ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವಕರ್ಮ ಜಯಂತಿ ಆಚರಣೆ; ವಿಶ್ವಕರ್ಮರ ಚಿತ್ರದ ಮೆರವಣಿಗೆ

Published 17 ಸೆಪ್ಟೆಂಬರ್ 2023, 11:00 IST
Last Updated 17 ಸೆಪ್ಟೆಂಬರ್ 2023, 11:00 IST
ಅಕ್ಷರ ಗಾತ್ರ

ರಾಮನಗರ: ‘ಹಿಂದುಳಿದ ವಿಶ್ವಕರ್ಮ ಸಮುದಾಯ ಸೇರಿದಂತೆ ಇತರ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರು ತಮ್ಮ ಹಕ್ಕುಗಳನ್ನು ಪಡೆಯಲು ಮತ್ತು ಅಭಿವೃದ್ಧಿ ಸಾಧಿಸಲು ಸಂಘಟಿತರಾಗಬೇಕು’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿನ ವಿಜಯನಗರದ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದ ಉದ್ಧಾರಕ್ಕೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಈ ವಿಷಯದಲ್ಲಿ ಪಕ್ಷ ರಾಜಕಾರಣವನ್ನು ತರಬಾರದು. ಆಗ ಮಾತ್ರ ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಮುಂದೆ ಬರಲು ಸಾಧ್ಯ. ಇಲ್ಲದಿದ್ದರೆ, ದೊಡ್ಡವರು ದೊಡ್ಡವರಾಗುತ್ತಲೇ ಹೋದರೆ, ನಾವು ಹಿಂದುಳಿಯುತ್ತಲೇ ಹೋಗುತ್ತೇವೆ’ ಎಂದು ಕಿವಿಮಾತು ಹೇಳಿದರು.

‘ಸಿದ್ದರಾಮಯ್ಯ ಅವರು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ 2016ರಲ್ಲಿ ವಿಶ್ವಕರ್ಮ ಜಯಂತಿ ಆಚರಣೆಯನ್ನು ಜಾರಿಗೆ ತಂದರು. ಜಗತ್ತಿನಲ್ಲಿ ಎಲ್ಲರನ್ನೂ ಹಾಗೂ ಎಲ್ಲವನ್ನೂ ಸೃಷ್ಟಿ ಮಾಡಿದವರು ವಿಶ್ವಕರ್ಮರು. ಅಂತಹವರ ಜನ್ಮ ಜಯಂತಿಯನ್ನು ಮುಂದಿನ ದಿನಗಳಲ್ಲಿ ಅದ್ಧೂರಿಯಾಗಿ ಆಚರಿಸಬೇಕು’ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ. ಉಮೇಶ್, ‘ಅನೇಕ‌ ಕುಂದುಕೊರತೆಗಳ ನಡುವೆಯೂ ಸಮಾಜವನ್ನು ಸಂಘಟಿಸುವ ಕೆಲಸ ನಡೆಯುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಸಮುದಾಯ ಭವನ ‌ನಿರ್ಮಾಣ ಯೋಜನೆಯು ನನೆಗುದಿಗೆ ಬಿದ್ದಿದೆ. ಹಾಗಾಗಿ, ಶಾಸಕರು ಭವನಕ್ಕೆ ಅಗತ್ಯವಿರುವ ನಿವೇಶನ ಒದಗಿಸಿ, ಸಮುದಾಯ ಭವನದ ಕನಸನ್ನು ನನಸಾಗಿಸಬೇಕು’ ಎಂದು ಮನವಿ ಮಾಡಿದರು.

ಸಮುದಾಯದ ಸಾಧಕರಾದ ಕುಲುಮೆ‌ ವೃತ್ತಿಯ ಅಪ್ಪಾಜಿ ಆಚಾರ್, ಬಾರ್ ಬೆಂಡಿಂಗ್‌ ಕೆಲಸಗಾರ ವೇದಮೂರ್ತಿ, ಮರಗೆಲಸದ ಅನಿಲಕುಮಾರ್, ಶಿಕ್ಷಕಿ ಹಾಗೂ ಸಾಹಿತಿ ಶೈಲಾ ಶ್ರೀನಿವಾಸ್ ಅವರನ್ನು ಗಣ್ಯರು ಸನ್ಮಾನಿಸಿದರು.

ಜಯಂತಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ವಿಶ್ವಕರ್ಮರ ಚಿತ್ರದ ಮೆರವಣಿಗೆ ನಡೆಯಿತು. ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ ಸಹಾಯಕ ನಿರ್ದೇಶಕ ರಮೇಶಬಾಬು, ಕೆಪಿಸಿಸಿ‌ ಒಬಿಸಿ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಪವಿತ್ರ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಲಿಂಗಾಚಾರ್, ಶ್ರೀಧರ್ ಆಚಾರ್, ಆರ. ಬಸವಾಚಾರ್, ಚಂದ್ರಶೇಖರ್, ರಾಜಶೇಖರ್, ಅಪ್ಪಾಜಿ ಆಚಾರ್, ದೇವಿಕಾ, ಶ್ರೀಧರ್, ಕನ್ಯಾಕುಮಾರಿ ಇದ್ದರು.

‘ಭೂತಕಾಲ ಅರಿಯದವನಿಗೆ ಭವಿಷ್ಯವಿಲ್ಲ’

ವಿಶೇಷ ಉಪನ್ಯಾಸ ನೀಡಿದ ಶಿಕ್ಷಕಿ ಶೈಲಾ ಶ್ರೀನಿವಾಸ್, ‘ಆತ್ಮ ಮತ್ತು ಪರಮಾತ್ಮನ ಅನುಸಂಧಾನಕ್ಕಾಗಿ ವಿಶ್ವಕರ್ಮರು ಮಂದಿರ ಮತ್ತು ಮಸೀದಿಗಳನ್ನು ಸೃಷ್ಟಿಸಿದರು. ದೇಶದ ವಾಸ್ತುಶಿಲ್ಪ ಕ್ಷೇತ್ರದ ಮೂಲಪುರುಷ ವಿಶ್ವಕರ್ಮರು. ಭೂತವನ್ನು ಅರಿಯದವನಿಗೆ ಭವಿಷ್ಯವಿಲ್ಲ. ಹಾಗಾಗಿ, ಸಮುದಾಯದವರು ತಮ್ಮ ಕುಲದ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಅರಿಯಬೇಕು. ವಿಶ್ವಕರ್ಮ ಎಂಬುದು ಜಾತಿ ಸೂಚಕವಲ್ಲ. ಬದಲಿಗೆ, ಕಾಯಕದ ಸೂಚಕ. ತಂದೆ-ತಾಯಿಗಳು ಸಮುದಾಯದ ಮಕ್ಕಳಿಗೆ ಪರಂಪರೆ ಮತ್ತು ಸಂಸ್ಕಾರವನ್ನು ಹೇಳಿ‌ ಕೊಡಬೇಕು. ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಕುಲ ಕಸುಬುಗಳಿಗೆ ಸಮಕಾಲೀನ ಸ್ಪರ್ಶ ನೀಡಿ, ಆರ್ಥಿಕವಾಗಿ ಸಬಲರಾಗಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT