ಜೆಡಿಎಸ್ ಸದಸ್ಯರಿಗೆ ಪ್ರವಾಸ ಭಾಗ್ಯ

ಚನ್ನಪಟ್ಟಣ: ಸೋಮವಾರ (ನ.8) ನಡೆಯಲಿರುವ ಇಲ್ಲಿನ ನಗರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಯ್ಕೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಸದಸ್ಯರಿಗೆ ಪ್ರವಾಸ ಭಾಗ್ಯ ದೊರೆತಿರುವುದಾಗಿ ತಿಳಿದು
ಬಂದಿದೆ.
ಸದಸ್ಯರಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಎಲ್ಲಾ 16 ಸದಸ್ಯರನ್ನು ಶಾಸಕ ಕುಮಾರಸ್ವಾಮಿ ಸೂಚನೆ ಮೇರೆಗೆ ಪ್ರವಾಸಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
31 ಸದಸ್ಯ ಬಲದ ನಗರಸಭೆಯಲ್ಲಿ 16 ಜೆಡಿಎಸ್ ಸದಸ್ಯರು, 7 ಕಾಂಗ್ರೆಸ್ ಹಾಗೂ 7 ಬಿಜೆಪಿ ಸದಸ್ಯರು, ಒಬ್ಬರು ಪಕ್ಷೇತರರು ವಿಜೇತರಾಗಿದ್ದಾರೆ. ಜೆಡಿಎಸ್ ಸರಳ ಬಹುಮತದೊಂದಿಗೆ ಅಧಿಕಾರ ಹಿಡಿದಿದ್ದು, ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಅಧಿಕಾರ ಹಿಡಿಯುವ ಉದ್ದೇಶದಿಂದ ಜೆಡಿಎಸ್ ಸದಸ್ಯರನ್ನು ಒಟ್ಟಾಗಿ ಹಿಡಿದಿಡುವ ಪ್ರಯತ್ನದ ಹಿನ್ನೆಲೆಯಲ್ಲಿ ಈ ಪ್ರವಾಸ ಕರುಣಿಸಲಾಗಿದೆ ಎಂದು ತಿಳಿದುಬಂದಿದೆ.
ನಗರಸಭಾ ಅಧಿಕಾರ ಹಿಡಿಯುವ ಉದ್ದೇಶ ಹಾಗೂ ಜೆಡಿಎಸ್ ಅನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿವೆ ಎಂಬ ಸುದ್ದಿಗಳು ಹರಿಡಾಡುತ್ತಿವೆ. ಈ ಹಿನ್ನೆಲೆಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎನ್ನುವ ಉದ್ದೇಶದಿಂದ ಪ್ರವಾಸಕ್ಕೆ ಕರೆದೊಯ್ಯಲಾಗಿದೆ. ಚುನಾವಣೆಯ ದಿನ ಪಕ್ಷದ ಸದಸ್ಯರೆಲ್ಲರೂ ಒಟ್ಟಾಗಿ ನಗರಸಭೆಗೆ ಆಗಮಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡರೊಬ್ಬರು
ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೆ ನಗರಸಭೆಯ ಅಧಿಕಾರ ಹಿಡಿಯಲು ಕಾಂಗ್ರೆಸ್, ಬಿಜೆಪಿ ಕಸರತ್ತು ಆರಂಭಿಸಿರುವ ಸುದ್ದಿಗಳು ಕೇಳಿಬಂದಿವೆ. ಕಾಂಗ್ರೆಸ್‌ನ 7 ಸದಸ್ಯರು, ಬಿಜೆಪಿಯ 7 ಸದಸ್ಯರು, ಒಬ್ಬ ಪಕ್ಷೇತರ ಸದಸ್ಯನ ಬೆಂಬಲ ಪಡೆದರೆ ಒಟ್ಟು 15 ಸ್ಥಾನಗಳಾಗುತ್ತವೆ.
ಒಬ್ಬ ಅಥವಾ ಇಬ್ಬರು ಜೆಡಿಎಸ್ ಸದಸ್ಯರ ಬೆಂಬಲ ಸಾಧಿಸಿದರೆ ಬಹುಮತದೊಂದಿಗೆ ನಗರಸಭೆಯ ಅಧಿಕಾರ ಪಡೆಯಬಹುದು. ಆ ಮೂಲಕ ಕುಮಾರಸ್ವಾಮಿಗೆ ಮುಖಭಂಗ ಉಂಟು ಮಾಡಬಹುದು ಎನ್ನುವುದು ಕಾಂಗ್ರೆಸ್ ಹಾಗೂ ಬಿಜೆಪಿ ಲೆಕ್ಕಾಚಾರವಾಗಿದೆ ಎಂದು ತಿಳಿದುಬಂದಿದೆ.
ಇದು ಎಷ್ಟರಮಟ್ಟಿಗೆ ಸಫಲವಾಗುವುದು ಎನ್ನುವುದಕ್ಕೆ ಸೋಮವಾರದ ಚುನಾವಣೆ ಉತ್ತರ ನೀಡಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.