ಮಂಗಳವಾರ, ನವೆಂಬರ್ 30, 2021
20 °C
ಐಜೂರು ವೃತ್ತದಲ್ಲಿ ವಾಟಾಳ್‌ ನಾಗರಾಜು ಪ್ರತಿಭಟನೆ

ತಮಿಳುನಾಡು ಗಡಿ ಬಂದ್‌ಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡು ಸರ್ಕಾರ ತನ್ನ ಮೊಂಡುತನ ಮುಂದುವರಿಸಿದಲ್ಲಿ ಕರ್ನಾಟಕವು ಆ ರಾಜ್ಯದೊಂದಿಗಿನ ಎಲ್ಲ ರೀತಿಯ ಸಂಬಂಧವನ್ನು ಕಡಿದುಕೊಂಡು ಗಡಿ ಬಂದ್ ಮಾಡಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು.

ಐಜೂರು ವೃತ್ತದಲ್ಲಿ ಬುಧವಾರ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಬೆಂಗಳೂರು, ರಾಮನಗರ ಸೇರಿದಂತೆ ಬಯಲುಸೀಮೆಯ ಐದು ಜಿಲ್ಲೆಗಳ ನೀರಿನ ಬವಣೆ ನೀಗಿಸಲು ಮೇಕೆದಾಟು ಯೋಜನೆಯನ್ನು ರೂಪಿಸಲಾಗಿದೆ. ಕುಡಿಯುವ ನೀರು ಯೋಜನೆಗೆ ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ ತಮಿಳುನಾಡು ಉದ್ದೇಶಪೂರ್ವಕವಾಗಿ ಇದಕ್ಕೆ ಅಡ್ಡಿಪಡಿಸುವ ಮೂಲಕ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ವರ್ತಿಸುತ್ತಿದೆ. ಮೇಕೆದಾಟು ವಿಚಾರದಲ್ಲಿಯೂ ಅದರ ಕ್ಯಾತೆಯನ್ನು ಬದಿಗಿಟ್ಟು ರಾಜ್ಯ ಸರ್ಕಾರ ಶೀಘ್ರ ಯೋಜನೆಗೆ ಶಂಕುಸ್ಥಾಪನೆ ನೆರವೇರಿಬೇಕು ಎಂದು ಆಗ್ರಹಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಕೋವಿಡ್‌ ನಿಯಂತ್ರಣದಲ್ಲಿ ಸೋತಿದೆ. ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲು ಡ್ರಗ್ ದಂದೆಯನ್ನು ಮುನ್ನೆಲೆಗೆ ತಂದಿದೆ. ಕೊರೊನಾ ಸಂಬಂಧಿತ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ಮಾಡಿರುವ ಕೋಟಿ ಕೋಟಿ ರೂಪಾಯಿಗಳ ಲೂಟಿಯನ್ನು ಮರೆ ಮಾಚಲು ಈ ರೀತಿಯ ನಾಟಕ ಆಡುತ್ತಿದೆ ಎಂದು ದೂರಿದರು.

ಡ್ರಗ್ಸ್ ದಂಧೆಯಲ್ಲಿ ಕೇವಲ ಇಬ್ಬರು ಚಿತ್ರನಟಿಯರನ್ನು ಮಾತ್ರ ಬಂಧಿಸಲಾಗಿದೆ. ಆದರೆ ಇದರ ಹಿಂದೆ ಅಡಗಿರುವ ಪ್ರಭಾವಿ ರಾಜಕಾರಣಿಗಳ ಮಕ್ಕಳು, ಪೊಲೀಸ್ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳು ಹಾಗೂ ಅವರ ಮಕ್ಕಳನ್ನು ಪರೋಕ್ಷವಾಗಿ ರಕ್ಷಿಸುತ್ತಿದೆ. ಇದರ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ, ಇದೇ 26ರಂದು ರಾಮಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಜಯಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಬಾಯಿ, ದಲಿತ ಘಟಕದ ಜಿಲ್ಲಾಧ್ಯಕ್ಷ ಕೆ.ಜಯರಾಮು, ತಾಲ್ಲೂಕು ಘಟಕದ ಅಧ್ಯಕ್ಷ ತ್ಯಾಗರಾಜು, ಪದಾಧಿಕಾರಿಗಳಾದ ಚಂದ್ರಶೇಖರ್, ಪಿ.ಸುರೇಶ್, ಲತಾ, ವರಲಕ್ಷ್ಮಿ, ಕುಸುಮಾ, ಪಾರ್ಥಸಾರಥಿ, ಬಾಲಾಜಿ, ಕೃಷ್ಣಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು