ಮರ ನಾಶ: ಪ್ರಕರಣ ದಾಖಲು

ಕನಕಪುರ: ಸರ್ಕಾರಿ ಗೋಮಾಳದಲ್ಲಿದ್ದ ಮರಗಳನ್ನು ಕಡಿದು ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಯ ವಿರುದ್ಧ ದೂರು ನೀಡಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರೂ ಅರಣ್ಯ ಅಧಿಕಾರಿಗಳು ವಿಳಂಬವಾಗಿ ಪ್ರಕರಣ ದಾಖಲಿಸಿದ್ದಾರೆ. ಆ ವ್ಯಕ್ತಿಯೊಂದಿಗೆ ಶಾಮೀಲಾಗಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಶಿವನೇಗೌಡನದೊಡ್ಡಿಯ ಶಿವಕುಮಾರ್ ಆರೋಪಿಸಿದ್ದಾರೆ.
ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಶಿವನೇಗೌಡನದೊಡ್ಡಿ ಗ್ರಾಮದಲ್ಲಿ ಅರೆಕೊಪ್ಪ ಸರ್ವೆ ನಂಬರ್ 95ರಲ್ಲಿ 4 ಮರಗಳನ್ನು ಶಿವರಾಜು ಎಂಬುವರು ಜೂನ್ 24ರಂದು ಜೆಸಿಬಿಯಿಂದ ಉರುಳಿಸಿ ನಾಶ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಉಪ ವಲಯ ಅರಣ್ಯ ಅಧಿಕಾರಿಗೆ ಅಂದೇ ವಾಟ್ಸ್‌ಆ್ಯಪ್ ಮೂಲಕ ದೂರು ಕೊಟ್ಟಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಶಿವಕುಮಾರ್ ದೂರಿದ್ದಾರೆ.
ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಹಜರು ಮಾಡಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದರು. ಪ್ರಕರಣದ ಎಫ್‌ಐಆರ್ ಕೊಡುವಂತೆ ಕೇಳಿದ್ದೆ. ಅದಕ್ಕೆ ಅವರು ಆ ರೀತಿ ಕೊಡಲು ಬರುವುದಿಲ್ಲ. ಆರ್‌ಟಿಐ ಮೂಲಕ ಪಡೆಯುವಂತೆ ಹೇಳಿದ್ದರಿಂದ ಜೂನ್ 29ರಂದು ಅರ್ಜಿ ಸಲ್ಲಿಸಿದ್ದೆ. ಜುಲೈ 1ರಂದು ಎಫ್‌ಐಆರ್ ಪ್ರತಿ ನೀಡಿದ್ದಾರೆ ಎಂದು
ತಿಳಿಸಿದ್ದಾರೆ.
‘ವಿಳಂಬವಾಗಿ ಪ್ರಕರಣ ದಾಖಲಿಸಿದ್ದು ಕರ್ತವ್ಯಲೋಪ ಎಸಗಿರುವ ಎಆರ್‌ಎಫ್‌ಒ ಮತ್ತು ಆರ್‌ಎಫ್‌ಒ ವಿರುದ್ಧ ಎಸಿಎಫ್, ಡಿಸಿಎಫ್‌ಗೆ ಇಂದು ಆನ್‌ಲೈನ್ ಮೂಲಕ ದೂರು ನೀಡಲಾಗುವುದು’ ಎಂದು ತಿಳಿಸಿದರು.
‘ಶಿವನೇಗೌಡನದೊಡ್ಡಿ ಗ್ರಾಮದಲ್ಲಿ ಮರ ಕಡಿಯುತ್ತಿರುವ ಸಂಬಂಧ ಶಿವಕುಮಾರ್ ಎಂಬುದು ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ನೀಡಿದ್ದರು. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಮಹಜರು ಮಾಡಿ ಮರವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ ಜಾಗ ಖಾಸಗಿಯದ್ದೇ ಅಥವಾ ಸರ್ಕಾರಿ ಸ್ಥಳವೇ ಎಂದು ಕಂದಾಯ ಇಲಾಖೆಯಿಂದ ಪರಿಶೀಲಿಸಲಾಗುವುದು. ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ. ಆರೋಪಿಯನ್ನು ರಕ್ಷಣೆ ಮಾಡುತ್ತಿಲ್ಲ. ಪ್ರಕರಣ ದಾಖಲಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು’ ಎಂದು ಕನಕಪುರದ ವಲಯ ಅರಣ್ಯಾಧಿಕಾರಿ ದಾಳೇಶ್
ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.