ಶನಿವಾರ, ಮೇ 21, 2022
28 °C

ಕೆರೆಯಿಂದ ಮಣ್ಣು ಸಾಗಣೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ಕೂರಣಗೆರೆ ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದು, ಇದರಿಂದಾಗಿ ಕೆರೆಯ ಸ್ವರೂಪ ಹಾಳಾಗುತ್ತದೆ. ಜತೆಗೆ, ಕೆರೆಯಲ್ಲಿ ನೀರು ಸಂಗ್ರಹಣೆಗೆ ತೊಂದರೆಯಾಗಿ ಮುಂದಿನ ದಿನಗಳಲ್ಲಿ ಜನ ಜಾನುವಾರುಗಳಿಗೆ ತೊಂದರೆಯಾಗಲಿದೆ ಎಂದು ಗ್ರಾಮಸ್ಥರು ಆರೋಪಿಸಿ ಸೋಮವಾರ ಕೆರೆಯ ಬಳಿ ಪ್ರತಿಭಟನೆ ನಡೆಸಿದರು.

ಸ್ಥಳೀಯ ಗ್ರಾ.ಪಂ. ಹಾಗೂ ಯಾವುದೇ ಇಲಾಖೆಯಿಂದ ಅನುಮತಿ ಪಡೆಯದೆ ಕೆಲವರು ಕೆರೆಯಿಂದ ಬೇಕಾಬಿಟ್ಟಿ ಮಣ್ಣು ತೆಗೆಯುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ನಮಗೆ ಧಮಕಿ ಹಾಕುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಗಮನಹರಿಸಿ ಕೆರೆ ಉಳಿಸಿಕೊಡಬೇಕು ಎಂದು ಆಗ್ರಹಿಸಿದರು.‌

ಸುಮಾರು 16 ಎಕರೆ ವಿಸ್ತೀರ್ಣದಲ್ಲಿ ಕೂರಣಗೆರೆ ಗ್ರಾಮದ ಕೆರೆ ಇದ್ದು, ಇಲ್ಲಿ ದಿನನಿತ್ಯ ಜೆಸಿಬಿ ಬಳಸಿ ಮಣ್ಣು ತೆಗೆಯಲಾಗುತ್ತಿದೆ. ಹತ್ತಾರು ಟ್ರ್ಯಾಕ್ಟರ್‌ಗಳಲ್ಲಿ ಮಣ್ಣನ್ನು ಸಾಗಾಣಿಕೆ ಮಾಡಲಾಗುತ್ತಿದೆ. ಸುತ್ತಮುತ್ತಲ ಗ್ರಾಮದವರು ಕೆರೆಯಂಗಳದಲ್ಲಿ ಜೆಸಿಬಿ ಇಳಿಸಿ ಮಣ್ಣು ಬಗೆಯುತ್ತಿದ್ದಾರೆ. ಇದರಿಂದಾಗಿ ಕೆರೆಯಲ್ಲಿ ಹತ್ತಾರು ಅಡಿ ಆಳದ ಗುಂಡಿ ನಿರ್ಮಾಣವಾಗಿದ್ದು, ಕೆರೆಗೆ ತುಂಬಿಸಿದ ನೀರು ಒಂದು ಹನಿ ಸಹ ನಿಲ್ಲುತ್ತಿಲ್ಲ ಎಂದು ಆರೋಪಿಸಿದರು.

ಇದರ ಜೊತೆಗೆ ಕೆರೆ ಒತ್ತುವರಿಯಾಗಿದೆ. ತಹಶೀಲ್ದಾರ್ ಅವರು ಕೆರೆಯ ಜಾಗವನ್ನು ಅಳತೆ ಮಾಡಿಸಿ, ಒತ್ತುವರಿ ತೆರುವು ಮಾಡಿಸಬೇಕು. ಕೆರೆಯಿಂದ ಮಣ್ಣು ಸಾಗಿಸುವುದನ್ನು ತಡೆಯಬೇಕು. ಮುಂದೆ ಆಗಬಹುದಾದ ಅನಾಹುತವನ್ನು ತಡೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಮಾಜ ಸೇವಕ ಕೂರಣಗೆರೆ ಕೃಷ್ಣಪ್ಪ, ಗ್ರಾ.ಪಂ. ಸದಸ್ಯ ಕೆ.ಜಿ.ರಾಜು, ಗ್ರಾಮಸ್ಥರಾದ ಅರುಣ್ ಕುಮಾರ್, ಸಿ.ರಾಜು, ಕೆ.ಬಿ. ಗಂಗಾಧರ್, ಶಿವಲಿಂಗಮ್ಮ, ಗೋಪಾಲ, ಶ್ರೀನಿವಾಸ್, ಕುಮಾರ್, ಕೀರ್ತಿಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು