ಗುರುವಾರ , ಮೇ 6, 2021
23 °C
ಚನ್ನಪಟ್ಟಣದಲ್ಲಿ ಕೋವಿಡ್‌ ವಿರುದ್ಧ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಡಾ.ಕೆ. ರಾಕೇಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಜಿಲ್ಲೆಯಲ್ಲಿ ಕೊರೊನಾ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೋವಿಡ್ ನಿಯಮಗಳ ಪಾಲನೆ ಹಾಗೂ ಜಾಗೃತಿ ಸಭೆಯಲ್ಲಿ ಅಧಿಕಾರಿಗಳ ಜೊತೆ ಮಾತನಾಡಿದ ಅವರು, ಕೊರೊನಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲೆಯಲ್ಲಿ ಕೊರೊನಾ ಎರಡನೆಯ ಅಲೆ ತಡೆಗಟ್ಟಲು ಮಾಸ್ಕ್ ಹಾಗೂ ಅಂತರ ಪಾಲನೆ ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸುವ ಸಾರ್ವಜನಿಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆಯ ಜೊತೆಗೆ, ವಿವಿಧ ಇಲಾಖೆಗಳು ಕೈಜೋಡಿಸಬೇಕು ಎಂದರು.

ನಗರದ ವ್ಯಾಪ್ತಿಯಲ್ಲಿರುವ ಚಿತ್ರಮಂದಿರಗಳು ಶೇ 50ರಷ್ಟು ಮಾತ್ರ ಭರ್ತಿಯಾಗಬೇಕು. ಕಲ್ಯಾಣ ಮಂಟಪಗಳಲ್ಲಿ ನೂರು ಜನರು ಮಾತ್ರ ಭಾಗವಹಿಸಬೇಕು. ಮದುವೆಗೆ ತಹಶೀಲ್ದಾರ್ ಅನುಮತಿ ಕಡ್ಡಾಯ. ಅವರು ಪಾಸ್‌ಗಳನ್ನು ವಿತರಣೆ ಮಾಡುತ್ತಾರೆ. ನಿಗದಿಗಿಂತ ಹೆಚ್ಚು ಮಂದಿ ಇದ್ದಲ್ಲಿ ಕಲ್ಯಾಣ ಮಂಟಪ ಬಂದ್ ಮಾಡಿಸುವ ಜತೆಗೆ ಕೇಸ್ ದಾಖಲಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಜಾತ್ರಾ ಮಹೋತ್ಸವ, ರಥೋತ್ಸವ ಸೇರಿದಂತೆ ಎಲ್ಲ ದೇವತಾ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಕಾರ್ಯಕ್ರಮಗಳು ಮೊದಲೇ ನಿಗದಿಯಾಗುವ ಕಾರಣ, ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಕಾರ್ಯಕ್ರಮಗಳ ಬಗ್ಗೆ ಗಮನಹರಿಸಬೇಕು. ಮೊದಲೇ ಆಯೋಜಕರು ಹಾಗೂ ಮುಖಂಡರನ್ನು ಕರೆಸಿ ಈ ಬಗ್ಗೆ ಸೂಚನೆಗಳನ್ನು ತಿಳಿಸಬೇಕು. ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಕಾರ್ಯಕ್ರಮಗಳಿಗೆ ಆಸ್ಪದ ನೀಡಬಾರದು ಎಂದರು.

ಸದ್ಯ ನಗರಸಭೆ ಚುನಾವಣೆ ಎದುರಾಗಿದ್ದು, ಚುನವಣಾ ಪ್ರಚಾರ ಸಂದರ್ಭದಲ್ಲಿ ಅಭ್ಯರ್ಥಿಗಳು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತರ ಕಾಪಾಡಬೇಕು. ಗುಂಪುಗೂಡದೆ ಎಚ್ಚರಿಕೆ ವಹಿಸಬೇಕು. ಇದರ ಬಗ್ಗೆ ನಿಗಾವಹಿಸಲು ಈಗಾಗಲೇ ಕ್ಷಿಪ್ರಪಡೆಯ ಮೂರು ತಂಡಗಳನ್ನು ರಚನೆ ಮಾಡಲಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ, ಮುಂದುವರಿಸಿದರೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಕೊರೊನಾ ಚಿಕಿತ್ಸೆ ಉತ್ತಮ ಪ್ರಗತಿಯಲ್ಲಿದೆ. ಇದನ್ನು ಮತ್ತಷ್ಟು ಉತ್ತಮಪಡಿಸಬೇಕು. ಕಡ್ಡಾಯವಾಗಿ ಸಾರ್ವಜನಿಕರ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಸೋಂಕು ಕಂಡುಬಂದ ವ್ಯಕ್ತಿಯನ್ನು ಯಾವುದೇ ಮುಲಾಜಿಲ್ಲದೇ, ಆತನ ರೋಗ ಲಕ್ಷಣದ ಆಧಾರ ಮೇಲೆ ಕ್ವಾರಂಟೈನ್ ಮಾಡಬೇಕು. ಆತನ ಪ್ರಾಥಮಿಕ ಸಂಪರ್ಕದವರ ಮೇಲೂ ನಿಗಾ ವಹಿಸಬೇಕು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಎಲ್ಲ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ತೊಡಗಿಸಿಕೊಳ್ಳಬೇಕು ಎಂದು ಕರೆ
ನೀಡಿದರು.

ಡಿವೈಎಸ್‌ಪಿ ಎಸ್. ಗಿರೀಶ್ ಮಾತನಾಡಿ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ ಜಾಗೃತಿ ಮೂಡಿಸುವುದು ಅವಶ್ಯಕ. ಮಾಸ್ಕ್ ಧರಿಸದೇ ಉಡಾಫೆ ತೋರುವ ಮಂದಿಗೆ ದಂಡ ವಿಧಿಸಬೇಕು. ಇದರ ಜೊತೆಗೆ ಮಾಸ್ಕ್‌ನ ಅಗತ್ಯತೆಯನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದರು.

ಜಿ.ಪಂ ಸಿಇಒ ಇಕ್ರಂ, ತಹಶೀಲ್ದಾರ್ ಎಲ್. ನಾಗೇಶ್, ತಾ.ಪಂ. ಇಒ ಚಂದ್ರು ಭಾಗವಹಿಸಿದ್ದರು. ಪಟ್ಟಣದ ತಾ.ಪಂ ಆವರಣ, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಕೊರೊನಾ ಜಾಗೃತಿ ನಡೆಸಿದರು. ಈ ಮಧ್ಯೆ ಮಾಸ್ಕ್ ಧರಿಸದವರಿಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು