ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ ವಿ.ವಿ | ರೈತರಿಗೆ ಸೂಕ್ತ ಪರಿಹಾರ ಕೊಡಿ: ಸ್ವಾಮೀಜಿಗಳ ಒತ್ತಾಯ

ಭೂಮಿ ಕೊಟ್ಟ ರೈತರ ಬೇಡಿಕೆ ಈಡೇರಿಸಲು ಸಮಿತಿ ರಚಿಸಲು ಸ್ವಾಮೀಜಿಗಳ ಒತ್ತಾಯ
Published : 22 ಸೆಪ್ಟೆಂಬರ್ 2024, 15:46 IST
Last Updated : 22 ಸೆಪ್ಟೆಂಬರ್ 2024, 15:46 IST
ಫಾಲೋ ಮಾಡಿ
Comments

ರಾಮನಗರ: ನಗರದ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಭೂಮಿ ಕೊಟ್ಟಿರುವ ರೈತರಿಗೆ ಸೂಕ್ತ ಪರಿಹಾರದ ಜೊತೆಗೆ, ಅವರ ಇತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಈ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಬೇಕು ಎಂದು ರೈತರ ಪರವಾಗಿ ವಿವಿಧ ಸ್ವಾಮೀಜಿಗಳು ಒತ್ತಾಯಿಸಿದ್ದಾರೆ. ಈ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರೊಂದಿಗೆ ಭಾನುವಾರ ಸಭೆ ನಡೆಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚನ್ನಪಟ್ಟಣದ ಕುಡಿನೀರು ಕಟ್ಟೆ ವಿರಕ್ತ ಮಠದ ಶಿವರುದ್ರ ಸ್ವಾಮೀಜಿ, ‘ವಿ.ವಿ.ಗೆ ನಮ್ಮ ವಿರೋಧವಿಲ್ಲ. ಆದರೆ, ಫಲವತ್ತಾದ ಭೂಮಿ ಕೊಟ್ಟವರಿಗೆ ಪ್ರಸ್ತುತ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕು. ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಭೂಮಿ ಕಳೆದುಕೊಂಡ ರೈತರ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸಮಿತಿಯು ರೈತರಿಗೆ ವೈಜ್ಞಾನಿಕವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ಚರ್ಚಿಸಿ ಕೈಗೊಳ್ಳುವ ನಿರ್ಧಾರದಂತೆ ಪರಿಹಾರ ಒದಗಿಸಬೇಕು. ಗ್ರಾಮದಲ್ಲಿ ವೀರಶೈವ ರುದ್ರಭೂಮಿಗೆ ಜಮೀನು ಕಳೆದುಕೊಂಡವರಿಗೆ ಬದಲಿಯಾಗಿ 2 ಎಕರೆ ಜಮೀನು ಕೊಡಬೇಕು. ಗ್ರಾಮದ ಮಲ್ಲೇಶ್ವರ ದೇವಸ್ಥಾನ ಅಭಿವೃದ್ಧಿ ಹಾಗೂ ಸಮುದಾಯದ ಭವನ ನಿರ್ಮಿಸಲು 2 ಎಕರೆ ಜಮೀನು ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್. ಯೋಗಾನಂದ ಮಾತನಾಡಿ, ‘ವಿ.ವಿ.ಗಾಗಿ 2006-07ರಲ್ಲಿ ಭೂ ಸ್ವಾಧೀನ ಮಾಡಿಕೊಂಡು, ಆಗಿನ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ಪರಿಹಾರ ನೀಡಲಾಗಿದೆ. ಆಗ, ₹300 ಕೋಟಿ ಇದ್ದ ವಿ.ವಿ ನಿರ್ಮಾಣ ಕಾಮಗಾರಿ ಮೊತ್ತ ಈಗ ₹1 ಸಾವಿರ ಕೋಟಿ ದಾಟಿದೆ. ಅದೇ ಮಾದರಿಯಲ್ಲಿ ಭೂಮಿ ನೀಡಿದ ರೈತರಿಗೂ ಪ್ರಸ್ತುತ ದರದಲ್ಲಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ವಿ.ವಿ.ಗಾಗಿ ಭೂಮಿ ಕಳೆದುಕೊಂಡಿರುವ ಬಹುತೇಕ ರೈತರು ತೆಂಗು ಮತ್ತು ಅಡಿಕೆ ಬೆಳೆದು ಬದುಕುತ್ತಿದ್ದರು. ಈ ಪೈಕಿ, ಕೆಲವರು ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಅಧಿಕಾರಿಗಳು ಜಮೀನಿನಲ್ಲಿದ್ದ ಮರಗಳನ್ನು ಕತ್ತರಿಸಿದ್ದಾರೆ. ಪ್ರಕರಣ ಇತ್ಯರ್ಥವಾಗುವವರೆಗೆ ಜಮೀನಿಗೆ ಯಾರೂ ಕಾಲಿಡಬಾರದು’ ಎಂದರು.

ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಬೆಟ್ಟದ ಮಠಾಧೀಶ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಉರಗಳ್ಳಿ ಮಠಾಧೀಶ ಶಿವಶಂಕರ ಸ್ವಾಮೀಜಿ, ಬಿಡದಿ ಹುಚ್ಚಪ್ಪ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ರಾಮನಗರ ತಾಲ್ಲೂಕು ಅಧ್ಯಕ್ಷ ಪೋಲೀಸ್ ಶಂಕರಪ್ಪ, ನಗರಸಭೆ ಸದಸ್ಯೆ ವಿಜಯಕುಮಾರಿ, ಮುಖಂಡರಾದ ಗುರುಮಾದಯ್ಯ, ವಿಜಯಕುಮಾರ್, ಸೋಮೇಶ್, ಮಹದೇವಯ್ಯ, ರಾಜಶೇಖರ್, ಶಿವಸ್ವಾಮಿ, ಮಲ್ಲೇಶ್, ನಾರಾಯಣ್, ಗೌರಮ್ಮ, ಶಿವರುದ್ರಯ್ಯ, ಶಿವಮೂರ್ತಿ ಹಾಗೂ ಇತರರು ಇದ್ದರು.

ಬೇಡಿಕೆಗಳೇನು?

  • ಕನ್ನಮಂಗಲದೊಡ್ಡಿ ರಸ್ತೆಯಿಂದ ರಂಗರಾಯರದೊಡ್ಡಿ ರಸ್ತೆವರೆಗೆ ಜಮೀನು ಕಳೆದುಕೊಳ್ಳುವ ರೈತರಿಗೆ 50:50 ಅನುಪಾತದಲ್ಲಿ ನಿವೇಶನಗಳನ್ನು ಹಂಚಬೇಕು.

  • ಭೂಮಿ ಕಳೆದುಕೊಂಡ ಪ್ರತಿ ಕುಟುಂಬದ ಒಬ್ಬರಿಗೆ ವಿ.ವಿ.ಯಲ್ಲಿ ಉದ್ಯೋಗ ನೀಡಬೇಕು.

  • ಅರ್ಚಕರಹಳ್ಳಿ ಸರ್ಕಾರಿ ಶಾಲೆ ಹಾಗೂ ಮೈದಾನಕ್ಕೆ 5 ಎಕರೆ ಜಾಗ ಮಂಜೂರು ಮಾಡಬೇಕು.

  • ಗ್ರಾಮದಲ್ಲಿ ಬಸವ ಶ್ರೀ ಗೋ ಶಾಲೆ ಹಾಗೂ ಮಠ ನಿರ್ಮಿಸಲು 5 ಎಕರೆ ಜಾಗ ಕೊಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT