ಸೋಮವಾರ, ಜನವರಿ 27, 2020
26 °C

ವೈಕುಂಠ ಏಕಾದಶಿ: ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ಹಲವಾರು ದೇವಸ್ಥಾನಗಳಲ್ಲಿ ಸೋಮವಾರ ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ವೆಂಕಟೇಶ್ವರ ಸ್ವಾಮಿ ವೈಕುಂಠ ದ್ವಾರ ದರ್ಶನ, ಕಲ್ಯಾಣೋತ್ಸವ ಹಾಗೂ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪಟ್ಟಣದ ವರದರಾಜಸ್ವಾಮಿ, ಮಂಡಿಪೇಟೆ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನಗಳು, ತಾಲ್ಲೂಕಿನ ನೀಲಕಂಠನಹಳ್ಳಿ ತಿಮ್ಮರಾಯಸ್ವಾಮಿ ದೇವಸ್ಥಾನ, ಮುನಿಯಪ್ಪನದೊಡ್ಡಿ ವೆಂಕಟರಮಣ, ಬೇವೂರು ವೆಂಕಟರಮಣ ಸ್ವಾಮಿ ದೇವಸ್ಥಾನ, ತಿಟ್ಟಮಾರನಹಳ್ಳಿ ತಿರುಮಲ ದೇವಸ್ಥಾನ, ಗುಡ್ಡೆತಿಮ್ಮಸಂದ್ರ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ, ಸಿಂಗರಾಜಪುರ ಗವಿರಂಗಸ್ವಾಮಿ ದೇವಸ್ಥಾನಗಳಲ್ಲಿ ವೈಕುಂಠ ದ್ವಾರ ದರ್ಶನ ನಡೆಯಿತು.

ತಾಲ್ಲೂಕಿನ ಕೆಂಗಲ್ ಆಂಜನೇಯಸ್ವಾಮಿ, ದೇವರಹೊಸಹಳ್ಳಿ ಸಂಜೀವರಾಯಸ್ವಾಮಿ, ದೊಡ್ಡಮಳೂರು ಅಪ್ರಮೇಯಸ್ವಾಮಿ, ಅಕ್ಕೂರು ಕೃಷ್ಣ ದೇವಸ್ಥಾನ, ಪಟ್ಟಣದ ಕೋದಂಡ ರಾಮ ದೇವಸ್ಥಾನ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ತೆರಳಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿವಿಧ ದೇಗುಲಗಳಲ್ಲಿ ಹಮ್ಮಿಕೊಂಡಿದ್ದ ಭಜನೆ, ದೇವರನಾಮ, ಭರತನಾಟ್ಯ, ಭಕ್ತಿಗೀತೆಗಳ ಗಾಯನದಲ್ಲಿ ಭಕ್ತಾದಿಗಳು ಪಾಲ್ಗೊಂಡರು. ದೇವಸ್ಥಾನದ ಆವರಣದಲ್ಲಿ ಇರಿಸಿದ್ದ ವಿಷ್ಣುವಿನ ದಶಾವತಾರದ ಪ್ರತಿರೂಪಗಳು ಗಮನ ಸೆಳೆದವು. ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ವೈಕುಂಠದ್ವಾರ ದರ್ಶನ ಹಮ್ಮಿಕೊಂಡಿದ್ದ ಪಟ್ಟಣದ ವರದರಾಜಸ್ವಾಮಿ, ತಾಲ್ಲೂಕಿನ ನೀಲಕಂಠನಹಳ್ಳಿ ತಿಮ್ಮರಾಯಸ್ವಾಮಿ, ಮುನಿಯಪ್ಪನದೊಡ್ಡಿ ವೆಂಕಟರಮಣ, ಬೇವೂರು ತಿಮ್ಮಪ್ಪ ದೇಗುಲಗಳಲ್ಲಿ ಹೂವಿನಿಂದ ಇಡೀ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ಬರುವ ಭಕ್ತಾಧಿಗಳಿಗೆ ಲಾಡು, ಕೇಸರಿಬಾತು ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಎಲ್ಲ ದೇವಸ್ಥಾನಗಳಲ್ಲೂ ನೂರಾರು ಭಕ್ತರು ದೇವರ ದರ್ಶನ ಪಡೆದು, ವೈಕುಂಠದ್ವಾರ ಪ್ರವೇಶಿಸಿ, ದೇವರ ಕೃಪೆಗೆ ಪಾತ್ರರಾಗಲು ಸಾಲುಗಟ್ಟಿ ನಿಂತಿದ್ದರು. ರಾತ್ರಿಯವರೆಗೂ ಸಾಲು ಕಂಡುಬಂತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು