ಹಾಂಗ್ಝೌ: ಉದಯೋನ್ಮುಖ ಆಟಗಾರ ಅಭಿಷೇಕ್ ಅವರ ಎರಡು ಗೋಲುಗಳ ನೆರವಿನಿಂದ ಭಾರತ ತಂಡ ಗುರುವಾರ ನಡೆದ ಏಷ್ಯನ್ ಗೇಮ್ಸ್ ಪುರುಷರ ಹಾಕಿ ಪಂದ್ಯದಲ್ಲಿ 4–2 ಗೋಲುಗಳಿಂದ ಹಾಲಿ ಚಾಂಪಿಯನ್ ಜಪಾನ್ ತಂಡವನ್ನು ಸೋಲಿಸಿತು. ಸತತ ಮೂರನೇ ಗೆಲುವಿನೊಡನೆ ಭಾರತ ಸೆಮಿಫೈನಲ್ನತ್ತ ದೊಡ್ಡ ಹೆಜ್ಜೆಯಿಟ್ಟಿತು.
‘ಎ’ ಗುಂಪಿನ ಈ ಪಂದ್ಯದಲ್ಲಿ ಅಭಿಷೇಕ್ 13 ಮತ್ತು 48ನೇ ನಿಮಿಷ ಎರಡು ಫೀಲ್ಡ್ ಗೋಲುಗಳನ್ನು ಗಳಿಸಿದರು. ಮನ್ದೀಪ್ (24ನೇ ನಿಮಿಷ) ಮತ್ತು ಅಮಿತ್ ರೋಹಿದಾಸ್ (34ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು.
ಭಾರತ ಸುಲಭ ಗೆಲುವಿನೊಡನೆ ಪಂದ್ಯ ಮುಗಿಸಲಿದೆ ಎನ್ನುವಷ್ಟರಲ್ಲಿ ಜಪಾನ್ ಪ್ರತಿಹೋರಾಟ ತೋರಿ ಕೊನೆಯ ಮೂರು ನಿಮಿಷಗಳಲ್ಲಿ ಸೋಲಿನ ಅಂತರವನ್ನು ತಗ್ಗಿಸಿತು. 57ನೇ ನಿಮಿಷ ಜೆನ್ಕಿ ಮಿತಾನಿ ಮತ್ತು ಕೊನೆಯ ನಿಮಿಷ ರಿಯೊಸಿ ಕೇಟೊ ಅವರು ಗೋಲು ಗಳಿಸಿದರು.
ಭಾರತ ಶನಿವಾರ ನಡೆಯುವ ಪಂದ್ಯದಲ್ಲಿ ಸಾಂಪ್ರದಾಯಿಕ
ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತ ಪಂದ್ಯದ ಬಹುಭಾಗ ಮೇಲುಗೈ ಸಾಧಿಸಿತ್ತು. ಜಪಾನ್ ಆಗೊಮ್ಮೆ– ಈಗೊಮ್ಮೆ ಪ್ರತಿಹೋರಾಟ ಪ್ರದರ್ಶಿಸಿತು.
ಈ ಪಂದ್ಯಕ್ಕೆ ಮೊದಲು ಎರಡು ಭರ್ಜರಿ ಜಯಗಳಿಸಿದ್ದ ಭಾರತ ವಿಶ್ವಾಸದಿಂದ ಪಂದ್ಯ ಆರಂಭಿಸಿತು. ಎರಡು ಪೆನಾಲ್ಟಿ ಕಾರ್ನರ್ಗಳು ವ್ಯರ್ಥವಾದ ಬಳಿಕ ಅಭಿಷೇಕ್ ತಂಡಕ್ಕೆ ಮುನ್ನಡೆ ಒದಗಿಸಿದರು. ಹಾರ್ದಿಕ್ ಸಿಂಗ್ ಅವರ ಪಾಸ್ನಲ್ಲಿ, ಗೋಲಿನ ಬಳಿ ಹೊಂಚುಹಾಕುತ್ತಿದ್ದ ಅಭಿಷೇಕ್ ‘ರಿವರ್ಸ್ ಸ್ಟಿಕ್’ ಮೂಲಕ ಗೋಲು ಗಳಿಸಿ ಮುನ್ನಡೆಯನ್ನು ಹೆಚ್ಚಿಸಿದರು.
24ನೇ ನಿಮಿಷ ಮನ್ದೀಪ್ ಅವರು ನೀಲಕಂಠ ಅವರ ಪಾಸ್ನಲ್ಲಿ ಪೂರ್ಣ ಡೈವ್ ಹೊಡೆದು ಚೆಂಡನ್ನು ಗುರಿಮುಟ್ಟಿಸಿದರು. ವಿರಾಮದ ನಂತರ ಬೆನ್ನುಬೆನ್ನಿಗೆ ಪೆನಾಲ್ಟಿ ಕಾರ್ನರ್ಗಳು ದೊರೆತವು. ಇದರಲ್ಲಿ ಎರಡನೇ ಅವಕಾಶದಲ್ಲಿ ಅಮಿತ್ ರೋಹಿದಾಸ್ ಅವರ ಶಕ್ತಿಶಾಲಿ ‘ಡ್ರ್ಯಾಗ್ಫ್ಲಿಕ್’ನಲ್ಲಿ ಚೆಂಡು ಗೋಲುಪೆಟ್ಟಿಗೆಯ ಬಲಮೂಲೆ ಸೇರಿತು.
ಅಂತಿಮ ಕ್ವಾರ್ಟರ್ನ ಮೂರನೇ ನಿಮಿಷ ಮನ್ದೀಪ್ ಅವರ ನೆರವಿನೊಡನೆ ಅಭಿಷೇಕ್ ಭಾರತದ ಮುನ್ನಡೆಯನ್ನು 4–0ಗೆ ಹೆಚ್ಚಿಸಿದರು. ಇಷ್ಟರ ಮಧ್ಯೆಯೂ ಜಪಾನ್ ಆಟಗಾರರು ಹತಾಶರಾಗಲಿಲ್ಲ. ಕೊನೆಯ ನಾಲ್ಕು ನಿಮಿಷಗಳಿದ್ದಾಗ ಮೂರು ಪೆನಾಲ್ಟಿ ಕಾರ್ನರ್ ಅವಕಾಶಗಳು ಒದಗಿದವು. ಮೂರನೇ ಅವಕಾಶವನ್ನು ಮಿತಾನಿ ಗೋಲಾಗಿ ಪರಿವರ್ತಿಸಿದರು. ಪಂದ್ಯ ಇನ್ನೇನು ಮುಗಿಯಲಿದೆ ಎನ್ನುವಷ್ಟರಲ್ಲಿ ಪ್ರತಿದಾಳಿಯಲ್ಲಿ ಕೇಟೊ ಅವರು ಸೋಲಿನ ಅಂತರವನ್ನು ಇನ್ನಷ್ಟು ತಗ್ಗಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.