ಗುರುವಾರ , ಫೆಬ್ರವರಿ 20, 2020
18 °C
ತುಂಗಣಿ ಸರ್ಕಾರಿ ಶಾಲಾ ಮಕ್ಕಳಿಗೆ ಭೇಟಿ ನೀಡಿ ಪರಿಶೀಲಿಸಿದ ಉಷಾ ರವಿ

ಜಿಪಂ ಉಪಾಧ್ಯಕ್ಷೆಯಿಂದ ಎಸ್ಸೆಸ್ಸೆಲ್ಸಿ ವಿಶೇಷ ತರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಹತ್ತನೇ ತರಗತಿ ಮಕ್ಕಳಿಗೆ ಅನುಕೂಲವಾಗಲೆಂದು ಅತಿಥಿ ಶಿಕ್ಷಕರಿಂದ ವಿಶೇಷ ತರಗತಿಗಳನ್ನು ತುಂಗಣಿ ಶಾಲೆಯಲ್ಲಿ ನಡೆಸಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರು ಸಹಕಾರ ನೀಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಉಷಾ ರವಿ ತಿಳಿಸಿದರು.

ಇಲ್ಲಿನ ತುಂಗಣಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ದೃ‍ಷ್ಟಿಯಿಂದ ವೈಯಕ್ತಿಕವಾಗಿ ವಿಶೇಷ ತರಗತಿಗಳನ್ನು ಆಯೋಜನೆ ಮಾಡಿರುವ ಅವರು ಮಂಗಳವಾರ ರಾತ್ರಿ ಶಾಲೆಯಲ್ಲಿ ನಡೆಯುತ್ತಿದ್ದ ವಿಶೇಷ ತರಗತಿಗೆ ಭೇಟಿ ನೀಡಿ ಮಾತನಾಡಿದರು.

‘ಸರ್ಕಾರಿ ಶಾಲೆಯಲ್ಲಿನ ಮಕ್ಕಳಿಗೆ ಟ್ಯೂಷನ್‌ ಮತ್ತಿತರ ವಿಶೇಷ ತರಗತಿಗಳಿಗೆ ಹೋಗಿ ಹೆಚ್ಚಿನ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾನು ಮತ್ತು ನನ್ನ ಪತಿ ಈ ಶಾಲೆಯಲ್ಲಿ 10 ದಿನಗಳಿಂದ ವಿಶೇಷ ತರಗತಿ ನಡೆಸುತ್ತಿದ್ದೇವೆ. ನಮ್ಮ ಈ ಪ್ರಯತ್ನಕ್ಕೆ ಕೆಲವು ಶಿಕ್ಷಕರು ಕೈಜೋಡಿಸಿ ಶಾಲೆಗೆ ಬಂದು ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಿದ್ದಾರೆ’ ಎಂದು ತಿಳಿಸಿದರು.

‘ಬಾಲಕರು ರಾತ್ರಿ ಶಾಲೆಯಲ್ಲಿ ಉಳಿಯುತ್ತಿದ್ದಾರೆ. ಅವರಿಗೆ ಊಟ ಮತ್ತು ಮಲಗುವ ವ್ಯವಸ್ಥೆಯನ್ನು ನಾವು ವೈಯಕ್ತಿಕವಾಗಿ ಮಾಡಿಕೊಟ್ಟಿದ್ದೇವೆ. ಅವರ ಮೇಲುಸ್ತುವಾರಿಯಾಗಿ ಪಂಚಾಯಿತಿಯ ಸಿಬ್ಬಂದಿ ರಾತ್ರಿ ಇಲ್ಲೇ ಉಳಿದು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ’ ಎಂದರು.

‘ಬಾಲಕಿಯರು ಶಾಲೆ ಮುಗಿದ ಮೇಲೆ ರಾತ್ರಿ 8 ಗಂಟೆವರೆಗೂ ವಿಶೇಷ ತರಗತಿಗಳಲ್ಲಿ ಪಾಠ ಕೇಳುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು 37 ವಿದ್ಯಾರ್ಥಿಗಳಿದ್ದು ಎಲ್ಲರೂ ಆಸಕ್ತಿಯಿಂದ ವಿಶೇಷ ತರಗತಿಗೆ ಬಂದು ಚೆನ್ನಾಗಿ ಶಿಕ್ಷಣಾಭ್ಯಾಸ ಮಾಡುತ್ತಿದ್ದಾರೆ. ಎಲ್ಲರೂ ಉತ್ತಮ ದರ್ಜೆಯಲ್ಲಿ ತೇರ್ಗಡೆಯಾಗಬೇಕೆಂದು ನಾವು ಈ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಶಾಲೆಯಲ್ಲಿ 22 ವಿದ್ಯಾರ್ಥಿನಿಯರಿದ್ದು ಎಲ್ಲರೂ ಐದಾರು ಕಿಲೋ ಮೀಟರ್‌ ದೂರದ ಹಳ್ಳಿಗಳಿಂದ ಬರುವವರಾಗಿದ್ದಾರೆ. ಆದರೂ ಪೋಷಕರು ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಅನುಕೂಲವಾಗುತ್ತಿರುವುದನ್ನು ಅರಿತು, ಶಾಲೆ ಬಳಿ ಬಂದು ಕಾಯುತ್ತಿದ್ದು ಜೋಪಾನವಾಗಿ ಕರೆದುಕೊಂಡು ಹೋಗುತ್ತಿದ್ದಾರೆ ಎಂದರು.

ಎಂ.ತಿಪ್ಪೇಸ್ವಾಮಿ ಇಂಗ್ಲಿಷ್‌, ಚಂದ್ರಪ್ಪ ಶಿವಣ್ಣನವರ್‌ ಹಿಂದಿ, ರಾಜೇಶ್‌ ಗಣಿತ, ಉಮಾದೇವಿ.ಸಿ ವಿಜ್ಙಾನ, ಕೂ.ಗಿ.ಗಿರಿಯಪ್ಪ ಕನ್ನಡ, ಸಮಾಜ ವಿಷಯಗಳ ಬಗ್ಗೆ ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ. ಈ ಒಂದು ಸಾಮಾಜಿಕ ಕಾರ್ಯದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮಾಕುಮಾರಿ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ರವಿ, ತುಂಗಣಿ ಕರವಸೂಲಿಗಾರ ಹರೀಶ್‌ ಸಹಕಾರ ನೀಡುತ್ತಿದ್ದಾರೆ ಎಂದರು.

**

 

ನಾವು ಶಿಕ್ಷಣ ಮಾಡುವ ಸಮಯದಲ್ಲಿ ಇಷ್ಟೊಂದು ಅನುಕೂಲ ಮತ್ತು ಅವಕಾಶಗಳು ಇರಲಿಲ್ಲ. ನಾವು ಕಷ್ಟಪಟ್ಟು ಕನಕಪುರಕ್ಕೆ ಹೋಗಿ ಶಾಲೆ ಕಾಲೇಜುಗಳನ್ನು ಮಾಡಿದ್ದೇವೆ. ಪರೀಕ್ಷೆ ಸಂದರ್ಭದಲ್ಲಿ ಟ್ಯುಟೋರಿಯಲ್‌ಗಳಿಗೆ ಹೋಗಿ ಶುಲ್ಕ ಕೊಟ್ಟು ಕಲಿತಿದ್ದೇವೆ. ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲೆಂದು ನಾನು, ಪತ್ನಿ ಉಷಾ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಪ್ರೌಢಶಾಲೆಗಳಲ್ಲಿ ಈ ವಿಶೇಷ ತರಗತಿಗಳನ್ನು ನಡೆಸುತ್ತಿದ್ದೇವೆ. ಸಂಸದ ಡಿ.ಕೆ.ಸುರೇಶ್‌ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ. ಮಕ್ಕಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೆ ಹಾಗೂ ಬೇರೆಯವರಿಗೆ ಪ್ರೇರಣೆಯಾದರೆ ಶ್ರಮ ಸಾರ್ಥಕವಾಗುತ್ತದೆ.
-ರಾಯಸಂದ್ರ ರವಿ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

**
ಉಷಾ ರವಿ ಅವರ ವಿಶೇಷ ತರಗತಿಗಳಿಂದ ನಮಗೆ ಕಲಿಯಲು ಹೆಚ್ಚು ಅನುಕೂಲವಾಗಿದೆ. ಇದರಿಂದ ಪರೀಕ್ಷೆಯಲ್ಲಿ ನಾವು ಹೆಚ್ಚು ಅಂಕಗಳಿಸುತ್ತೇವೆ.
-ಪ್ರಿಯಾ, ವಿದ್ಯಾರ್ಥಿ ತುಂಗಣಿ ಸರ್ಕಾರಿ ಶಾಲೆ

*
ಇಲ್ಲಿಯೇ ಉಳಿಯುವುದರಿಂದ ನಾವು ಓದಲು ಸಹಕಾರಿಯಾಗಿದೆ. ಒಬ್ಬರಿಗೊಬ್ಬರು ಪೈಪೋಟಿಯ ಮೇಲೆ ಓದುತ್ತಿದ್ದೇವೆ. ಶಿಕ್ಷಕರು ಬಂದು ಅತ್ಯಂತ ಸರಳವಾಗಿ ಕಲಿಸಿಕೊಡುತ್ತಿದ್ದಾರೆ. 
-ಉದಯ, ವಿದ್ಯಾರ್ಥಿ ತುಂಗಣಿ ಸರ್ಕಾರಿ ಶಾಲೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು