ಕುದೂರು: ಮುರಿದು ಬಿದ್ದಿರುವ ಆಟಿಕೆ ಸಾಮಾನು. ಬಣ್ಣ ಕಳೆದುಕೊಂಡ ಜೋಕಾಲಿ. ಅಲ್ಲಲ್ಲಿ ತುಕ್ಕು ಹಿಡಿದಿರುವ ಜಾರುಬಂಡಿ. ಅಡಿಪಾಯವೇ ಇಲ್ಲದೆ, ಬಣ್ಣವೂ ಇಲ್ಲದಿರುವ ಕಾಂಪೌಂಡ್ ಗೋಡೆ. ನಾಮಫಲಕ ಇಲ್ಲದ ಮಕ್ಕಳ ಆಟದ ಉದ್ಯಾನ. ಇದು ಕುದೂರು ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀರಾಮಲೀಲಾ ಕ್ರೀಡಾಂಗಣದ ದುಃಸ್ಥಿತಿ.
ಇದು 2012ರಲ್ಲಿ ಆಗಿನ ಅಬಕಾರಿ ಸಚಿವ ಎಂ.ಪಿ ರೇಣುಕಾಚಾರ್ಯ ಹಾಗೂ ಶಾಸಕ ಬಾಲಕೃಷ್ಣ ಅವರಿಂದ ಉದ್ಘಾಟನೆಯಾದ ಪಟ್ಟಣದ ಏಕೈಕ ಮಕ್ಕಳ ಉದ್ಯಾನ ಇದು.
ಶಿಲಾನ್ಯಾಸ ಫಲಕದಲ್ಲಿ ಡಾ.ವಿಷ್ಣುವರ್ಧನ್ ಮಕ್ಕಳ ಆಟದ ಉದ್ಯಾನ ಎಂಬ ಹೆಸರಿದೆ. ಆದರೆ, ಉದ್ಯಾನದಲ್ಲಿ ಯಾವುದೇ ನಾಮಫಲಕವಿಲ್ಲ. ಆಗೊಮ್ಮೆ ಈಗೊಮ್ಮೆ ಪಂಚಾಯಿತಿ ಪೌರಕಾರ್ಮಿಕರು ಆಳುದ್ದ ಬೆಳೆದಿರುವ ಪಾರ್ಥೇನಿಯಂ ಗಿಡ ಸ್ವಚ್ಛ ಮಾಡುತ್ತಾರೆ. ಇಲ್ಲಿರುವ ಬೀದಿ ದೀಪ ಉರಿಯುವುದಿಲ್ಲ ಎಂದು ಕೆಲ ಮಕ್ಕಳ ಪೋಷಕರು ಬೇಸರ ವ್ಯಕ್ತಪಡಿಸುತ್ತಾರೆ.
‘ಕೆಲಸದ ಒತ್ತಡದಲ್ಲಿ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ವಾರದ ರಜೆಯನ್ನಾದರೂ ಮಕ್ಕಳ ಜತೆ ಸಂತಸದಿಂದ ಕಳೆಯಲು ಉದ್ಯಾನಕ್ಕೆ ಬಂದೆವು. ಆದರೆ, ಇಲ್ಲಿನ ಅವ್ಯವಸ್ಥೆ ನೋಡಿ ಬೇಸರವಾಗಿದೆ. ಮಕ್ಕಳು ಆಟ ಆಡಿಸುವಂತೆ ಹಠ ಹಿಡಿಯುತ್ತಾರೆ. ಆದರೆ, ಇಲ್ಲಿನ ಅವ್ಯವಸ್ಥೆ ನೋಡಿದರೆ ಬೇಸರವಾಗುತ್ತದೆ ಎನ್ನುತ್ತಾರೆ ಉಮೇಶ್ ದಂಪತಿ.
ಉದ್ಯಾನಕ್ಕೆ ಭೇಟಿ ನೀಡಿದರೆ ಮರಿದು ಬಿದ್ದ ಆಟಿಕೆಗಳು ಸ್ವಾಗತಿಸುತ್ತವೆ. ಜೋಕಾಲಿ ಕಿತ್ತು ಹೋಗಿದೆ. ಸರಪಳಿಗಳು ನೇತಾಡುತ್ತಿವೆ. ಸ್ವಲ್ಪ ದಿನ ಕಳೆದರೆ ಕಬ್ಬಿಣದ ವಸ್ತುಗಳು ಕಳ್ಳರ ಪಾಲಾಗಲಿವೆ.
ಮಕ್ಕಳ ಬಾಲ್ಯ ಸುಂದರ. ಅದು ಸೊರಗಬಾರದು. ಪಟ್ಟಣದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಉದ್ಯಾನದ ಬಗ್ಗೆ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಒತ್ತಾಯಿಸುತ್ತಾರೆ ಗೃಹಿಣಿ ಅನ್ನಪೂರ್ಣ.
‘ಮಗಳು ಪಾರ್ಕ್ ಕರೆದುಕೊಂಡು ಹೋಗುವಂತೆ ಹಟ ಹಿಡಿದಿದ್ದಳು. ಇಲ್ಲಿಗೆ ಬಂದರೆ ನಿರಾಸೆ ಅಯಿತು. ಒಂದೂ ಆಟಿಕೆ ಸುಸ್ಥಿತಿಯಲ್ಲಿಲ್ಲ. ಪಟ್ಟು ಬಿಡದ ಮಗಳು ಮುರಿದ ಜೋಕಾಲಿಯಲ್ಲೇ ಜೀಕಿದಳು‘ ಎನ್ನುತ್ತಾರೆ ದಾದಾಪೀರ್.
ನಿರ್ವಹಣೆ ಸಂಪೂರ್ಣ ವಿಫಲತೆಯಿಂದ ಉದ್ಯಾನ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಪುಂಡ ಪೋಕರಿ ಹಾಗೂ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಮಕ್ಕಳ ಪಾರ್ಕ್ ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ಗ್ರಾಮ ಪಂಚಾಯಿತಿ ವಿರುದ್ಧ ಸಾರ್ವಜನಿಕರು ಹಾಗೂ ಮಕ್ಕಳ ಪೋಷಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಮಕ್ಕಳನ್ನು ಆಟವಾಡಿಸಲು ಹೆತ್ತವರು ಸಂಜೆ ಹೊತ್ತಿನಲ್ಲಿ ಪಾರ್ಕ್‌ನತ್ತ ಕರೆದೊಯ್ಯುವುದು ಸಾಮಾನ್ಯ. ಆದರೆ, ಪಾರ್ಕ್‌ನಲ್ಲಿರುವ ಆಟಿಕೆಗಳಲ್ಲಿ ಕೂರಿಸುವ ಮುನ್ನ ಎಚ್ಚರ ಬಯಸುವುದು ಅಗತ್ಯ. ಏಕೆಂದರೆ ಇಲ್ಲಿರುವ ಕೆಲವು ಆಟಿಕೆ ತುಂಡಾಗಿವೆ. ತುಕ್ಕು ಹಿಡಿದು ಮುರಿದು ಬೀಳುವ ಆತಂಕದಲ್ಲಿವೆ.
ದೊಡ್ಡವರ ಸಣ್ಣತನ: ಈ ಉದ್ಯಾನ ಮಕ್ಕಳಿಗೆ ಮಾತ್ರ ಮೀಸಲಾಗಬೇಕು. ಆದರೆ, ಇಲ್ಲಿ ದೊಡ್ಡವರೇ ಜೋಕಾಲಿ ಬಳಸುತ್ತಾರೆ. ಜಾರುಬಂಡೆ ಜಾರುತಾರೆ. ಇದರ ಪರಿಣಾಮ ಆಟಿಕೆ ಬಹುಬೇಗ ಹಾಳಾಗುತ್ತಿವೆ. ಇದನ್ನು ಪ್ರಶ್ನಿಸಲು ಹೋದರೆ ಅಸಭ್ಯವಾಗಿ ಮಾತನಾಡುತ್ತಾರೆ ಎನ್ನುತ್ತಾರೆ ಸ್ಥಳೀಯರಾದ ರಾಮಚಂದ್ರಪ್ಪ.
ಶಾಸಕರು ಇನ್ನೂ ಕೆಲ ದಿನಗಳಲ್ಲಿ ಕ್ರೀಡಾಂಗಣದ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಈ ಸಮಯದಲ್ಲಿ ಈಗಿರುವ ಉದ್ಯಾನ ಕೆಡವಿ ಫೈಬರ್‌ನಿಂದ ಮಾಡಲಾದ ಮಕ್ಕಳ ಆಟಿಕೆ ಅಳವಡಿಸಲು ಕ್ರಮಕೈಗೊಳ್ಳಬೇಕು.
– ವಿನಯ್ ಗೌಡ ಅಧ್ಯಕ್ಷ ಮಾಗಡಿ ಯೂಥ್ ಕಾಂಗ್ರೆಸ್ ಕುದೂರು
ತಾಲ್ಲೂಕು ಪಂಚಾಯಿತಿಯಿಂದ ನಿರ್ಮಾಣವಾಗಿರುವ ಉದ್ಯಾನ ನಿರ್ವಹಣೆಗೆ ಯಾವುದೇ ಅನುದಾನ ಬಂದಿಲ್ಲ. ಅನುದಾನ ಬಂದ ತಕ್ಷಣ ಮಕ್ಕಳ ಆಟಿಕೆ ಸಾಮಾನು ರಿಪೇರಿ ಮಾಡಿಸಲಾಗುವುದು
–ಕುಸುಮಾ ಅಧ್ಯಕ್ಷೆ ಕುದೂರು ಗ್ರಾಮ ಪಂಚಾಯಿತಿ
ಕ್ಕಳಿಂದ ದೂರವಾದ ಪಾರ್ಕ್
ಪಾರ್ಕ್ ಅನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕೆಲ ಮಕ್ಕಳು ಪಾರ್ಕ್‌ಗೆ ಬರುವುದನ್ನು ನಿಲ್ಲಿಸಿದ್ದಾರೆ. ಅಲ್ಲದೇ ಪೋಷಕರು ಕೂಡ ಇಲ್ಲಿನ ಅವ್ಯವಸ್ಥೆ ಕಂಡು ಬೇಸರ ತೋರುತ್ತಾರೆ. ಸೂಕ್ತ ನಿರ್ವಹಣೆ ಇಲ್ಲದಿರುವುದರಿಂದ ಉದ್ಯಾನದಲ್ಲಿ ಗಿಡಗಂಟಿ ಬೆಳೆದು ನಿಂತಿದೆ. ಉದುರಿದ ಎಲೆ ಪ್ಲಾಸ್ಟಿಕ್ ಕಸಕಡ್ಡಿ ಸೇರಿದಂತೆ ವಿವಿಧ ರೀತಿ ಕಸವು ಉದ್ಯಾನದಲ್ಲಿ ತುಂಬಿರುತ್ತದೆ. ಆಟೋಪಕರಣ ಹಾಳಾಗಿವೆ. ರಾತ್ರಿಯಾದರೆ ಪುಂಡ ಹುಡುಗರು ಉದ್ಯಾನದೊಳಗೆ ಬಂದು ಕುಳಿತು ಮದ್ಯಪಾನ ಮತ್ತು ಧೂಮಪಾನ ಮಾಡುತ್ತಾರೆ. ಇಲ್ಲಿ ಹೇಳುವವರು ಕೇಳುವವರೇ ಇಲ್ಲವಾಗಿದೆ ಎಂದು ಕೆಲ ಪೋಷಕರು ಬೇಸರ ವ್ಯಕ್ತಪಡಿಸುತ್ತಾರೆ. ಈ ಉದ್ಯಾನವನ್ನು ಕ್ರೀಡಾಂಗಣದ ಅಕ್ಕಪಕ್ಕದಲ್ಲಿ ಹೊಂದಿಕೊಂಡಂತಿರುವ ಹಲವು ಶಾಲೆಗಳ ನೂರಾರು ಮಕ್ಕಳು ಮಧ್ಯಾಹ್ನದ ಊಟದ ಸಮಯದಲ್ಲಿ ಆಟವಾಡಲು ಬರುತ್ತಾರೆ. ಸಂಜೆ ವೇಳೆ ಪೋಷಕರೊಂದಿಗೆ ಬಂದು ಹೋಗುತ್ತಾರೆ. ಉದ್ಯಾನ ನಿರ್ವಹಣೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಎಡವಿದೆ ಎನ್ನುತ್ತಾರೆ ಸ್ಥಳೀಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.