ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ: ವಿಜಯಕುಮಾರಿ

ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮ; ಗಣ್ಯರಿಂದ ಭಿತ್ತಿಪತ್ತ ಬಿಡುಗಡೆ
Published 15 ಸೆಪ್ಟೆಂಬರ್ 2023, 4:21 IST
Last Updated 15 ಸೆಪ್ಟೆಂಬರ್ 2023, 4:21 IST
ಅಕ್ಷರ ಗಾತ್ರ

ರಾಮನಗರ: ‘ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಸವಾಲುಗಳಿಗೆ ಎದೆಗುಂದದೆ ಅವುಗಳನ್ನು ಧೈರ್ಯದಿಂದ ಎದುರಿಸಿ ಜಯಿಸಬೇಕು. ಸಮಸ್ಯೆಗಳನ್ನು ನಾವು ಹೇಗೆ ಪರಿಹರಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಸಾಮರ್ಥ್ಯವೂ ಗೊತ್ತಾಗುತ್ತದೆ’ ಎಂದು ನಗರಸಭೆ ಅಧ್ಯಕ್ಷೆ ವಿಜಯಕುಮಾರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ವತಿಯಿಂದ ರಾಮನಗರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ತಮಗಿರುವ ಸಮ್ಯಸೆಗಳಿಂದ ಹೊರಬರಲು ಸಾಧ್ಯವೇ ಇಲ್ಲ ಎಂಬ ತಪ್ಪು ತಿಳಿವಳಿಕೆಯನ್ನು ಹಲವರು ಹೊಂದಿರುತ್ತಾರೆ. ಇತ್ತೀಚೆಗೆ ಅತಿಯಾದ ಒಂಟಿತನ, ಮಾನಸಿಕ ಕಾಯಿಲೆಗಳು, ಮಾದಕ ವಸ್ತುಗಳ ಬಳಕೆ, ಹೆಚ್ಚಿನ ಒತ್ತಡ, ಆರ್ಥಿಕ ನಷ್ಟಗಳು ಮನೋಸ್ಥೈರ್ಯ ಕುಗ್ಗಿಸುತ್ತವೆ. ಹಾಗಂತ, ಅವುಗಳಿಂದ ವಿಮುಖರಾಗಲು ಆತ್ಮಹತ್ಯೆ ದಾರಿ ಹಿಡಿಯುವುದು ತಪ್ಪು’ ಎಂದರು.

‘ಜೀವನದಲ್ಲಿ ಎಂತಹದ್ದೇ ಸಮಸ್ಯೆಗಳನ್ನು ಎದುರಿಸುವ ಧೈರ್ಯವನ್ನು ಮೈಗೂಡಿಸಿಕೊಳ್ಳಬೇಕು. ಮನುಷ್ಯರಿಗೆ ಸಿಗುವುದು ಕೇವಲ ಒಂದು ಜೀವನ. ಅದನ್ನು ಆತ್ಮಹತ್ಯೆ ಮೂಲಕ ಕೊನೆಗೊಳಿಸಿಕೊಳ್ಳಬಾರದು’ ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷ ಸೋಮಶೇಖರ್ ಮಾತನಾಡಿ, ‘ನಮ್ಮಲ್ಲಿ ಹೆಚ್ಚಾಗಿ ಯುವಜನರು ಆತ್ಮಹತ್ಯೆ ಮಾಡಿಕೊಂಡು ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಳುತ್ತಿದ್ದಾರೆ. ಯಾರೇ ಆದರು ಆತ್ಮಹತ್ಯೆ ಮಾಡಿಕೊಳುವ ಮೊದಲು ಜನ್ಮ ಕೊಟ್ಟ ತಂದೆ ತಾಯಿಯನ್ನು ನೆನಪು ಮಾಡಿಕೊಳ್ಳಬೇಕು’ ಎಂದರು.

‘ಇತ್ತೀಚೆಗೆ ಯುವಜನರಲ್ಲಿ ಮಾದಕವಸ್ತುಗಳ ಬಳಕೆ ಹೆಚ್ಚಾಗುತ್ತಿದೆ. ಇದರಿಂದಾಗಿ, ಅವರಲ್ಲಿ ಒತ್ತಡ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಸೇರಿದಂತೆ ವಿವಿಧ ರೀತಿಯ ಒತ್ತಡಗಳನ್ನು ನಿವಾರಿಸಲು ಸಾಧ್ಯವಾಗದೆ ಆತ್ಮಹತ್ಯೆ ಹಾದಿ ಹಿಡಿಯುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಮೊದಲಿಗೆ ಮಾದಕವಸ್ತುಗಳಿಂದ ದೂರ ಉಳಿಯಬೇಕು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಓದಿನ ಜೊತೆಗೆ, ಗುರಿ ಸಾಧನೆಯತ್ತ ಗಮನ ಕೊಡಬೇಕು’ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಆರೋಗ್ಯ ಕುಟುಂಬ ಮತ್ತು ಕಲ್ಯಾಣ ಅಧಿಕಾರಿ ಡಾ. ಕಾಂತರಾಜು ಮಾತನಾಡಿ, ‘ಮನುಷ್ಯ ಕೇವಲ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಆರೋಗ್ಯವಾಗಿರಬೇಕು. ಯಾವುದೇ ಕಾರಣಕ್ಕೂ ಮಾನಸಿಕವಾಗಿ ಕೊರಗಬಾರದು. ಜೀವನದಲ್ಲಿ ಬರುವ ಎಲ್ಲಾ ತೊಂದರೆಗಳನ್ನು ಧೈರ್ಯದಿಂದ ಎದುರಿಸಬೇಕು’ ಎಂದರು.

‘ಯಾವುದೆ ಕಾರಣಕ್ಕೂ ಭಯಪಡಬಾರದು. ಎಲ್ಲಾ ಸಮಸ್ಯೆಗಳಿಗೂ ಒಂದಲ್ಲ ಒಂದು ಪರಿಹಾರ ಇದ್ದೇ ಇರುತ್ತದೆ. ಅದನ್ನು ಕಂಡುಕೊಳ್ಳುವ ತಾಳ್ಮೆಯನ್ನು ಮೈಗೂಡಿಸಿಕೊಳ್ಳಬೇಕು. ಆದರ್ಶ ವ್ಯಕ್ತಿಗಳ ಪುಸ್ತಕಗಳನ್ನು ಓದಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನ ನಡೆಸಬೇಕು’ ಎಂದು ತಿಳಿಸಿದರು.

ಆತ್ಮಹತ್ಯೆ ತಡೆ ದಿನಾಚರಣೆ ಸಪ್ತಾಹದ ಭಿತ್ತಿಪತ್ರವನ್ನು ಗಣ್ಯರು ಬಿಡುಗಡೆ ಮಾಡಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಸಿ. ಮಂಜುನಾಥ್, ಆರ್.ಸಿ.ಎಚ್ ಅಧಿಕಾರಿ ಡಾ. ರಾಜು, ಮಾನಸಿಕ ಆರೋಗ್ಯ ವಿಭಾಗದ ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಾದ ಪದ್ಮರೇಖಾ, ಅರೆ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.

‘ಆತ್ಮಹತ್ಯೆ: 5ನೇ ಸ್ಥಾನದಲ್ಲಿ ರಾಜ್ಯ’

‘ದೇಶದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿರುವ ರಾಜ್ಯಗಳ ಪೈಕಿ ಕರ್ನಾಟಕ 5ನೇ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಜನರು ಅತಿಯಾದ ಸಾಲ ಪ್ರೀತಿ ಮಾನಸಿಕ ಆರೋಗ್ಯ ಸಮಸ್ಯೆ ಪರೀಕ್ಷೆಯಲ್ಲಿ ಅನುತ್ತೀರ್ಣ ಮದ್ಯಪಾನ ಮತ್ತು ಮಾದಕ ವಸ್ತುಗಳ ಬಳಕೆ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ಕುಗ್ಗುವಿಕೆ ಮತ್ತು ಒಂಟಿತನದ ಭಾವನೆ ಖಿನ್ನತೆಯಿಂದ ಬಳಲುತ್ತಿರುವವರಲ್ಲಿ ಆತ್ಮಹತ್ಯೆಯ ಆಲೋಚನೆಯು ಸಾಮಾನ್ಯರಿಗಿಂತ 20 ಪಟ್ಟು ಹೆಚ್ಚಿರುತ್ತದೆ. ನಾವು ಅಂತವರನ್ನು ಗುರುತಿಸಿ ಸರಿಯಾದ ಮಾರ್ಗದರ್ಶನವನ್ನು ನೀಡಬೇಕು. ಆತ್ಯಹತ್ಯೆ ಮಾಡಿಕೊಳ್ಳುತ್ತಿರುವವರು ಕಂಡುಬಂದರೆ ತಕ್ಷಣ ತಡೆಯಬೇಕು. ಆತ್ಮಹತ್ಯೆ ಆಲೋಚನೆ ಹೆಚ್ಚಾಗಿ ಕಾಡುತ್ತಿದ್ದರೆ ರಾಮನಗರ ಜಿಲ್ಲಾ ಮಾನಸಿಕ ಆರೋಗ್ಯ ಸಹಾಯವಾಣಿ-8050076646 ಗೆ ಕರೆ ಮಾಡಿ ನೆರವು ಪಡೆಯಬೇಕು’ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋರೋಗ ತಜ್ಞರಾದ ಡಾ. ಆದರ್ಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT