ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೊಟಾ: ಮುಂದುವರಿದ ಮುಷ್ಕರ

ರೈತ, ಕಾರ್ಮಿಕ ಸಂಘಟನೆಗಳ ಬೆಂಬಲ: ಪಟ್ಟು ಸಡಿಲಿಸದ ನೌಕರರು
Last Updated 12 ನವೆಂಬರ್ 2020, 14:48 IST
ಅಕ್ಷರ ಗಾತ್ರ

ಬಿಡದಿ: ಟೊಯೊಟಾ ಕಿರ್ಲೋಸ್ಕರ್‍ ಮೋಟಾರ್ಸ್‌ ಕಾರ್ಖಾನೆ ನೌಕರರ ಮುಷ್ಕರವು ಗುರುವಾರವೂ ಮುಂದುವರಿದಿದ್ದು, ಕಾರ್ಮಿಕರು ತಮ್ಮ ಪಟ್ಟು ಸಡಿಲಿಸಿಲ್ಲ.

ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ಇರುವ ಕಾರ್ಖಾನೆಯ ಮುಂಭಾಗ ನಡೆದಿರುವ ಮುಷ್ಕರದಲ್ಲಿ ನೂರಾರು ಕಾರ್ಮಿಕರು ಭಾಗಿಯಾಗಿದ್ದು, ಅಹೋರಾತ್ರಿ ಧರಣಿ ಕುಳಿತಿದ್ದಾರೆ. ಅಮಾನತು ಆದೇಶ ವಾಪಸ್ ಪಡೆಯುವುದು ಹಾಗೂ ಕಾರ್ಮಿಕರಿಗೆ ಕೆಲಸದ ಅವಧಿಯಲ್ಲಿ ವಿಶ್ರಾಂತಿ ಸೇರಿದಂತೆ ಹಲವು ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಗುರುವಾರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕರು ತಮ್ಮ ಅಳಲು ತೋಡಿಕೊಂಡರು. ‘ಕಾರ್ಖಾನೆಯಲ್ಲಿ ಕೆಲಸದ ಅವಧಿಯಲ್ಲಿ ತೀರ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸಲಾಗುತ್ತಿದೆ. ಎರಡು ಗಂಟೆ ನಿರಂತರ ಕೆಲಸದ ಬಳಿಕ ಕೇವಲ10 ನಿಮಿಷ ವಿಶ್ರಾಂತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ನೀರು ಕುಡಿಯಲು ಹಾಗೂ ಬಹಿರ್ದೆಸೆಗೆ ತೆರಳಲು ಸಮಯವೂ ಸಾಲದು. ಮಧ್ಯದಲ್ಲಿ ನೀರು ಕುಡಿಯಬೇಕಾದರೂ ವ್ಯವಸ್ಥಾಪಕರಿಂದ ಅನುಮತಿ ಪಡೆಯಬೇಕು. ಅಲ್ಲದೇ ಕೆಲಸದ ಒತ್ತಡ ಹೆಚ್ಚಾಗಿದ್ದು, ಹೆಚ್ಚಿನ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳುವಂತೆ ಕಾರ್ಮಿಕರ ಮೇಲೆ ಒತ್ತಡ ಹೇರಲಾಗುತ್ತಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಕಾರ್ಮಿಕ ಸಂಘದ ಪ್ರತಿನಿಧಿಗೆ ಅಮಾನತು ಶಿಕ್ಷೆ ನೀಡಲಾಗಿದೆ’ ಎಂದು ದೂರಿದರು.

ರೈತ ಮುಖಂಡರ ಭೇಟಿ: ಪ್ರತಿಭಟನಾ ನಿರತ ಕಾರ್ಮಿಕರನ್ನು ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಭೇಟಿ ಮಾಡಿ ಧೈರ್ಯ ತುಂಬಿದರು.

‘ಕಾರ್ಖಾನೆಗಾಗಿ ನೂರಾರು ರೈತರು ತಮ್ಮ ಜಮೀನು ಬಿಟ್ಟುಕೊಟ್ಟು ದಿವಾಳಿಗಳಾಗಿದ್ದಾರೆ. ಇಲ್ಲಿ ದುಡಿಯುತ್ತಿರುವ ಕಾರ್ಮಿಕರೆಲ್ಲರೂ ರೈತರ ಮಕ್ಕಳೇ ಆಗಿದ್ದಾರೆ. ಜಪಾನ್‌ ಮೂಲದ ಕಂಪನಿಯು ಇಲ್ಲಸಲ್ಲದ ನಿಯಮಗಳನ್ನು ತೆಗೆದು ಕಾರ್ಖಾನೆಯನ್ನು ಲಾಕ್‌ಔಟ್‌ ಮಾಡಿರುವುದು ಸರಿಯಲ್ಲ. ಇನ್ನೆರಡು ದಿನಗಳ ಒಳಗೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಇರುವ ಟೊಯೊಟಾ ವಾಹನ ಮಾರಾಟ ಮಳಿಗೆಗಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ
ಟೊಯೊಟಾ ಕಾರ್ಮಿಕರ ಹೋರಾಟಕ್ಕೆ ಸಿಐಟಿಯು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರದ ಮಧ್ಯ ಪ್ರವೇಶಕ್ಕೆ ಆಗ್ರಹಿಸಿವೆ.

‘ಟಿಕೆಎಂ ಕಂಪನಿಯು ಕಾರ್ಖಾನೆಯ ಲಾಕ್‌ಔಟ್‌ ಆದೇಶವನ್ನು ಕೂಡಲೇ ಹಿಂಪಡೆದು ಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕು. ಕಾರ್ಮಿಕರ ಈ ಹೋರಾಟವನ್ನು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಬೆಂಬಲಿಸಲಿದೆ. ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆಯು ಮಧ್ಯ ಪ್ರವೇಶ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು’ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್. ಉಮೇಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT