ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡದಿ: ಟೊಯೊಟಾ ಬಿಕ್ಕಟ್ಟು ಇನ್ನಷ್ಟು ಜಟಿಲ

39 ಕಾರ್ಮಿಕರ ಮೇಲೆ ಕಂಪನಿ ಶಿಸ್ತು ಕ್ರಮ; ಪ್ರತಿಭಟನೆ ಮುಂದುವರಿಕೆ
Last Updated 13 ನವೆಂಬರ್ 2020, 17:06 IST
ಅಕ್ಷರ ಗಾತ್ರ

ಬಿಡದಿ: ಟೊಯೊಟಾ ಕಿರ್ಲೋಸ್ಕರ್‌ ಕಾರ್ಖಾನೆ ಬಿಕ್ಕಟ್ಟು ದಿನ ಕಳೆದಂತೆಲ್ಲ ಬಿಗಡಾಯಿಸುತ್ತಲೇ ಇದೆ. ಕಾರ್ಮಿಕರು ತಮ್ಮ ಮುಷ್ಕರ ಮುಂದುವರಿಸಿದ್ದು, ಅಶಿಸ್ತಿನ ಆರೋಪದ ಮೇಲೆ 39 ಸಿಬ್ಬಂದಿಯನ್ನು ಟಿಕೆಎಂ ಆಡಳಿತ ಮಂಡಳಿಯು ಅಮಾನತು ಮಾಡಿದೆ.

ಶುಕ್ರವಾರ ಕಾರ್ಮಿಕರು ಕಾರ್ಖಾನೆಯ ಮುಂಭಾಗ ಪ್ರತಿಭಟನೆ ಮುಂದುವರಿಸಿದರು. ವಿವಿಧ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ಭೇಟಿ ಕೊಟ್ಟು ಕಾರ್ಮಿಕರಿಗೆ ಧೈರ್ಯ ತುಂಬಿದರು. ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಂ. ಕೃಷ್ಣಮೂರ್ತಿ ಹೋರಾಟ ಬೆಂಬಲಿಸಿ ಮಾತನಾಡಿ "ಕಾರ್ಮಿಕರು ಮಲಮೂತ್ರ ವಿಸರ್ಜನೆ ಗೆ ತೆರಳಲು ನಿರ್ಬಂಧ ವಿಧಿಸಿರುವ ಅಮಾನವೀಯ ವರ್ತನೆ ಹಾಗೂ ಕ್ಷುಲ್ಲಕ ಕಾರಣಗಳಿಗೆ ವೇತನ ಕಟಾವು ಮಾಡುವ ಹಾಗೂ ಇದನ್ನು ಪ್ರಶ್ನಿಸುವ ಕಾರ್ಮಿಕರನ್ನು ಅಮಾನತು ಮತ್ತು ವಜಾ ಮಾಡುವ ಕ್ರಮ ಖಂಡನೀಯ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಟೊಯೊಟಾ ಕಿರ್ಲೋಸ್ಕರ್ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಇಂತಹ ಕಂಪನಿಯಲ್ಲಿ ಕಾರ್ಮಿಕರ ಶೋಷಣೆ ನಡೆಯುತ್ತಿರುವುದು ಆಶ್ಚರ್ಯಕರವಾಗಿದೆ. ಕಳೆದ ಐದು ದಿನಗಳಿಂದ ಮುಷ್ಕರ ನಡೆಯುತ್ತಿದ್ದರೂ ಸ್ಥಳೀಯ ಶಾಸಕರಾಗಲಿ ಅಥವಾ ಸಂಸದರಾಗಲಿ ಸ್ಥಳಕ್ಕೆ ಭೇಟಿ ನೀಡದಿರುವುದು ಅವರ ನಿರ್ಲಕ್ಷತೆಗೆ ಸಾಕ್ಷಿಯಾಗಿದೆ. ಈ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಾರ್ಮಿಕ ಮಂತ್ರಿ ತಕ್ಷಣ ಮಧ್ಯಪ್ರವೇಶ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪಕ್ಷದ ರಾಜ್ಯ ಕಾರ್ಯದರ್ಶಿ ನಾಗೇಶ್, ಜಿಲ್ಲಾ ಘಟಕದ ಅಧ್ಯಕ್ಷ ನೀಲಿ ರಮೇಶ್, ಜಿಲ್ಲಾ ಕಾರ್ಯದರ್ಶಿ ಬಾನಂದೂರು ಕುಮಾರ್, ಬಿಡದಿ ತಾಲೂಕು ಅಧ್ಯಕ್ಷ ಕುಮಾರ್ ಜೊತೆಗಿದ್ದರು.

ಕರವೇ ಸ್ವಾಭಿಮಾನಿ ಬಣ: ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾರ್ಮಿಕರಿಗೆ ಬೆಂಬಲ ಸೂಚಿಸಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಪಿ. ಕೃಷ್ಣೇಗೌಡ ಮಾತನಾಡಿ ಬಹುರಾಷ್ಟ್ರೀಯ ಕಂಪನಿಯೊಂದು ಕನ್ನಡಿಗ ಕಾರ್ಮಿಕರ ಶೋಷಣೆ ಮಾಡುತ್ತಿರುವುದು ಸರಿಯಲ್ಲ. ಈ ಧೋರಣೆ ಕೈಬಿಟ್ಟು ಲಾಕ್‌ಔಟ್ ಮತ್ತು ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಅಧ್ಯಕ್ಷ ಶಿವು ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT