ಭಾನುವಾರ, ಜನವರಿ 19, 2020
20 °C

ವಚನಗಳಲ್ಲಿ ಮಾನವೀಯ ಅನುಭವದ ತುಡಿತ: ಜ್ಞಾನಪ್ರಕಾಶ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ವಚನ ಸಾಹಿತ್ಯದಲ್ಲಿ ಮಾನವೀಯ ಅನುಭವಗಳ ಸಮಾನತೆ ಸೂತ್ರದ ಸಾಮಾಜಿಕ ತುಡಿತ ಮಿಡಿತಗಳಿವೆ ಎಂದು ಮೈಸೂರಿನ ಉರಿಲಿಂಗ ಪೆದ್ದಿಲಿಂಗೇಶ್ವರ ಮಹಾ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹನಿಯೂರಿನ ಅಚಲಾಶ್ರಮದಲ್ಲಿ ಮೈತ್ರಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಕೀರ್ತನೆ, ತತ್ವಪದ ಮತ್ತು ಭಜನೆ ಹಾಗೂ ವಚನ ಸಾಹಿತ್ಯದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ತತ್ವಪದ, ಕೀರ್ತನೆ, ವಚನಗಳು ನೀತಿ ಸಾರುವ ಜೊತೆಗೆ ಮನುಕುಲಕ್ಕೆ ಸಂದೇಶ ಕೊಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಮಾನವೀಯ ಮೌಲ್ಯಗಳ ಹೂರಣವನ್ನು ನೀಡುವ ಇಂತಹ ವಿಚಾರಗಳನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಅವುಗಳನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಯುವ ತಲೆಮಾರು ಮುಂದಾಗಬೇಕಿದೆ’ ಎಂದರು.

ಅಚಲಾಶ್ರಮದ ಸಿದ್ದರಾಮ ಶಿವಯೋಗಿ ಸ್ವಾಮೀಜಿ ಮಾತನಾಡಿ, ವಿಶ್ವಮಾನವತೆ, ಮಾತೃ ವಾತ್ಸಲ್ಯ, ಮಾನವೀಯ ಅನುಕಂಪದ ಸಾಮಾನತೆ ಸಾರುವ ವಚನ ಸಾಹಿತ್ಯ ಬದುಕಿನ ಅನುಭವದ ದೃಷ್ಟಿಕೋನವಾಗಿದೆ. ಕೀರ್ತನೆ, ಭಜನೆಗಳು ಆಧ್ಯಾತ್ಮಿಕತೆಯನ್ನು ಸಾರುತ್ತಾ ಸಾಂಸ್ಕೃತಿಕ ನೆಲೆಯ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಸರಳ ಬದುಕಿನ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಈ ಸಾಹಿತ್ಯ ಪ್ರಕಾರಗಳು ಮರುಜೀವ ಪಡೆಯುತ್ತಿರಬೇಕು ಎಂದರು.

ಅಚಲಾಶ್ರಮದ ಮಲ್ಲಪ್ಪ ಸ್ವಾಮೀಜಿ, ಬೆಳಕವಾಡಿಯ ಮಹದೇವ ಸ್ವಾಮೀಜಿ, ಸೋಗಾಲದ ಚಿಕ್ಕಣ ಸ್ವಾಮೀಜಿ ಭಾಗವಹಿಸಿದ್ದರು.

ರಾಮನಗರದ ಬೋರಪ್ಪ, ಸಿಂಗರಾಜಿಪುರದ ಪುಟ್ಟಮಾದಪ್ಪ, ಬೆಂಗಳೂರಿನ ನಾರಾಯಣಪ್ಪ, ನಾಗಪ್ಪ ಕೀರ್ತನೆಗಳನ್ನು ಹಾಡಿದರು. ಶಿವಶಂಕರ್ ಮಂಡ್ಯ ತತ್ವಪದವನ್ನು, ಮಂಡ್ಯ ಶಿವರಾಮು, ಶಿವಪ್ಪ ಕನಕಪುರ, ಪುಟ್ಟಸ್ವಾಮಿ, ವೆಂಕಟಪ್ಪ ರಾಮನಗರ, ಪ್ರಕಾಶ್ ಬಾಣಂತಹಳ್ಳಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.

ಗಾಯಕಿ ಜಯಮ್ಮ ಪ್ರಾರ್ಥಿಸಿದರು. ಗಾಯಕ ಪಿ.ವಿಷಕಂಠಯ್ಯ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು