ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭಾಷೆ ಉಳಿಸಲು ಹೋರಾಟ ವಿಷಾದಕರ

ಸರ್ಕಾರಿ ಕನ್ನಡ ಶಾಲೆಗಳ ವಿಲೀನ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭದ ಪರಿಣಾಮ ಕುರಿತ ಚಿಂತನಾಗೋಷ್ಠಿ
Last Updated 7 ಜುಲೈ 2019, 13:38 IST
ಅಕ್ಷರ ಗಾತ್ರ

ರಾಮನಗರ: ‘ರಾಜ್ಯದಲ್ಲಿ ಇರುವಷ್ಟು ಭಾಷಾ ಸಂಘಟನೆಗಳು ದೇಶದ ಬೇರಾವುದೇ ರಾಜ್ಯಗಳಲ್ಲೂ ಇಲ್ಲ. ಆದರೂ ಭಾಷೆಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವುದು ವಿಷಾದಕರ ಸಂಗತಿ’ ಎಂದು ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಮಧುಸೂದನಾಚಾರ್ಯ ಜೋಷಿ ಹೇಳಿದರು.

ಇಲ್ಲಿನ ಸ್ಫೂರ್ತಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಭಾನುವಾರ ನಡೆದ ‘ಸರ್ಕಾರಿ ಕನ್ನಡ ಶಾಲೆಗಳ ವಿಲೀನ ಹಾಗೂ ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭದ ಪರಿಣಾಮಗಳು’ ಕುರಿತ ಚಿಂತನಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶೇ 80 ರಷ್ಟು ಜನರು ಕನ್ನಡ ಭಾಷೆಯಲ್ಲಿ ಕಲಿತು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇಂದು ಇವರೆಲ್ಲರ ಮಕ್ಕಳು ಇಂಗ್ಲಿಷ್ ಮಾಧ್ಯಮಗಳಲ್ಲಿ ಕಲಿಯುತ್ತಿದ್ದಾರೆ. ಸರ್ಕಾರ ಇಂಗ್ಲಿಷ್ ಮಾಧ್ಯಮ ಪ್ರಾರಂಭ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಖಾಸಗಿ ಕ್ಷೇತ್ರಕ್ಕೆ ಒತ್ತೆ ಇಡುವ ಕೆಲಸಕ್ಕೆ ಮುಂದಾಗಿದೆ ಎಂದು ಟೀಕಿಸಿದರು.

ವಿಶ್ವದ ಜರ್ಮನ್, ಜಪಾನ್, ಚೀನಾ, ರಷ್ಯ ದೇಶಗಳಲ್ಲಿ ಮಾತೃ ಭಾಷೆಯಲ್ಲಿಯೆ ಶಿಕ್ಷಣ ನೀಡಲಾಗುತ್ತಿದೆ. ಈ ದೇಶಗಳು ಅಭಿವೃದ್ಧಿಯಲ್ಲಿ ಇತರೆ ದೇಶಗಳಿಗಿಂತ ಮುಂದಿರುವುದನ್ನು ಮನಗಂಡು ಇಂಗ್ಲಿಷ್ ಭ್ರಮೆಯಿಂದ ಹೊರಬರಬೇಕಾಗಿದೆ ಎಂದರು.

ಸಹಪ್ರಾಧ್ಯಾಪಕಿ ಡಾ.ಬಿ.ಟಿ. ನೇತ್ರಾವತಿ ಗೌಡ ಮಾತನಾಡಿ, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಒಂದರಿಂದ ಎಂಟನೇ ತರಗತಿವರೆಗೆ ಮಾತೃಭಾಷಾ ಕಲಿಕೆ ಕಡ್ಡಾಯ ಮಾಡುವುದು ಸೇರಿದಂತೆ ಹಲವು ದಿಟ್ಟ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವುದು ಅವಶ್ಯ ಎಂದು ಸಲಹೆ ನೀಡಿದರು.

ರೈತಪರ ಹೋರಾಟಗಾರ್ತಿ ಅನಸೂಯಮ್ಮ ಮಾತನಾಡಿ, ಸಂವಿಧಾನಬದ್ಧವಾಗಿ ಪ್ರತಿಯೊಬ್ಬ ಪ್ರಜೆಗೂ ಕಡ್ಡಾಯ ಹಾಗೂ ಉಚಿತ ಶಿಕ್ಷಣ ನೀಡಬೇಕು. ಹೀಗಿರುವಾಗ ಶಾಲೆಗಳ ವಿಲೀನ ಎನ್ನುವುದೇ ಅವೈಜ್ಞಾನಿಕ ಕ್ರಮ. ಇದರಿಂದ ಇಂಗ್ಲಿಷ್ ಮಾಧ್ಯಮಕ್ಕೆ ಪೋಷಕರಿಗೆ ಸರ್ಕಾರವೇ ಉತ್ತೇಜನ ನೀಡಿದಂತಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಶಿಕ್ಷಕ ಸಿ.ವಿ. ಜಯಣ್ಣ ಮಾತನಾಡಿ,ಕನ್ನಡ ಭಾಷೆ ಮತ್ತು ಸರ್ಕಾರಿ ಶಾಲೆಗಳು ಉಳಿದುಕೊಂಡು ಗ್ರಾಮೀಣ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯುವಂತೆ ಮಾಡಲು ಒಂದು ಪ್ರದೇಶವನ್ನು ನಿಗದಿಪಡಿಸಿಕೊಂಡು ಸುತ್ತಮುತ್ತಲ ಆರೇಳು ಶಾಲೆಗಳನ್ನು ವಿಲೀನ ಮಾಡಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಎರಡರಲ್ಲಿಯೂ ಶಿಕ್ಷಣ ನೀಡುವ ಮೂಲಕ ಮಾದರಿ ಶಾಲೆಗಳನ್ನು ಪ್ರಾರಂಭ ಮಾಡಿದರೆ ಸರ್ಕಾರಿ ಶಾಲೆಗಳ ಕಡೆಗೆ ಪೋಷಕರ ಒಲವು ಹೆಚ್ಚಾಗಬಹುದು ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ.ರಾಮೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್, ಗೌರವ ಕಾರ್ಯದರ್ಶಿ ಎಚ್.ಎಸ್. ರೂಪೇಶ್ ಕುಮಾರ್, ಕೋಶಾಧ್ಯಕ್ಷ ಎಚ್.ಪಿ. ನಂಜೇಗೌಡ, ಮಾಗಡಿ ತಾಲ್ಲೂಕು ಘಟಕದ ಅಧ್ಯಕ್ಷೆ ಕಲ್ಪನಾ ಶಿವಣ್ಣ, ಚನ್ನಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ಮತ್ತಿಕೆರೆ ಚಲುವರಾಜು, ಸಾಹಿತಿ ಡಾ. ಅಂಕನಹಳ್ಳಿ ಪಾರ್ಥ, ನಿವೃತ್ತ ಪ್ರಾಚಾರ್ಯ ಎಸ್.ಎಲ್. ವನರಾಜು, ಶಿಕ್ಷಕರಾದ ಎಸ್. ಸಮಂಗಲಸಿದ್ದರಾಜು, ಎಚ್.ಕೆ. ಶೈಲಾಶ್ರೀನಿವಾಸ್, ಜಿ.ಡಿ. ಚಂದ್ರಾವತಿ, ಎಚ್.ಎನ್. ಲಕ್ಷ್ಮೀವೆಂಕಟೇಶ್, ರಮೇಶ್ ರಾಹುಗೋಡ್ಲು, ನಂ. ಶಿವಲಿಂಗಯ್ಯ, ಕೂ.ಗಿ. ಗಿರಿಯಪ್ಪ, ಉಪನ್ಯಾಸಕರಾದ ಜಿ.ಎಚ್. ರಾಮಯ್ಯ, ಎಸ್. ನರಸಿಂಹಸ್ವಾಮಿ, ಸಿ. ರಮೇಶ್ ಹೊಸದೊಡ್ಡಿ, ಎಸ್. ಮಂಜುನಾಥ್, ಎಸ್ ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಇಟ್ಟಮಡು ಗೋಪಾಲ್, ಯಶೋಧ, ಸೈಯ್ಯದ್ ಸಜ್ಜನ್, ಬಸವರಾಜು, ಜಿ. ಕೃಷ್ಣಾನಾಯಕ್, ಜಾಲಮಂಗಲ ನಾಗರಾಜ್, ಪ್ರೊ. ರವಿಕುಮಾರ್, ಗಾಯಕ ಚೌ.ಪು. ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT