ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಅಂಡರ್‌ಪಾಸ್: ಗ್ರಾಮಸ್ಥರ ಪ್ರತಿಭಟನೆ

Last Updated 17 ಜೂನ್ 2021, 4:59 IST
ಅಕ್ಷರ ಗಾತ್ರ

ಚನ್ನಪಟ್ಟಣ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೂತನ ಬೈಪಾಸ್ ರಸ್ತೆಗೆ ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಅವೈಜ್ಞಾನಿಕವಾಗಿ ಅಂಡರ್ ಪಾಸ್ ರಸ್ತೆ ನಿರ್ಮಿಸಲಾಗಿದೆ. ಅದನ್ನು ಸೂಕ್ತ ಸ್ಥಳದಲ್ಲಿ ನಿರ್ಮಿಸಬೇಕು ಎಂದು ಒತ್ತಾಯಿಸಿ ತಿಟ್ಟಮಾರನಹಳ್ಳಿ ಗ್ರಾಮಸ್ಥರು, ಈ ಭಾಗದ ಗ್ರಾಮಗಳ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬುಧವಾರ ತಿಟ್ಟಮಾರನಹಳ್ಳಿ ರಾಮಮ್ಮನ ಕೆರೆ ಏರಿ ಬಳಿ ಪ್ರತಿಭಟನೆ ನಡೆಸಿದರು.

‘ಪಟ್ಟಣದಿಂದ ಪ್ರಮುಖ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಈ ಭಾಗದಲ್ಲಿ ಅಂಡರ್ ಪಾಸ್ ಗ್ರಾಮದ ದೂರದಲ್ಲಿ ನಿರ್ಮಿಸಲಾಗಿದೆ. ವಾಹನಗಳು ಸುತ್ತಾಡಿ ಬಳಸಿಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ. ಕುಣಿಗಲ್ ರಾಜ್ಯ ಹೆದ್ದಾರಿ ಮತ್ತು ತುಮಕೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಪ್ರಮಾದ ನಡೆದಿದೆ’ ಎಂದು ದೂರಿದರು.

‘ಈಗಿರುವ ರಸ್ತೆಯಲ್ಲಿಯೇ ಅಂಡರ್ ಪಾಸ್ ನಿರ್ಮಾಣ ಮಾಡುವ ಭರವಸೆ ನೀಡಲಾಗಿತ್ತು. ಈಗ ನಿರ್ಮಿಸಿರುವ ಅಂಡರ್ ಪಾಸ್ ನಿರ್ಜನ ಪ್ರದೇಶದಲ್ಲಿದೆ. ಈ ಕಾರಣಕ್ಕಾಗಿ ನಮಗೆ ಈ ರಸ್ತೆ ಬಳಿಯೇ ಅಂಡರ್ ಪಾಸ್ ನಿರ್ಮಾಣವಾಗಬೇಕು. ಅಲ್ಲಿಯವರೆಗೂ ಇಲ್ಲಿ ಕಾಮಗಾರಿ ನಿರ್ವಹಿಸಲು ಅವಕಾಶ ನೀಡುವುದಿಲ್ಲ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ ಮಾಡುವ ಭರವಸೆ ನೀಡಬೇಕು. ಸಾರ್ವಜನಿಕವಾದ ಈ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಎಲ್. ನಾಗೇಶ್, ಡಿ.ವೈ.ಎಸ್.ಪಿ. ರಮೇಶ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಡಿವೈಎಸ್ಪಿ, ಸ್ಥಳಕ್ಕೆ ಆಗಮಿಸುವಂತೆ ಸೂಚಿಸಿದರು.

ಸ್ಥಳಕ್ಕೆ ಬಂದ ಪ್ರಾಧಿಕಾರದ ಅಧಿಕಾರಿಗಳಾದ ನಿಶಾಂಕ್ ಆಗೂ ವರುಣ್, ಪ್ರತಿಭಟನಾಕಾರರ ಜೊತೆ ಚರ್ಚೆ ನಡೆಸಿದರು. ಈ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಿಸಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇವೆ. ₹5 ಕೋಟಿ ವೆಚ್ಚದ ಕ್ರಿಯಾಯೋಜನೆ ಕೇಂದ್ರ ಕಚೇರಿ ತಲುಪಿದೆ. ಅಲ್ಲಿಂದ ಅನುಮೋದನೆಯಾದ ಕೂಡಲೇ ಕಾಮಗಾರಿ ಆರಂಭ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟರು.

ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದ ಅಧ್ಯಕ್ಷ ಟಿ.ಕೆ.ಯೋಗೇಶ್, ನಿರ್ದೇಶಕ ಟಿ.ಪಿ.ಹನುಮಂತಯ್ಯ, ಹಿರಿಯ ಮುಖಂಡ ಬಿ.ನಾಗೇಶ್, ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್, ರೈತಸಂಘದ ಕಾರ್ಯಾಧ್ಯಕ್ಷ ಎಂ.ರಾಮು, ಕರವೇ ತಾಲ್ಲೂಕು ಅಧ್ಯಕ್ಷ ಸಾಗರ್, ನಗರ ಕಸಾಪ ಅಧ್ಯಕ್ಷ ಅಭಿಲಾಷ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್, ಎಂಪಿಸಿಎಸ್ ಅಧ್ಯಕ್ಷ ಪುಟ್ಟಸ್ವಾಮಿ, ಮುಖಂಡರಾದ ರಾಜಣ್ಣ, ಟಿ.ಪಿ.ರಘುನಂದನ್, ಲೋಕೇಶ್, ಟಿ.ಕೆ.ಮುರುಳಿ, ವೆಂಕಟೇಶ್, ಉಮೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT