ರಾಮನಗರ: ‘ಭಾರತೀಯ ಸಮುದಾಯಗಳ ಒಗ್ಗೂಡುವಿಕೆಗೆ ರಾಮಾಯಣ ಸಹಕಾರಿಯಾಗಿದೆ’ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಜಿಲ್ಲಾ ಸಂಯೋಜಕ ಎಂ.ಎಸ್. ಚನ್ನವೀರಪ್ಪ ಹೇಳಿದರು.
ನಗರದ ಶಿರಡಿ ಸಾಯಿಬಾಬಾ ಮಂದಿರದ ಸಭಾಂಗಣದಲ್ಲಿ ಭಾರತ ವಿಕಾಸ ಪರಿಷದ್‌ನ ವಾಲ್ಮೀಕಿ ಶಾಖೆಯಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಹಾಗೂ ಕವಿ ಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.
ಪ್ರಪಂಚದ ಆರು ಮಹಾಕವಿಗಳಲ್ಲಿ ವಾಲ್ಮೀಕಿಯೂ ಒಬ್ಬರಾಗಿದ್ದಾರೆ. ವಾಲ್ಮೀಕಿಯು ಭಾರತೀಯ ಸಂಸ್ಕೃತಿಯ ಜನಕ. ಹೆಣ್ಣಿನ ಬಗ್ಗೆ ಸಹಾನುಭೂತಿ ಹೊಂದಿದ ಮೊದಲ ವ್ಯಕ್ತಿ ಎಂದು ಬಣ್ಣಿಸಿದರು.
ಭಾರತ ವಿಕಾಸ ಪರಿಷದ್‌ನ ಗೌರವಾಧ್ಯಕ್ಷ ಎಚ್.ವಿ. ಶೇಷಾದ್ರಿ ಅಯ್ಯರ್ ಮಾತನಾಡಿ, ಸುಲಿಗೆ ಮಾಡುತ್ತಿದ್ದ ಬೇಡನೊಬ್ಬ ಮಹರ್ಷಿಯಾದ ಕಥೆಯನ್ನು ರಾಮಾಯಣ ತಿಳಿಸಿಕೊಡುತ್ತದೆ. ಯಾರೂ ಬೇಕಾದರೂ ಬದಲಾವಣೆಗೊಂಡು ಮಹತ್ಕಾರ್ಯ ಮಾಡಬಹುದು ಎಂಬುದಕ್ಕೆ ವಾಲ್ಮೀಕಿಯೇ ಸಾಕ್ಷಿ ಎಂದು ತಿಳಿಸಿದರು.
ಭಾರತ ವಿಕಾಸ ಪರಿಷದ್ ವಾಲ್ಮೀಕಿ ಶಾಖೆಯ ಅಧ್ಯಕ್ಷ ಅಂಬರೀಶ್ ಮಾತನಾಡಿ, ವಾಲ್ಮೀಕಿಯು ರಾಮಾಯಣದಲ್ಲಿ ಉಲ್ಲೇಖಿಸಿರುವ ಮಾನವೀಯ ಮೌಲ್ಯಗಳು ಇಂದಿನ ಸಮಾಜದಿಂದ ದೂರವಾಗುತ್ತಿವೆ. ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ರಾಮಾಯಣದಲ್ಲಿನ ಮೌಲ್ಯಗಳನ್ನು ಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಾಲ್ಮೀಕಿ ಜಯಂತಿ ಹಾಗೂ ಕವಿ ಗೋಷ್ಠಿಯನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ವಿ. ಬಾಲಕೃಷ್ಣ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಭಾರತ ವಿಕಾಸ ಪರಿಷದ್‌ನ ವಾಲ್ಮೀಕಿ ಶಾಖೆಗೆ ಸೇರ್ಪಡೆಗೊಂಡ ಲೇಖಕ ಎಸ್. ರುದ್ರೇಶ್ವರ ಅವರನ್ನು ಗೌರವಿಸಲಾಯಿತು. ಯೋಗೇಶ್ ಚಕ್ಕೆರೆ, ಕಿರಣ್ ರಾಜ್ ತುಂಬೇನಹಳ್ಳಿ, ಚೇತನ್ ಗುನ್ನೂರು, ಪಿ.ಎನ್. ಅನಂತನಾಗ್ ಕವಿತೆ ವಾಚಿಸಿದರು. ಭಾರತ್ ವಿಕಾಸ ಪರಿಷದ್ ಸಂಚಾಲಕ ಕೆ.ಎಲ್. ಶೇಷಗಿರಿರಾವ್, ಕಾರ್ಯದರ್ಶಿ ಸಿ. ರಮೇಶ್ ಹೊಸದೊಡ್ಡಿ, ಸದಸ್ಯ ಪ್ರಭು ಅಂಜನಾಪುರ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.