ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ. ಅಧಿಕಾರಿಗಳ ಕಿರುಕುಳದಿಂದ ಪತಿ ಆತ್ಮಹತ್ಯೆ: ರಮೇಶ್ ಪತ್ನಿ ಸೌಮ್ಯಾ ಅಳಲು

Last Updated 14 ಅಕ್ಟೋಬರ್ 2019, 21:05 IST
ಅಕ್ಷರ ಗಾತ್ರ

ರಾಮನಗರ: 'ಅವರು ಟಾರ್ಚರ್ ಕೊಡ್ತಿದ್ರು. ಏನು ಹೇಳಿ ಅಂತ ಟಾರ್ಚರ್ ಕೊಡ್ತಿದ್ರು. ಹೀಗೆ ಟಾರ್ಚರ್ ಕೊಟ್ರೆ ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಅಂತ ನನ್ನ ಮುಂದೆಯೇ ಪತಿ ಅಧಿಕಾರಿಗಳಿಗೆ ಹೇಳಿದ್ರು' ಎಂದು ರಮೇಶ್ ಪತ್ನಿ ಸೌಮ್ಯಾ ಅಳಲು ತೋಡಿಕೊಂಡರು.

ಸೋಮವಾರ ಮೆಳೆಹಳ್ಳಿಯ ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ‌ ನೀಡಿದ ಅವರು ಐ.ಟಿ. ಅಧಿಕಾರಿಗಳು ತಮ್ಮ ಪತಿಯನ್ನು ವಿಚಾರಣೆ ನಡೆಸಿದ ಕುರಿತು ವಿವರಿಸಿದರು.

'ರಮೇಶ್ ಅವರು ಅಧಿಕಾರಿಗಳಿಗೆ ನಾನು ಕೇವಲ ಟೈಪಿಸ್ಟ್ ಅಷ್ಟೇ, ನನಗೇನೂ ಗೊತ್ತಿಲ್ಲ. ನನಗೆ ಮಾನ ಮರ್ಯಾದೆ ಹೋಗುತ್ತೆ. ಹೀಗೆ ಮಾಡಿದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತ ಹೇಳುತ್ತಿದ್ದರು. ಐ.ಟಿ. ಅಧಿಕಾರಿಗಳು ನನ್ನ ಪತಿಗೆ ನಿಮ್ದೇನೂ ಇಲ್ಲ, ಪರಮೇಶ್ವರ್ ಬಗ್ಗೆ ಏನಾದ್ರೂ ಇದ್ರೆ ಹೇಳಿ ಅಂದ್ರು, ದುಡ್ಡಿನ ವ್ಯವಹಾರನೋ, ಕಾಲೇಜಿನ ವ್ಯವಹಾರನೋ ನಿಮಗೆ ಗೊತ್ತ ಎಂದು ಕೇಳಿದರು. ಅದಕ್ಕೆ ರಮೇಶ್ ನನಗೇನೂ ಗೊತ್ತಿಲ್ಲ. ಕೆಲಸ ಮಾಡ್ತಿದ್ದೇನೆ. ನನಗೇನೂ ಗೊತ್ತಿಲ್ಲ ಅಂತ ಉತ್ತರ ಕೊಟ್ಟರು. ನನ್ನ ಮಗಳ ತಲೆಯ ಮೇಲೆ ಕೈ ಇಟ್ಟು ಆಣೆ ಮಾಡಿ ಏನೂ ಗೊತ್ತಿಲ್ಲ ಎಂದರು' ಎಂದು ಅವರು ವಿವರಿಸಿದರು.

'ಐಟಿ ಅಧಿಕಾರಿಗಳು ಪತಿಯನ್ನು ಜೊತೆಯಲ್ಲಿ ಕರೆದುಕೊಂಡು ಬಂದು, ಜೊತೆಯಲ್ಲೇ ಕರೆದುಕೊಂಡು ಹೋದರು. ಜತೆಗೆ ಒಂದು ದಿನ ಬರಲ್ಲ ತನಿಖೆ ನಡೆಸಬೇಕು ಅಂತ ಹೇಳಿ ಹೊರಟು ಹೋದರು. ನಮ್ಮ ಪತಿಯವರೇ ಐ.ಟಿ. ಅಧಿಕಾರಿಗಳನ್ನು ಪರಿಚಯಿಸಿ, ನಮ್ಮ ಮನೆ ರೇಡ್ ಮಾಡುತ್ತಾರೆ ಎಂದರು. ಐ.ಟಿ. ಅಧಿಕಾರಿಗಳು ಬರುವುದಕ್ಕೆ ಮುನ್ನ ಟಿವಿಯಲ್ಲಿ ಡಿಸಿಎಂ ಪಿಎ ಮನೆ ಮೇಲೆ ರೇಡ್ ಅಂತ ಬರುತ್ತಿತ್ತು. ಅಲ್ಲಿ ಏನು ನಡೆಯಿತು ಎಂದು ರಮೇಶ್ ಹೇಳಲಿಲ್ಲ' ಎಂದು ತಿಳಿಸಿದರು.

'ಅಧಿಕಾರಿಗಳು ಎರಡು ದಿನ ತಮ್ಮ ಬಳಿ ಇರಿಸಿಕೊಂಡಿದ್ದರು, ಪೋನ್ ತೆಗೆದುಕೊಂಡಿದ್ದರು. ಐಟಿ ದಾಳಿಯಿಂದಲೇ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ರೇಡ್ ಕುರಿತು ಸಿ.ಸಿ. ಟಿವಿಯಲ್ಲಿ ರೆಕಾರ್ಡ್ ಆಗಿದೆ. ಅವರು ಬಂದಿರುವುದು ಎಲ್ಲವೂ ಇದೆ. ಇನ್ನು ಪೊಲೀಸ್ ಠಾಣೆಯಲ್ಲಿ ಪತಿ ಏನು ಹೇಳಿದ್ದಾರೆ ಅದರ ಮಾಹಿತಿ ಕೊಟ್ಟಿದ್ದೇನೆ' ಎಂದರು.

ರಮೇಶ್ ತಾಯಿ ಸಾವಿತ್ರಮ್ಮ ಮಾತನಾಡಿ 'ಅಪ್ಪ ಬೇಕು ಎಂದು ಮಕ್ಕಳು ಕೇಳುತ್ತಿವೆ. ನನ್ನ ಮಗ ಆತನ ಹೆಂಡ್ತಿ-ಮಕ್ಕಳು, ನಮ್ಮನ್ನ ಚೆನ್ನಾಗಿ ನೋಡಿಕೊಳ್ತಿದ್ದ, ಒಂದು ವಾರದಿಂದ ಆತ ಫೋನ್ ಮಾಡಿರಲಿಲ್ಲ. ಆದರೆ ಆತ್ಮಹತ್ಯೆ‌ ಮಾಡಿಕೊಳ್ಳುವ ಕೆಲ ಸಮಯದ ಹಿಂದಷ್ಟೇ ಮಾತನಾಡಿದ್ದ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT