ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಶದತ್ತ ದೇಸಿ ದನಗಳ ಸಂಸ್ಕೃತಿ: ವಿಷಾದ

‘ಮೈಸೂರು ಸಂಸ್ಥಾನದ ದನದ ತಳಿಗಳು’ ಕೃತಿ ಬಿಡುಗಡೆ l ರಾಜಕಾರಣದ ಭಾಗವಾದ ಗೋವು
Last Updated 13 ಸೆಪ್ಟೆಂಬರ್ 2021, 3:41 IST
ಅಕ್ಷರ ಗಾತ್ರ

ರಾಮನಗರ: ಕೃಷಿ ಮತ್ತು ದೇಸಿ ದನಗಳ ಸಂಸ್ಕೃತಿ ಇಂದು ವಿನಾಶದತ್ತ ಮುಖ ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಅನಸೂಯಮ್ಮ ವಿಷಾದಿಸಿದರು.‌

ನಗರದ ಕನಕಪುರ ವೃತ್ತದಲ್ಲಿರುವ ಶಾಂತಿನಿಕೇತನ ಪಿ.ಯು ಕಾಲೇಜಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಎ. ಕೃಷ್ಣಸ್ವಾಮಿ ಅಯ್ಯಂಗಾರ್ ಮತ್ತು ಕರ್ನಲ್ ಎಚ್‌.ಟಿ ಪೀಸ್‌ ಅವರ (ಇಂಗ್ಲಿಷ್‌ ಮೂಲ) ಬಂಜಗೆರೆ ಜಯಪ್ರಕಾಶ್ ಕನ್ನಡಕ್ಕೆ ಅನುವಾದಿಸಿರುವ ‘ಮೈಸೂರು ಸಂಸ್ಥಾನದ ದನದ ತಳಿಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮೈಸೂರು ಸಂಸ್ಥಾನದಲ್ಲಿದ್ದ ದನದ ತಳಿಗಳ ಬಗ್ಗೆ ಪ್ರಕಟವಾಗಿರುವ ಈ ಪುಸ್ತಕ ಅಪರೂಪದ್ದು. ಕನ್ನಡಕ್ಕೆ ಅನುವಾದಿಸಿ ಕೊಟ್ಟ ಬಂಜಗೆರೆ ಅವರ ಪ್ರಯತ್ನ ಶ್ಲಾಘನೀಯ. ಇಕ್ಕಂಡಿ, ಒಕ್ಕಂಡಿ ಮುಂತಾದ ಪದಗಳನ್ನು ಈ ತಲೆಮಾರಿಗೆ ಬಂಜಗೆರೆ ಪರಿಚಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜದಲ್ಲಿ ಗಂಡಸಿಗಿಂತ ದನಗಳು ಹೆಚ್ಚಿನ ಗಂಟೆಗಳ ಕಾಲ ದುಡಿಯುತ್ತವೆ. ದನಗಳಿಗಿಂತ ಹೆಚ್ಚಿನ ಗಂಟೆಗಳ ಕಾಲ ಮಹಿಳೆಯರು ದುಡಿಯುತ್ತಿದ್ದಾರೆ. ಇಂದು ಮಹಿಳೆಯರ ದುಡಿಮೆಯ ಅವಧಿಯಲ್ಲಿ ಬದಲಾವಣೆ ಆಗಿಲ್ಲ ಎಂದರು.

ಲೇಖಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಹಿಂದೊಮ್ಮೆ ಪಶು ಸಂಗೋಪನೆ ನಮ್ಮ ಜನರ ಮೂಲ ಕಸುಬಾಗಿದ್ದು, ಅವುಗಳ ಸಂಖ್ಯೆಯ ಮೇಲೆ ಶ್ರೀಮಂತಿಕೆಯನ್ನು ಅಳೆಯುವ ಪದ್ಧತಿ ಇತ್ತು. ಮಾನವನ ಮೊದಲ ಉದ್ಯೋಗವೇ ಪಶು ಸಂಗೋಪನೆ ಎಂದು ಸ್ಮರಿಸಿದರು.

ಗೋವು ಇಂದು ರಾಜಕಾರಣದ ಭಾಗವಾಗಿದೆ. ಗೋವು ಇಂದು ಪವಿತ್ರತೆಯ ಸಂಕೇತ, ಧಾರ್ಮಿಕ ಸಂಕೇತ ವಾಗಿದೆ. ಹಿಂದೆ ಇದು ಆಹಾರ ಪದ್ಧತಿಯೂ ಆಗಿತ್ತು ಎಂದರು.‌

ಕೃತಿಯ ಬಗ್ಗೆ ಇತಿಹಾಸ ಉಪನ್ಯಾಸಕ ಡಾ.ಚಿಕ್ಕಚನ್ನಯ್ಯ ಮಾತನಾಡಿ, ಪುಸ್ತಕದಲ್ಲಿ ಪ್ರಸ್ತುತವಾಗಿರುವ ಗ್ರಾಮ್ಯ ಪರಿಚಯ ಮತ್ತು ಪ್ರಸ್ತುತ ಕಾಲಕ್ಕೆ ಹೋಲಿಸಿದರೆ ಈ ಗ್ರಾಮೀಣ ಪರಂಪರೆ ಕಣ್ಣರೆಯಾಗುತ್ತಿದೆ ಎಂದು ವಿಷಾದಿಸಿದರು.

ದನದ ತಳಿಗಳ ಅಧ್ಯಯನದ ಜೊತೆಗೆ ಗ್ರಾಮೀಣ ಜೀವನ, ಪರಂಪರೆ ಬಗ್ಗೆಯೂ ಕೃತಿಯು ಬೆಳಕು ಚೆಲ್ಲಿದೆ ಎಂದರು.

ಕರ್ನಾಟಕ ಅಧ್ಯಯನ ಕೇಂದ್ರ ಡಾ.ರವಿಕುಮಾರ್ ಬಾಗಿ ಪ್ರಾಸ್ತಾವಿಕ ಮಾತನಾಡಿ, ರಾಜ್ಯದ ಯಾವ ಜಿಲ್ಲೆಯಲ್ಲೂ ಇಲ್ಲದಷ್ಟು ಸಂಖ್ಯೆಯಲ್ಲಿ ಟ್ರಸ್ಟ್‌ಗಳು ರಾಮನಗರ ಜಿಲ್ಲೆಯಲ್ಲಿವೆ. ಆದಾಗ್ಯೂ ಜಿಲ್ಲೆಯಲ್ಲಿ ಸಾಂಸ್ಕೃತಿಕ ಸಿರಿವಂತಿಕೆಯ ಕೊರತೆ ಇದೆ ಎಂದು ವಿಷಾದಿಸಿದರು.

ರೈತನ ಕೃಷಿ ಕಾಯಕವೂ ಜ್ಞಾನ. ಪಾರಂಪರಿಕ ಔಷಧ ಪದ್ಧತಿಯೂ ಜ್ಞಾನ. ಪಾರಂಪರಿಕ ಜ್ಞಾನವನ್ನು ನಿರ್ಲಕ್ಷ ಮಾಡುವುದು ಸರಿಯಲ್ಲ ಎಂದರು.

ಕೃತಿಯನ್ನು ಪ್ರಕಟಿಸಿರುವ ಹೊನ್ನೂರು ಪ್ರಕಾಶನದ ಉಜ್ಜಜ್ಜಿ ರಾಜಣ್ಣ ಮಾತನಾಡಿದರು. ‘ರಾಮನಗರ ಜಿಲ್ಲೆಯಾಗಿ 15 ವರ್ಷಗಳು ಮತ್ತು ನಿರೀಕ್ಷೆಗಳು’ ಕುರಿತು ಬರಹಗಾರ ಪಾರ್ವತೀಶ ಬಿಳಿದಾಳೆ, ಅರ್ಕಾವತಿ ನದಿಯ ಸ್ಥಿತಿಗತಿಯ ಬಗ್ಗೆ ಸಾಮಾಜಿಕ ಮುಖಂಡ ಕಾಂತರಾಜ ಪಟೇಲ್ ವಿಚಾರ ಮಂಡಿಸಿದರು.

ಇತಿಹಾಸಕಾರ ಮುನಿರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಶ್ವೇತಾ ದೇವ್ ನಿರೂಪಿಸಿದರು. ಕೊತ್ತಿಪುರ ಜಿ. ಶಿವಣ್ಣ, ಅಬಿದಾ ಬೇಗಂ
ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT