದು ಬಂದಿರುವ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಹೆಸರಲ್ಲಿ ತರಗತಿ ಆರಂಭಿಸಿ, ಮಕ್ಕಳನ್ನು ಮುಂದಿನ ತರಗತಿಗೆ ಅಣಿಗೊಳಿಸುತ್ತಿದ್ದಾರೆ.

ರಾಮನಗರ ತಾಲ್ಲೂಕಿನ ಹರಿಸಂದ್ರ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಜಾನಪದ ಕಲಾತಂಡಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿತು
ರಾಮನಗರ ತಾಲ್ಲೂಕಿನ ಹರಿಸಂದ್ರ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಜಾನಪದ ಕಲಾತಂಡಗಳಿಂದ ಅದ್ಧೂರಿ ಸ್ವಾಗತ ಸಿಕ್ಕಿತು
ರಾಮನಗರ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಶಾಲೆಗೆ ಬಂದರು. ಶಿಕ್ಷಕಕಿಯರು ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಸ್ಥಳೀಯರು ಇದ್ದಾರೆ 
ರಾಮನಗರ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಕಳಸ ಹೊತ್ತು ಮೆರವಣಿಗೆಯಲ್ಲಿ ಶಾಲೆಗೆ ಬಂದರು. ಶಿಕ್ಷಕಕಿಯರು ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಸ್ಥಳೀಯರು ಇದ್ದಾರೆ 
ರಾಮನಗರ ತಾಲ್ಲೂಕಿನ ಲಕ್ಕೋಜನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುರುಷೋತ್ತಮ್ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು
ರಾಮನಗರ ತಾಲ್ಲೂಕಿನ ಲಕ್ಕೋಜನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುರುಷೋತ್ತಮ್ ಅವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು
ರಾಮನಗರ ತಾಲ್ಲೂಕಿನ ಬಿಳಗುಂಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಶಿಕ್ಷಕರು ಹಾಗೂ ಸ್ಥಳೀಯರ ನೇತೃತ್ವದಲ್ಲಿ ದಾಖಲಾತಿ ಆಂದೋಲನ ನಡೆಯಿತು
ರಾಮನಗರ ತಾಲ್ಲೂಕಿನ ಬಿಳಗುಂಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಶಿಕ್ಷಕರು ಹಾಗೂ ಸ್ಥಳೀಯರ ನೇತೃತ್ವದಲ್ಲಿ ದಾಖಲಾತಿ ಆಂದೋಲನ ನಡೆಯಿತು

ಜೂನ್ 15ರವರೆಗೆ ಪ್ರವೇಶ: ಡಿಡಿಪಿಐ ‘

ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಮೊದಲ ದಿನವಾದ್ದರಿಂದ ಮಕ್ಕಳ ಹಾಜರಾತಿಯೂ ಕಡಿಮೆ ಇತ್ತು. ಒಂದೆರಡು ದಿನದೊಳಗೆ ಹಾಜರಾತಿಯಲ್ಲಿ ಚೇತರಿಕೆಯಾಗಲಿದೆ. ಜಿಲ್ಲೆಯಾದ್ಯಂತ ಶಾಲೆಗಳು ಮೇ 31ರಿಂದ ಪ್ರಾರಂಭವಾಗಿವೆ. 1ರಿಂದ 10ನೇ ತರಗತಿವರೆಗೆ ಹೊಸ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಜೂನ್ 15ರವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ವಸತಿ ಶಾಲೆಗಳು ಅನುದಾನಿತ ಹಾಗೂ ಅನುದಾನ ರಹಿತ ಸೇರಿದಂತೆ 1644 ಶಾಲೆಗಳಿದ್ದು ಎಲ್ಲಾ ಕಡೆ ಇಂದಿನಿಂದ ಅಧಿಕೃತವಾಗಿ ಶಾಲಾರಂಭವಾಗಿದೆ’ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುರುಷೋತ್ತಮ್ ‘ಪ್ರಜಾವಾಣಿ’ಗೆ ತಿಳಿಸಿದರು. ಶಾಲಾರಂಭದ ಅಂಗವಾಗಿ ಪುರುಷೋತ್ತಮ್ ಅವರು ಸಹ ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲವೆಡೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಿದರು.

ವಿದ್ಯಾರ್ಥಿಗಳೇ ಶಿಕ್ಷಕರ ಅನ್ನದಾತರು: ಬಿಇಒ

‘ವಿದ್ಯಾರ್ಥಿಗಳಿದ್ದರೆ ನಾವೇ ಹೊರತು ನಮ್ಮಿಂದ ಅವರಲ್ಲ. ನಮ್ಮ ಬದುಕಿನ ಅನ್ನದಾತರು ವಿದ್ಯಾರ್ಥಿಗಳು. ನೂರಾರು ವಿದ್ಯಾರ್ಥಿಗಳ ಬಲದಿಂದಾಗಿ ಒಬ್ಬ ಶಿಕ್ಷಕನಿಗೆ ಅನ್ನದ ಮಾರ್ಗ. ಅನ್ನದ ಋಣ ತೀರಿಸುವ ಕಾರ್ಯವನ್ನು ನಾವೆಲ್ಲರೂ ಪ್ರಮಾಣಿಕವಾಗಿ ಮಾಡಬೇಕಿದೆ. ಶಾಲಾ ಆರಂಭೋತ್ಸವದ ಶುಭ ದಿನದಂದು ಅಂತಹ ಅನ್ನದಾತ ವಿದ್ಯಾರ್ಥಿಯ ಪಾದಪೂಜೆ ಮಾಡಿದ್ದು ನನಗೆ ಅತೀವ ಸಂತಸವನ್ನುಂಟು ಮಾಡಿದೆ’ ಎಂದು ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ಹೇಳಿದರು. ಶಾಲಾರಂಭದ ಹಿನ್ನೆಲೆಯಲ್ಲಿ ಬಿಡದಿ ಹೋಬಳಿಯ ಬೆತ್ತನಗೆರೆ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯ ಪಾದಪೂಜೆ ಮಾಡಿ ಮಾತನಾಡಿದ ಅವರು ‘ಮಗು ಮನುಜನಿಗೆ ತಂದೆ ಎಂಬ ಮಾತಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿಯೇ ಸರ್ಕಾರಿ ಶಿಕ್ಷಣವನ್ನು ಕಡ್ಡಾಯ ಮಾಡಿದ್ದು ಎಲ್ಲರಿಗೂ ಉಚಿತ ಶಿಕ್ಷಣದ ವ್ಯವಸ್ಥೆ ಮಾಡಿದೆ. ಎಲ್ಲರೂ ಇದರ ಪ್ರಯೋಜನ ಪಡೆಯಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT