ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಪ್ರವಾಸ ತಾಣ ಅಭಿವೃದ್ಧಿಗೆ ವೋಟಿಂಗ್ ಅಭಿಯಾನ

ಪ್ರವಾಸೋದ್ಯಮ ಸಚಿವಾಲಯದ ಹೊಸ ಹೆಜ್ಜೆ; ಆನ್‌ಲೈನ್‌ನಲ್ಲಿ ವೋಟ್‌ ಮಾಡಲು ಅವಕಾಶ
Published 20 ಆಗಸ್ಟ್ 2024, 4:08 IST
Last Updated 20 ಆಗಸ್ಟ್ 2024, 4:08 IST
ಅಕ್ಷರ ಗಾತ್ರ

ರಾಮನಗರ: ಪ್ರವಾಸ ತಾಣಗಳ ಅಭಿವೃದ್ಧಿಗೆ ವಿಭಿನ್ನ ಹೆಜ್ಜೆ ಇಟ್ಟಿರುವ ಕೇಂದ್ರ ಪ್ರವಾಸೋದ್ಯಮ ಇಲಾಖೆಯು, ಪ್ರವಾಸಿಗರೇ ಮೆಚ್ಚುವ ತಾಣಗಳನ್ನು ಅಭಿವೃದ್ಧಿಪಡಿಸುವ ವಿಶೇಷ ಅಭಿಯಾನ ಕೈಗೊಂಡಿದೆ. ‘ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ -2024’ ಹೆಸರಿನ ಈ ಅಭಿಯಾನದಲ್ಲಿ ಪ್ರವಾಸಿಗರು ತಮ್ಮ ನೆಚ್ಚಿನ ಪ್ರವಾಸಿ ಸ್ಥಳಗಳಿಗೆ ಆನ್‌ಲೈನ್‌ ವೋಟಿಂಗ್ ಮಾಡಿ ತಮ್ಮ ಅಭಿಪ್ರಾಯ ದಾಖಲಿಸಬಹುದಾಗಿದೆ.

ದೇಶದಾದ್ಯಂತ ಕೈಗೊಂಡಿರುವ ಈ ಅಭಿಯಾನದಡಿ, ಜಿಲ್ಲಾವಾರು ಪ್ರವಾಸ ತಾಣಗಳ ಅಭಿವೃದ್ಧಿಗೆ ಸಚಿವಾಲಯ ಮುಂದಾಗಿದೆ. ಆಗಸ್ಟ್ 7ರಿಂದ ಶುರುವಾಗಿರುವ ಅಭಿಯಾನವು ಸೆ. 15ರವರೆಗೆ ನಡೆಯಲಿದೆ. ಪ್ರವಾಸಿಗರು ತಾವು ಭೇಟಿ ಮಾಡಿದ ಹಾಗೂ ಮಾಡಲು ಇಚ್ಛಿಸುವ ತಮ್ಮ ಜಿಲ್ಲೆ ವ್ಯಾಪ್ತಿಯ ಸ್ಥಳಗಳ ಕುರಿತು ವೋಟಿಂಗ್ ಮಾಡಿ, ಅಲ್ಲಿ ಆಗಬೇಕಾದ ಸುಧಾರಣೆ ಕುರಿತು ಅಭಿಪ್ರಾಯ ನಮೂದಿಸಬೇಕು.

ಜಿಲ್ಲೆಯ 16 ಸ್ಥಳಗಳಿವೆ: ‘ರಾಜ್ಯ ಸರ್ಕಾರವು ರಾಮನಗರ ಜಿಲ್ಲೆಯಲ್ಲಿ 30 ಪ್ರವಾಸ ತಾಣಗಳನ್ನು ಗುರುತಿಸಿದೆ. ಪ್ರವಾಸೋದ್ಯಮ ಸಚಿವಾಲಯದ ಅಭಿಯಾನಕ್ಕೆ ಅಷ್ಟೂ ಸ್ಥಳಗಳ ಹೆಸರುಗಳನ್ನು ಕಳಿಸಲಾಗಿತ್ತು. ಅದರಲ್ಲಿ ಅಂತಿಮವಾಗಿ 16 ಸ್ಥಳಗಳನ್ನು ಸಚಿವಾಲಯವು ಅಭಿಯಾನಕ್ಕೆ ಆಯ್ಕೆ ಮಾಡಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಎಚ್‌.ಡಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಪರಂಪರೆ, ಪ್ರಕೃತಿ ಮತ್ತು ವನ್ಯಜೀವಿ, ಸಾಹಸ ಹಾಗೂ ಇತರೆ ಸೇರಿದಂತೆ 5 ಬಗೆಯ ಪ್ರವಾಸ ತಾಣಗಳನ್ನು ಅಭಿಯಾನಕ್ಕೆ ಗುರುತಿಸಲಾಗಿದೆ. ಅಭಿಯಾನದಲ್ಲಿ ಭಾಗವಹಿಸುವವರು ಈ ಪೈಕಿ, ಕನಿಷ್ಠ 1ರಿಂದ 3 ತಾಣಗಳಿಗೆ ವೋಟ್ ಮಾಡಬೇಕು. ಎಲ್ಲಾ ಪ್ರಕ್ರಿಯೆ ಮುಗಿದ ಅವರ ಹೆಸರಿನಲ್ಲಿ ಸಚಿವಾಲಯದಿಂದ ಜನರೇಟ್ ಆಗುವ ಪ್ರಮಾಣಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ರಾಮನಗರದ ಸರ್ಕಾರಿ ಕಚೇರಿಯೊಂದರ ಪ್ರವೇಶದ್ವಾರದಲ್ಲಿ ಕಂಡುಬಂದ ಪ್ರವಾಸೋದ್ಯಮ ಇಲಾಖೆಯ ‘ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ -2024’ ಅಭಿಯಾನದ‌ ಬ್ಯಾನರ್
ರಾಮನಗರದ ಸರ್ಕಾರಿ ಕಚೇರಿಯೊಂದರ ಪ್ರವೇಶದ್ವಾರದಲ್ಲಿ ಕಂಡುಬಂದ ಪ್ರವಾಸೋದ್ಯಮ ಇಲಾಖೆಯ ‘ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ -2024’ ಅಭಿಯಾನದ‌ ಬ್ಯಾನರ್

ಪ್ರತಿಕ್ರಿಯೆ ನೀಡಬೇಕು: ‘ಅಭಿಯಾನದಲ್ಲಿ ಭಾಗವಹಿಸುವವರು ವೋಟಿಂಗ್ ಸಂದರ್ಭದಲ್ಲಿ ಈಗಾಗಲೇ ತಾವು ಭೇಟಿ ನೀಡಿದ ಪ್ರವಾಸ ತಾಣ ಮತ್ತು ಭೇಟಿ ನೀಡಲು ಬಯಸುವ ತಾಣದ ಕುರಿತ ಎರಡು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಬೇಕು. ಮೊದಲನೆಯದಾಗಿ, ತಾವು ಭೇಟಿ ನೀಡಿರುವ ಸ್ಥಳದ ಆಕರ್ಷಣೆ ಏನಾಗಿತ್ತು? ಮತ್ತೆ ಅಲ್ಲಿಗೆ ಭೇಟಿ ನೀಡಬೇಕೆನಿಸಿದರೆ ಏನು ಸುಧಾರಣೆಯಾಗಬೇಕು ಎಂದು ಬಯಸುತ್ತೀರಿ? ಹಾಗೂ ಎರಡನೆಯದಾಗಿ, ಪ್ರವಾಸಿಗರು ಭೇಟಿ ನೀಡಲು ಬಯಸುವ ಪ್ರವಾಸಿ ತಾಣದಲ್ಲಿ ಇರಬೇಕಾದ ಆಕರ್ಷಣೆಗಳೇನು? ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಬೇಕು’ ಎಂದು ಮಾಹಿತಿ ನೀಡಿದರು.

‘ಆನ್‌ಲೈನ್ ವೋಟಿಂಗ್ ಕುರಿತು ಈಗಾಗಲೇ ಜಿಲ್ಲೆಯ ಪ್ರವಾಸ ತಾಣಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರವಾಸಿ ಮಿತ್ರರಿಗೂ ಈ ಕುರಿತು ಅರಿವು ಮೂಡಿಸಲಾಗಿದೆ. ಸಾರ್ವಜನಿಕರು ಅಭಿಯಾನದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಪ್ರವಾಸ ಸ್ಥಳಗಳು ಸೇರಿದಂತೆ ಹಲವೆಡೆ ಬ್ಯಾನರ್ ಹಾಕಲಾಗಿದೆ. ಅದರಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿಯೂ ವೋಟ್ ಮಾಡಬಹುದಾಗಿದೆ’ ಎಂದು ಹೇಳಿದರು.

ರವಿಕುಮಾರ್ ಎಚ್‌.ಡಿ. ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ ರಾಮನಗರ
ರವಿಕುಮಾರ್ ಎಚ್‌.ಡಿ. ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ ರಾಮನಗರ
ಜಿಲ್ಲಾವಾರು ಯಾವ ಪ್ರವಾಸ ತಾಣಗಳಿಗೆ ಪ್ರವಾಸಿಗರಿಂದ ಹೆಚ್ಚು ವೋಟ್ ಬಂದಿವೆ ಎಂಬುದನ್ನು ಪರಿಶೀಲಿಸುವ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಅಂತಿಮವಾಗಿ ಆ ತಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಿದೆ
– ರವಿಕುಮಾರ್ ಎಚ್‌.ಡಿ. ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ ರಾಮನಗರ
ವೋಟ್ ಮಾಡೋದು ಹೇಗೆ?
ಪ್ರವಾಸೋದ್ಯಮ ಸಚಿವಾಲಯದ ‘ದೇಖೋ ಅಪ್ನಾ ದೇಶ್ ಪೀಪಲ್ಸ್ ಚಾಯ್ಸ್ -2024’ ಅಭಿಯಾನದ ವೆಬ್‌ಸೈಟ್ ಲಿಂಕ್ https://innovateindia.mygov.in/dekho-apna-desh/ ಗೆ ಪ್ರವಾಸಿಗರು ಭೇಟಿ ನೀಡಬೇಕು. ಲಿಂಕ್ ಕ್ಲಿಕ್ ಮಾಡಿ ತಮ್ಮ ಹೆಸರು ಮೊಬೈಲ್ ಫೋನ್ ಸಂಖ್ಯೆ ವಯಸ್ಸು ಲಿಂಗ ಇ–ಮೇಲ್ ವಿಳಾಸ ರಾಜ್ಯ ಹಾಗೂ ಜಿಲ್ಲೆಯ ಮಾಹಿತಿಯನ್ನು ಭರ್ತಿ ಮಾಡಿ ವೋಟ್ ಮಾಡಬೇಕು. ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಅಭಿಯಾನದಲ್ಲಿ ಪಾಲ್ಗೊಂಡವರ ಹೆಸರಿನಲ್ಲಿ ಪ್ರಮಾಣಪತ್ರ ಜನರೇಟ್ ಆಗಲಿದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಜಿಲ್ಲೆಯ 16 ಪ್ರವಾಸ ತಾಣಗಳು

  • ರಾಮನಗರದ ರಾಮದೇವರ ಬೆಟ್ಟ ಹಾಗೂ ದೇವಸ್ಥಾನ ರಣಹದ್ದು ವನ್ಯಜೀವಿ ಧಾಮ ಅಚ್ಚಲು ಬೆಟ್ಟ ಕೂಟಗಲ್ ಬೆಟ್ಟ ಹಂದಿಗುಂದಿ ಬೆಟ್ಟ ಜಾನಪದ ಲೋಕ ಜಲಸಿದ್ದೇಶ್ವರ ಬೆಟ್ಟ

  • ಚನ್ನಪಟ್ಟಣದ ಅಪ್ರಮೇಯ ಸ್ವಾಮಿ ದೇವಸ್ಥಾನ ಕಣ್ವ ಅಣಕಟ್ಟೆ

  • ಮಾಗಡಿಯ ಕೋಟೆ ಸಾವನದುರ್ಗ ಬೆಟ್ಟ ಹಾಗೂ ದೇವಸ್ಥಾನ

  • ಕನಕಪುರದ ಮೇಕೆದಾಟು

  • ಹಾರೋಹಳ್ಳಿ ಬುದ್ಧ ಪಿರಾಮಿಡ್ ಚತುರ್ಭುಜ ಬೆಟ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT