ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಪರೀಕ್ಷೆ ಆತಂಕ ದೂರಾಯ್ತು; ಆತ್ಮವಿಶ್ವಾಸ ಹೆಚ್ಚಿತು

‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಬಳಗದಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ‘ಪ್ರೇರಣಾ ಕಾರ್ಯಗಾರ
Published 2 ಫೆಬ್ರುವರಿ 2024, 4:42 IST
Last Updated 2 ಫೆಬ್ರುವರಿ 2024, 4:42 IST
ಅಕ್ಷರ ಗಾತ್ರ

ರಾಮನಗರ: ‘ಎಸ್‌ಎಸ್ಎಲ್‌ಸಿ ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಮನಸ್ಸಿನಲ್ಲಿ ಒಂದು ರೀತಿಯ ಆತಂಕ ಶುರುವಾಗಿತ್ತು. ದಿನದಿಂದ ದಿನಕ್ಕೆ ಒತ್ತಡವೆನಿಸತೊಡಗಿತ್ತು. ಅತ್ತ ಹೇಳಿಕೊಳ್ಳಲಾಗದ ಮತ್ತು ಬಿಡಲಾಗದ ಸ್ಥಿತಿಯಲ್ಲಿದೆ. ಕಾರ್ಯಗಾರದಲ್ಲಿ ಭಾಗವಹಿಸಿದ್ದರಿಂದ ಒತ್ತಡ ನಿರ್ವಹಣೆ, ಯೋಜಿತ ಅಧ್ಯಯನ, ಜ್ಞಾಪಕ ತಂತ್ರಗಳು ಸೇರಿದಂತೆ ಹಲವು ವಿಷಯಗಳು ನನ್ನ ಆತಂಕ ದೂರ ಮಾಡಿ, ಒತ್ತಡ ತಗ್ಗಿಸಿದವು. ಅನುಮಾನಗಳನ್ನು ಪರಿಹರಿಸಿ ನಿರಾಳಗೊಳಿಸಿದವು. ಪರೀಕ್ಷೆ ಕುರಿತು ಇದ್ದ ಆತಂಕ ದೂರವಾಗಿ, ಆತ್ಮವಿಶ್ವಾಸ ಹೆಚ್ಚಿತು....’

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಬಳಗವು, ಜಿ.ಪಂ. ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಪ್ರೇರಣಾ ಕಾರ್ಯಾಗಾರ’ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬರ ಅಭಿಪ್ರಾಯವಿದು. ಸಭಾಂಗಣದಲ್ಲಿದ್ದ ವಿದ್ಯಾರ್ಥಿಗಳಿಗೆ ಕಾರ್ಯಾಗಾರವು ಆತ್ಮವಿಶ್ವಾಸದ ಟಾನಿಕ್ ನೀಡಿತು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಗಣ್ಯರ ಅನುಭವದ ನುಡಿಗಳು ಹಾಗೂ ವಿಷಯ ತಜ್ಞರ ಸ್ಪೂರ್ತಿದಾಯಕ ಮಾತುಗಳು, ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಭರವಸೆಯ ನಗೆ ಮೂಡಿಸಿತು. ‘ಪರೀಕ್ಷೆಯಲ್ಲಿ ನಾನು ಉತ್ತಮ ಸಾಧನೆ ಮಾಡಬಲ್ಲೇ’ ಎಂಬ ಹೊಸ ಚೈತನ್ಯ ತುಂಬಿತು.

ಧನ್ಯತಾ ಭಾವ: ‘ಪರೀಕ್ಷಾ ಭಯ ದೂರ ಮಾಡಿಕೊಳ್ಳುವ ಬಗೆ, ಓದಿದ್ದನ್ನು ನೆನಪಿಟ್ಟುಕೊಳ್ಳುವ ತಂತ್ರಗಳು, ವ್ಯಕ್ತಿತ್ವ ವಿಕಸನ ಹಾಗೂ ಜೀವನ ಕೌಶಲ’ ಕುರಿತು ರಾಮನಗರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ಕೆ.ಪಿ. ಬಾಬು ಮಾತನಾಡಿದರು. ಪ್ರೇರಣದಾಯಕ ಮಾತುಗಳ ಜೊತೆಗೆ ಅವರು ಬಿಡುತ್ತಿದ್ದ ಪ್ರಶ್ನೆಗಳ ಬಾಣಗಳಿಗೆ, ವಿದ್ಯಾರ್ಥಿಗಳು ಪ್ರತಿಯಾಗಿ ಉತ್ತರದ ಬಾಣಗಳನ್ನು ಬಿಡುತ್ತಿದ್ದರು. ಮಾತಿನ ಮಧ್ಯೆ ಅವರು ಹಾರಿಸುತ್ತಿದ್ದ ಹಾಸ್ಯ ಚಟಾಕಿಗೆ ಸಭಾಂಗಣ ನಗೆಗಡಲಲ್ಲಿ ತೇಲುತ್ತಿತ್ತು. ಅವರ ಮಾತು ಮುಗಿದಾಗ, ನಮಗೇನೊ ದಕ್ಕಿತು ಎಂಬ ಭಾವ ವಿದ್ಯಾರ್ಥಿಗಳ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಪರೀಕ್ಷಾ ಒತ್ತಡ ನಿವಾರಣೆ ಮತ್ತು ಮಾನಸಿಕ ಸಿದ್ಧತೆ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ಮನೋವೈದ್ಯಕೀಯ ಕಾರ್ಯಕರ್ತೆ ಪದ್ಮರೇಖಾ ಎಸ್. ಅವರು, ಒತ್ತಡ ನಿವಾರಣೆ ಪರಿಹಾರೋಪಾಯಗಳನ್ನು ತಿಳಿಸಿ ಕೊಟ್ಟರು. ಪರೀಕ್ಷೆ ಭಯ ಬಿಟ್ಟು ಸಮಚಿತ್ತದಿಂದ ಪರೀಕ್ಷೆ ಎದುರಿಸಲು ಅನುಸರಿಸಬೇಕಾದ ಕ್ರಮಗಳೇನು? ಮಾನಸಿಕವಾಗಿ ಸದೃಢರಾಗಲು ವಿದ್ಯಾರ್ಥಿ ಪಾಲಿಸಬೇಕಾದ ಸ್ವನಿಯಗಳೇನು ಎಂಬುದನ್ನು ಪ್ರಾತ್ಯಕ್ಷಿಕೆ ಸಮೇತ ವಿವರಿಸಿದರು.

ಕಬ್ಬಿಣದ ಕಡಲೆಯಾದ ಗಣಿತ ಮತ್ತು ವಿಜ್ಞಾನದಲ್ಲಿ ಸುಲಭವಾಗಿ ಅಂಕ ಪಡೆಯಲು ವಿದ್ಯಾರ್ಥಿಗಳು ಯೋಜಿತವಾಗಿ ಹೇಗೆ ಅಧ್ಯಯನ ಮಾಡಬೇಕು ಎಂಬುದರ ಕುರಿತು ಬಿಳಗುಂಬ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಲ್‌.ಸಿ. ಮಹದೇವಯ್ಯ ಮತ್ತು ಅಣ್ಣಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶ್ರೀನಿವಾಸ್ ಸಂಕ್ಷಿಪ್ತವಾಗಿ ತಿಳಿಸಿ ಕೊಟ್ಟರು. ಎರಡೂ ವಿಷಯಗಳ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಅವರಲ್ಲಿದ್ದ ಗೊಂದಲವನ್ನು ದೂರ ಮಾಡಿದರು.

ವಿದ್ಯಾರ್ಥಿಗಳ ಸಹಪಾಠಿ: ‘ಪ್ರಜಾವಾಣಿ’ – ‘ಡೆಕ್ಕನ್ ಹೆರಾಲ್ಡ್’ ಬಳಗದ ಪ್ರಸರಣ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಜಗನ್ನಾಥ ಜೋಯಿಸ್ ಮಾತನಾಡಿ, ‘ನಮ್ಮ ಪತ್ರಿಕಾ ಬಳಗವು ವಿದ್ಯಾರ್ಥಿಗಳಿಗೆ ಪೂರಕವಾದ ಶೈಕ್ಷಣಿಗೆ ಮಾಹಿತಿಯನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಜೊತೆಗೆ, ಪೂರಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರ, ಎಡ್ಯುವರ್ಸ್, ಪಿಯುಸಿ ಬಳಿಕ ಸಿಇಟಿ ಸೇರಿದಂತೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪ್ರವೇಶ ಪರೀಕ್ಷೆಗಳ ಬಗ್ಗೆಯೂ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರಿಗಾಗಿ ವಿಷಯ ತಜ್ಞರಿಂದ ಕಾರ್ಯಾಗಾರ ಆಯೋಜಿಸಿ, ಅವರ ಕನಸಿಗೆ ನೀರೆರೆಯುತ್ತಾ ಬಂದಿದೆ’ ಎಂದು ಹೇಳಿದರು.

ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್, ‘ಪ್ರಜಾವಾಣಿ’ ಬೆಂಗಳೂರು ಗ್ರಾಮಾಂತರ ಬ್ಯುರೊ ಮುಖ್ಯಸ್ಥ ಗವಿಸಿದ್ದಪ್ಪ ಬ್ಯಾಳಿ ಇದ್ದರು. ಶಿಕ್ಷಕ ಶಿವಸ್ವಾಮಿ ಅವರು ನಿರೂಪಣೆ ಮಾಡಿದರು. ಗಣ್ಯರು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.

‘ಪ್ರೇರಣಾ ಕಾರ್ಯಾಗಾರ’ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
‘ಪ್ರೇರಣಾ ಕಾರ್ಯಾಗಾರ’ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
‘ಪ್ರೇರಣಾ ಕಾರ್ಯಾಗಾರ’ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
‘ಪ್ರೇರಣಾ ಕಾರ್ಯಾಗಾರ’ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಕಾರ್ಯಾಗಾರದಲ್ಲಿ ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಪ್ರಜಾವಾಣಿ’ ಪತ್ರಿಕೆಯನ್ನು ಕುತೂಹಲದಿಂದ ಓದುತ್ತಿರುವ ವಿದ್ಯಾರ್ಥಿನಿಯರು
ಕಾರ್ಯಾಗಾರದಲ್ಲಿ ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಪ್ರಜಾವಾಣಿ’ ಪತ್ರಿಕೆಯನ್ನು ಕುತೂಹಲದಿಂದ ಓದುತ್ತಿರುವ ವಿದ್ಯಾರ್ಥಿನಿಯರು

ಪರೀಕ್ಷೆಯನ್ನು ಭಯವಿಲ್ಲದೆ ನಿರಾಳವಾಗಿ ಎದುರಿಸಲು ಕಾರ್ಯಾಗಾರದಲ್ಲಿ ಹಲವು ಟಿಪ್ಸ್‌ಗಳು ಸಿಕ್ಕವು. ಅವುಗಳನ್ನು ಚಾಚೂತಪ್ಪದೆ ಪಾಲಿಸಿ ಹೆಚ್ಚಿನ ಅಂಕಗಳನ್ನು ಗಳಿಸುವೆ

– ಸಿಂಚನಾ ಪಿ ಜಿಜಿಜೆಸಿ ಶಾಲೆ ವಿದ್ಯಾನಗರ ರಾಮನಗರ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಪರೀಕ್ಷೆಯ ಒತ್ತಡವು ಕಾರ್ಯಾಗಾರದಿಂದ ನಿವಾರಣೆಯಾಗಿತು. ಸಂಪನ್ಮೂಲ ವ್ಯಕ್ತಿಗಳು ನೀಡಿದ ಸಲಹೆಗಳು ನನ್ನಲ್ಲಿದ್ದ ಒತ್ತಡದ ಮನೋಭಾವವನ್ನು ತಗ್ಗಿಸಿತು

– ಜೀವನ್ ಕೆ ರಾಮದುರ್ಗ ಪ್ರೌಢಶಾಲೆ ರಾಮನಗರ

ಓದಿನ ವೇಳಾಪಟ್ಟಿ ಯೋಜಿತ ಅಧ್ಯಯನ ಸೇರಿದಂತೆ ಕಾರ್ಯಾಗಾರದಲ್ಲಿ ತಜ್ಞರು ಹೇಳಿದ ಹಲವು ವಿಷಯಗಳು ನನಗೆ ತುಂಬಾ ಹಿಡಿಸಿದವು. ಓದಿನ ವಿಷಯದಲ್ಲಿ ಬದಲಾವಣೆ ಮಾಡಿಕೊಳ್ಳಲು ಅನುಕೂಲವಾಯಿತು

– ಭೂಮಿಕಾ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಶಾಲೆ ರಾಮನಗರ

ಪ್ಲಾನಿಂಗ್ ಮಾಡಿಕೊಂಡು ಸತತ ಪರಿಶ್ರಮ ಹಾಕಿ ಓದಿದರೆ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬಹುದು. ಅದಕ್ಕೆ ನಾವು ಅನುಸರಿಸಬೇಕಾದ ಮಾರ್ಗಗಳನ್ನು ಕಾರ್ಯಾಗಾರ ತೋರಿಸಿದೆ

– ಜಯಶ್ರೀ ಜಿ ಜಿಎಚ್‌ಎಸ್ ಐಜೂರು ರಾಮನಗರ

ಸ್ಫೂರ್ತಿ ತುಂಬಿದ ಮಾತುಗಳು

‘ಭಯ ಬೇಡ; ಭರವಸೆ ಇರಲಿ’ ‘ಪರೀಕ್ಷಾ ಭಯವನ್ನು ಮೊದಲು ನಿಮ್ಮ ತಲೆಯಿಂದ ತೆಗೆಯಿರಿ. ಓದಿನ ವಿಷಯದಲ್ಲಿ ಭರವಸೆ ಇರಬೇಕೇ ಹೊರತು ಭಯವಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯೊಂದೇ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಅದನ್ನು ಮೀರಿಯೂ ಹಲವು ಅವಕಾಶಗಳಿವೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಅವಕಾಶಗಳನ್ನು ಆಯ್ಕೆ ಮಾಡಿಕೊಂಡು ಸಾಧನೆ ಮಾಡಿ. ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಸಮಚಿತ್ತದಿಂದ ಎಲ್ಲವನ್ನೂ ಎದುರಿಸಿ. ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಅಂಕ ಬಂದರೆ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆಯುವ ಶ್ರಮ ಹಾಕಿ. ಪಿಯುಸಿ ಮುಗಿಯುತ್ತಿದ್ದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸಿ. ಕಡಿಮೆ ಅಂಕ ತೆಗೆದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬರನ್ನು ಚನ್ನಾಗಿ ಓದುತ್ತಿದ್ದ ನನ್ನ ಬಳಿಗೆ ಶಾಲೆಯಲ್ಲಿ ಕೂರಿಸಿದ್ದರು. ಪಠ್ಯೇತರ ಚಟುವಟಿಕೆಯಲ್ಲಿ ಚುರುಕಾಗಿದ್ದ ಆ ವಿದ್ಯಾರ್ಥಿನಿ ಮುಂದೆ ನಟನೆಯಲ್ಲಿ ಹೆಸರು ಮಾಡಿದರು. ಈಗವರ ಆಟೊಗ್ರಾಫ್ ಪಡೆಯಲು ಅಭಿಮಾನಿಗಳು ಮುಗಿಬೀಳುತ್ತಾರೆ. ಅವರೇ ನಟಿ ಮೃಣಾಲ್ ಠಾಕೂರ್! ಪಠ್ಯವಷ್ಟೇ ಅಲ್ಲದೆ ಪಠ್ಯೇತರ ಚಟುವಟಿಕೆಗಳು ಸಹ ನಮ್ಮ ಬದುಕನ್ನು ನಿರ್ಧರಿಸುತ್ತವೆ ಎಂಬುದು ನಿಮ್ಮ ಗಮನದಲ್ಲಿರಲಿ. – ದಿಗ್ವಿಜಯ್ ಬೋಡ್ಕೆ ಸಿಇಒ ಜಿಲ್ಲಾ ಪಂಚಾಯಿತಿ ರಾಮನಗರ ‘ಫಲಿತಾಂಶದಲ್ಲಿ ಅಗ್ರ 5 ಸ್ಥಾನದ ಗುರಿ’ ‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಅಗ್ರ 5 ಸ್ಥಾನದಲ್ಲಿ ನೋಡುವಂತಾಗಬೇಕು. ಈ ಗುರಿ ಸಾಧನೆಗಾಗಿ ಫಲಿತಾಂಶ ಸುಧಾರಣೆಗೆ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದೇವೆ. ಅದಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಚನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆದರೆ ನಾವು ಕಂಡಿರುವ ಕನಸು ನನಸಾಗಲಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ತಮಗಿಂತ ಕಡಿಮೆ ಸಾಧನೆ ಮಾಡಿರುವವರೊಂದಿಗೆ ಹೋಲಿಸಿಕೊಳ್ಳಬಾರದು. ಸಾಧನೆ ಮಾಡಿದವರೇ ನಮಗೆ ಸ್ಫೂರ್ತಿಯಾಗಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ಪ್ರಾಮಾಣಿಕವಾಗಿ ಪ್ರಯತ್ನ ಹಾಕಬೇಕು. ಯಾವಾಗಲೂ ಹೃದಯದ ಮಾತು ಕೇಳಬೇಕು. ಕೆಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ನಾನು ಪರೀಕ್ಷೆಗೆ ಹೋಗಲು ಬಸ್‌ ಟಿಕೆಟ್‌ಗೆ ಹಣವಿಲ್ಲದಿದ್ದರಿಂದ ಪರೀಕ್ಷೆಯಿಂದ ವಂಚಿತನಾದೆ. ಆದರೂ ನಿರಾಶೆಗೊಳ್ಳದೆ ಈ ಮಟ್ಟಕ್ಕೆ ಬಂದೆ. ಈಗಿನ ವಿದ್ಯಾರ್ಥಿಗಳಿಗೆ ಅನಾನುಕೂಲಗಳಿಗಿಂತ ಅನುಕೂಲಗಳೇ ಹೆಚ್ಚು. ಇದರ ಪ್ರಯೋಜನ ಪಡೆದು ಉನ್ನತ ಸಾಧನೆ ಮಾಡಿ. ತಂದೆ–ತಾಯಿ ಹಾಗೂ ಗುರುಗಳಿಗೆ ಕೀರ್ತಿ ತನ್ನಿ. – ವಿ.ಸಿ. ಬಸವರಾಜೇಗೌಡ ಉಪ ನಿರ್ದೇಶ ಶಾಲಾ ಶಿಕ್ಷಣ ಇಲಾಖೆ ರಾಮನಗರ ‘ಎಚ್ಚರಿಕೆಯ ಪ್ರಜ್ಞೆ ಇರಲಿ’ ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆ ಕುರಿತು ಸದಾ ಎಚ್ಚರದಿಂದಿರಬೇಕು. ಕೇವಲ ಪರೀಕ್ಷೆಯಷ್ಟೇ ಅಲ್ಲದೆ ಬದುಕಿನಲ್ಲಿ ಯಾವುದೇ ಸಾಧನೆ ಮಾಡಬೇಕಾದರೂ ಈ ಎಚ್ಚರಿಕೆ ಅಗತ್ಯ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿ ಜೀವನದಲಿ ಅಳತೆಗೋಲು ಇದ್ದಂತೆ. ಎಲ್ಲರಲ್ಲೂ ಪರೀಕ್ಷೆ ಬಗ್ಗೆ ಆತಂಕ ಸಹಜ. ಅದನ್ನು ಹೇಗೆ ನಿವಾರಿಸಿಕೊಂಡು ನಿರಾಳವಾಗಿ ಪರೀಕ್ಷೆ ಬರೆಯಬೇಕೆಂಬುದನ್ನು ತಿಳಿಸಿ ಕೊಡುವುದಕ್ಕಾಗಿ ಈ ಕಾರ್ಯಾಗಾರ ಆಯೋಜಿಸಿದ್ದೇವೆ. ವಿದ್ಯಾರ್ಥಿಗಳಿಗೆ ಪತ್ರಿಕೆಯಲ್ಲಷ್ಟೇ ಅಲ್ಲದೆ ಇಂತಹ ಕಾರ್ಯಾಗಾರಗಳ ಮೂಲಕವೂ ಮಾರ್ಗದರ್ಶನ ಮಾಡುತ್ತಾ ಬಂದಿರುವುದು ಪ್ರಜಾವಾಣಿಯ ಹೆಗ್ಗಳಿಕೆ. – ರವೀಂದ್ರ ಭಟ್ಟ ಕಾರ್ಯನಿರ್ವಾಹಕ ಸಂಪಾದಕ ಪ್ರಜಾವಾಣಿ

‘ಕಷ್ಟಪಡದೆ ಇಷ್ಟಪಟ್ಟು ಓದಿ’

‘ವಿದ್ಯಾರ್ಥಿಗಳು ಕಷ್ಟಪಡದೆ ಇಷ್ಟಪಟ್ಟು ಓದಿದಾಗ ಯಾವುದೇ ಪರೀಕ್ಷೆಯಾದರೂ ಸುಲಭ. ದಿನಕ್ಕೆ ನಾಲ್ಕೈದು ತಾಸು ಓದಿದ ಮಾತ್ರಕ್ಕೆ ಎಲ್ಲವೂ ತಲೆಯಲ್ಲಿ ಸಂಗ್ರಹವಾಗುವುದಿಲ್ಲ. ಬದಲಿಗೆ ಇಷ್ಟಪಟ್ಟು ಓದಿದ್ದು ಮಾತ್ರ ನೆನಪಿನಲ್ಲಿ ಉಳಿಯುತ್ತದೆ. ಅದಕ್ಕೆ ಹಲವು ತಂತ್ರಗಳನ್ನು ಅಳವಡಿಸಿಕೊಂಡಾಗ ಓದು ಕಷ್ಟವೆನಿಸದೆ ಇಷ್ಟವಾಗುತ್ತಾ ಹೋಗುತ್ತದೆ. ನದಿ ನಗರ ಇತಿಹಾಸ ಇಸವಿ ಸೇರಿದಂತೆ ಕೆಲ ಮಾಹಿತಿಗಳನ್ನು ಕೋಡ್ ವರ್ಡ್ ಮೂಲಕ ನೆನಪಿಟ್ಟುಕೊಳ್ಳಬೇಕು. ಅಧ್ಯಯನಕ್ಕೆ ವಿಷಯವಾರು ವೇಳಾಪಟ್ಟಿ ಹಾಕಿಕೊಳ್ಳಬೇಕು. ಓದಿದ್ದನ್ನು ಮನನ ಮಾಡಿಕೊಳ್ಳುವ ಜೊತೆಗೆ ಸಹಪಾಠಿಗಳೊಂದಿಗೆ ಚರ್ಚಿಸಬೇಕು. ಯಶಸ್ಸಿನ ಅಷ್ಟಗುಣಗಳನ್ನು ಅಳವಡಿಸಿಕೊಳ್ಳಬೇಕು. ಕಷ್ಟವೆನಿಸುವ ವಿಷಯವನ್ನು ಬಿಡಿ ಬಿಡಿಯಾಗಿ ಅರ್ಥೈಸಿಕೊಂಡು ಓದಿದಾಗ ಸುಲಭವಾಗುತ್ತದೆ. ಸೀರಿಯಸ್ ಆಗಿ ಓದುವ ಬದಲು ಸ್ಮಾರ್ಟ್‌ ಆಗಿ ಓದುವುದರಿಂದ ವಿಷಯವು ನೆನಪಿನಾಳದಲ್ಲಿ ಹೆಚ್ಚು ಉಳಿಯುತ್ತದೆ. – ಬಾಬು ಕೆ.ಪಿ ಉಪನ್ಯಾಸಕ ಡಯಟ್ ರಾಮನಗರ ‘ದೃಢಸಂಕಲ್ಪದಿಂದ ಒತ್ತಡ ದೂರ’ ‘ದೃಢಸಂಕಲ್ಪವು ನಮ್ಮ ಒತ್ತಡವನ್ನು ದೂರ ಮಾಡುವ ಸಾಧನಗಳಲ್ಲೊಂದು. ಇದಕ್ಕಾಗಿ ವಿದ್ಯಾರ್ಥಿ ಜೀವನದಲ್ಲಿ ಕೆಲ ಕ್ರಮಗಳನ್ನು ಅನುರಿಸಬೇಕು. ಓದು ನಿದ್ರೆ ಆಹಾರ ವಿಶ್ರಾಂತಿ ಟಿ.ವಿ–ಮೊಬೈಲ್ ವೀಕ್ಷಣೆ ಸೇರಿದಂತೆ ನಮ್ಮ ದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅನುಕೂಲಕರ ವೇಳಾಪಟ್ಟಿ ಅನುರಿಸಬೇಕು. ಇದು ನಮ್ಮಲ್ಲಿರುವ ಪರೀಕ್ಷಾ ಒತ್ತಡವನ್ನು ತಗ್ಗಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಪರೀಕ್ಷೆ ಬಂದರೆ ಸಹಜವಾದ ಒತ್ತಡವಿರುತ್ತದೆ. ಆದರೆ ಅದು ನಮ್ಮನ್ನು ಕುಗ್ಗಿಸುಷ್ಟು ಬೆಳೆಯಲು ಬಿಡಬಾರದು. ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು. ಬೇರೆಯವರಿಗೆ ಹೋಲಿಸಿಕೊಂಡು ತಮ್ಮ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬಾರದು. ಆರೋಗ್ಯದ ಕಡೆಗೆ ಗಮನ ಕೊಡಬೇಕು. ಎಂತಹ ಸಂದರ್ಭದಲ್ಲೂ ಕುಗ್ಗದೆ ನಾನಿದ್ದನ್ನು ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. – ಪದ್ಮರೇಖಾ ಎಸ್ ಮನೋವೈದ್ಯಕೀಯ ಕಾರ್ಯಕರ್ತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT