ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಬ್ಯಾಂಕ್ ಖಾತೆಗಾಗಿ ವಿದ್ಯಾರ್ಥಿ–ಪೋಷಕರ ಅಲೆದಾಟ

ವಿದ್ಯಾರ್ಥಿವೇತನ ಪಡೆಯಲು ಬೇಕು ಖಾತೆ: ಶೂನ್ಯ ಠೇವಣಿಗೆ ಒಪ್ಪದ ಸಿಬ್ಬಂದಿ
Last Updated 26 ಸೆಪ್ಟೆಂಬರ್ 2018, 14:01 IST
ಅಕ್ಷರ ಗಾತ್ರ

ರಾಮನಗರ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇದೇ 30 ಕಡೆಯ ದಿನವಾಗಿದ್ದು, ಅದಕ್ಕೆ ಅವಶ್ಯವಾದ ಬ್ಯಾಂಕ್‌ ಖಾತೆ ತೆರೆಯಲು ವಿದ್ಯಾರ್ಥಿಗಳು ಹಾಗೂ ಪೋಷಕರು ಬ್ಯಾಂಕುಗಳಿಗೆ ಅಲೆಯತೊಡಗಿದ್ದಾರೆ.

ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಈ ಸಂಬಂಧ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಈ ಸಲವತ್ತು ಪಡೆಯುವ ವಿದ್ಯಾರ್ಥಿಯು ಕಡ್ಡಾಯವಾಗಿ ತನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕು ಎಂದು ಆದೇಶಿಸಿದೆ. ಕಳೆದ ವರ್ಷ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಜೋಡಿಸುವಂತೆ ಸೂಚಿಸಿದೆ.

ಅದರಂತೆ ಪೋಷಕರು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಲು ಬ್ಯಾಂಕಿನಿಂದ ಬ್ಯಾಂಕಿಗೆ ಅಲೆಯುತ್ತಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎನ್ನುವುದು ಪೋಷಕರ ದೂರು.

ಸಮಸ್ಯೆ ಏನು?: ವಿದ್ಯಾರ್ಥಿವೇತನಕ್ಕೆಂದು ತೆರೆಯುವ ಖಾತೆಗಳು ಆ ಉದ್ದೇಶಕ್ಕೆ ಮಾತ್ರ ಸೀಮಿತವಾಗಿದ್ದು, ಉಳಿದಂತೆ ಖಾತೆಗಳಲ್ಲಿ ಯಾವುದೇ ಹಣಕಾಸು ವ್ಯವಹಾರ ನಡೆಯದ ಕಾರಣ ಅಂತಹ ಖಾತೆಗಳನ್ನು ತೆರೆಯಲು ಬ್ಯಾಂಕುಗಳ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ. ಅರ್ಜಿಗಳ ಕೊರತೆ, ಸಿಬ್ಬಂದಿ ಕೊರತೆಯ ನೆಪವೊಡ್ಡಿ ಗ್ರಾಹಕರನ್ನು ವಾಪಸ್ ಕಳುಹಿಸುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ದೂರು.

ಕೆಲವು ಬ್ಯಾಂಕುಗಳು ಅರ್ಜಿಗಳನ್ನು ಸ್ವೀಕರಿಸುತ್ತಿವೆಯಾದರೂ ಖಾತೆ ಆರಂಭಕ್ಕೆ ತಿಂಗಳ ಅವಧಿ ನೀಡುತ್ತಿವೆ. ಇನ್ನೂ ಕೆಲವು ಕಡೆ ಠೇವಣಿ ಇಡಲು ಸೂಚಿಸಲಾಗುತ್ತಿದೆ.

ಬ್ಯಾಂಕಿನವರ ವಾದವೇನು?: ವಿದ್ಯಾರ್ಥಿ ವೇತನಕ್ಕೆಂದೇ ಸಾವಿರಾರು ಖಾತೆಗಳನ್ನು ತೆರೆದರೆ ಮುಂದೆ ಅವುಗಳ ನಿರ್ವಹಣೆಯೂ ಹೊರೆಯಾಗುತ್ತದೆ ಎನ್ನುವುದು ಬ್ಯಾಂಕ್ ಸಿಬ್ಬಂದಿಯ ವಾದವಾಗಿದೆ.

‘ಇಂತಹ ಖಾತೆಗಳಲ್ಲಿ ವರ್ಷಕ್ಕೆ ಒಮ್ಮೆ ಹಣ ಬರುವುದು ಬಿಟ್ಟರೆ ಬೇರೆ ವಹಿವಾಟು ಇರುವುದಿಲ್ಲ. ಶೂನ್ಯ ಠೇವಣಿ ಆಗಿಬಿಡುತ್ತದೆ. ಇದು ಬ್ಯಾಂಕ್‌ ವಹಿವಾಟಿನ ಮೇಲೆಯೂ ಪರಿಣಾಮ ಬೀರುತ್ತದೆ’ ಎಂದು ಬ್ಯಾಂಕ್‌ವೊಂದರ ಸಿಬ್ಬಂದಿ ಹೇಳುತ್ತಾರೆ.

ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಜಿಲ್ಲಾಡಳಿತವು ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎನ್ನುವುದು ಪೋಷಕರ ಆಗ್ರಹವಾಗಿದೆ.

ಶಿಕ್ಷಣ ಇಲಾಖೆ ಹೇಳುವುದೇನು?
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಂಗಮಾರೇಗೌಡ ‘ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆ ಇದ್ದರೆ ಸಾಕು. ಅವರ ಪೋಷಕರ ಖಾತೆ ಸಂಖ್ಯೆ ನೀಡಿದರೂ ಅಲ್ಲಿಗೆ ವಿದ್ಯಾರ್ಥಿವೇತನ ನೀಡುವ ವ್ಯವಸ್ಥೆ ಇದೆ’ ಎಂದು ಹೇಳಿದರು.
‘ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಮಾಡದೇ ಖಾತೆ ತೆರೆದುಕೊಡುವಂತೆ ಜಿಲ್ಲಾಧಿಕಾರಿಗಳು ಬ್ಯಾಂಕ್‌ ಸಿಬ್ಬಂದಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಬ್ಯಾಂಕಿನ ಸಿಬ್ಬಂದಿಯೂ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಬೇಕು’ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಹೇಳುವುದೇನು?
ವಿದ್ಯಾರ್ಥಿಗಳ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆಯುವುದು ಕಡ್ಡಾಯವಾಗಿದೆ. ಬ್ಯಾಂಕ್‌ ಸಿಬ್ಬಂದಿ ಸಹಕಾರ ನೀಡದಿದ್ದಲ್ಲಿ, ಖಾತೆ ತೆರೆಯಲು ನಿರಾಕರಿಸಿದಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿಗೆ ದೂರು ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಬಹುತೇಕ ಬ್ಯಾಂಕುಗಳಲ್ಲಿ ಮಕ್ಕಳ ಹೆಸರಿನಲ್ಲಿ ಖಾತೆ ಮಾಡಿಸಿಕೊಳ್ಳುತ್ತಿಲ್ಲ. ನಾಳೆ–ನಾಳಿದ್ದು ಬರುವಂತೆ ಸತಾಯಿಸುತ್ತಿದ್ದಾರೆ
-ರಮೇಶ್, ಪೋಷಕರು

ವಿದ್ಯಾರ್ಥಿಗಳ ಖಾತೆ ತೆರೆಯುವ ಸಂಬಂಧ ಬ್ಯಾಂಕ್ ಸಿಬ್ಬಂದಿಗೆ ಜಿಲ್ಲಾಧಿಕಾರಿ ಈಗಾಗಲೇ ಸೂಚನೆ ನೀಡಿದ್ದಾರೆ. ಎಲ್ಲರೂ ಸಹಕರಿಸಬೇಕು. -ಗಂಗಮಾರೇಗೌಡ, ಡಿಡಿಪಿಐ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT