ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಸಂಗ್ರಹ ತಾಣವಾದ ಸಂಪರ್ಕ ರಸ್ತೆ

Last Updated 13 ಸೆಪ್ಟೆಂಬರ್ 2021, 4:01 IST
ಅಕ್ಷರ ಗಾತ್ರ

ಚನ್ನಪಟ್ಟಣ: ಬೆಂಗಳೂರು–ಮೈಸೂರು ಹೆದ್ದಾರಿಯ ಪಟ್ಟಣದ ವ್ಯಾಪ್ತಿಯ ಕುವೆಂಪು ನಗರದ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಒಂದು ಅಡ್ಡರಸ್ತೆಯಿಂದ ಮತ್ತೊಂದು ಅಡ್ಡರಸ್ತೆಗೆ ತೆರಳಲು ನಿರ್ಮಾಣವಾಗಿರುವ ಸುಮಾರು ಎರಡು ಕಿ.ಮೀ ಉದ್ದದ ಎರಡು ಸಂಪರ್ಕ ರಸ್ತೆಗಳು ಸಾರ್ವಜನಿಕ ಉಪಯೋಗಕ್ಕೆ ಬಾರದೆ ಮುಚ್ಚಿಹೋಗಿದ್ದು, ಕಸ ಹಾಕುವ ಜಾಗಗಳಾಗಿ ಪರಿವರ್ತನೆಯಾಗಿವೆ.

ಹೆದ್ದಾರಿಯಲ್ಲಿ ವಾಹನಗಳ ಹಾಗೂ ಸಾರ್ವಜನಿಕರ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಅಕ್ಕಪಕ್ಕದ ಅಡ್ಡರಸ್ತೆಗಳಿಗೆ ಓಡಾಡಲು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣವಾಗಿರುವ ಈ ರಸ್ತೆಗಳು ಸ್ವಚ್ಛತೆ ಇಲ್ಲದೆ ಕಸ ಹಾಕುವ ತಾಣಗಳಾಗಿವೆ. ಹಂದಿ, ನಾಯಿಗಳ ಆವಾಸ ಸ್ಥಾನಗಳಾಗಿವೆ.

ಹೆದ್ದಾರಿಯ ದಕ್ಷಿಣ ಭಾಗದಲ್ಲಿ ಕುವೆಂಪು ನಗರದ ಒಂದನೇ ಅಡ್ಡರಸ್ತೆಯಿಂದ ಆರಂಭವಾಗಿ ಮಂಗಳವಾರಪೇಟೆವರೆಗೆ ಸಂಪರ್ಕ ಕಲ್ಪಿಸುವ ಸಂಪರ್ಕ ರಸ್ತೆಯು ಒಂದನೇ ಅಡ್ಡರಸ್ತೆಯಿಂದ ಎರಡನೇ ಅಡ್ಡರಸ್ತೆವರೆಗೆ ಮಾತ್ರ ಸುಸ್ಥಿತಿಯಲ್ಲಿದೆ. ಆ ನಂತರದ ರಸ್ತೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ಅದು ಮುಂದುವರಿದಂತೆ ಕೆಲವೆಡೆ ಮುಚ್ಚಿ ಹೋಗಿದೆ. ಕೆಲವೆಡೆ ಅಕ್ಕಪಕ್ಕದ ನಿವಾಸಿಗಳು ಒತ್ತುವರಿ ಮಾಡಿಕೊಂಡಿದ್ದಾರೆ.

ಒಂದನೇ ಅಡ್ಡರಸ್ತೆಯ ಸಂಪರ್ಕ ರಸ್ತೆಯು ಸ್ವಚ್ಛತೆ ಕಾಪಾಡಿಕೊಂಡಿದ್ದರೂ ಅದರ ಪಕ್ಕದಲ್ಲೇ ಇರುವ ಉಪ ನೋಂದಣಾಧಿಕಾರಿ ಕಚೇರಿಗೆ ಬರುವ ಸಾರ್ವಜನಿಕರ ವಾಹನಗಳ ನಿಲುಗಡೆ ಸ್ಥಾನವಾಗಿದೆ. ಈ ರಸ್ತೆ ಸುಮಾರು ಹತ್ತು ಅಡಿ ಅಗಲವಿದ್ದರೂ ದ್ವಿಚಕ್ರವಾಹನ ಓಡಾಡಲೂ ಆಗದಂತೆ ಅಲ್ಲಿ ವಾಹನಗಳನ್ನು ನಿಲ್ಲಿಸಲಾಗಿರುತ್ತದೆ ಎನ್ನುವುದು ಸಾರ್ವಜನಿಕರ ಆರೋಪ.

ಇನ್ನು ಹೆದ್ದಾರಿಯ ಉತ್ತರಕ್ಕಿರುವ ಸಂಪರ್ಕ ರಸ್ತೆಯು ಸಹ ಕೊಳಚೆ ನೀರು ಹರಿಯುವ, ಕಸ ಹಾಕುವ ತಾಣವಾಗಿತ್ತು. ಕಳೆದ ಎರಡು ವರ್ಷಗಳ ಹಿಂದೆ ನಗರಸಭೆ ಅಧಿಕಾರಿಗಳು ಈ ರಸ್ತೆಯನ್ನು ಸ್ವಚ್ಛ ಮಾಡಿಸಿ ಕಾಂಕ್ರೀಟ್ ಹಾಕಿಸಿದ್ದರು. ಈಗ ಆ ರಸ್ತೆ ಸ್ವಲ್ಪಮಟ್ಟಿಗೆ ಸ್ವಚ್ಛವಾಗಿದ್ದರೂ ಹೆಚ್ಚಿನ ಮಟ್ಟದ ಸಾರ್ವಜನಿಕರು ಈ ರಸ್ತೆಯನ್ನು ಬಳಸದ ಕಾರಣ ಆ ರಸ್ತೆಯೂ ಅಲ್ಲಲ್ಲಿ ಕಸ ಹಾಕುವ ತಾಣವಾಗಿದೆ ಎನ್ನುವುದು ಸಾರ್ವಜನಿಕರ ದೂರು.

ಹೆದ್ದಾರಿಯ ಉತ್ತರದ ರಸ್ತೆಯೂ ಒಂದನೇ ಅಡ್ಡರಸ್ತೆಯಿಂದ 12ನೇ ಅಡ್ಡರಸ್ತೆಯ ನ್ಯಾಯಾಲಯದ ರಸ್ತೆಯವರೆಗೂ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಆದರೆ, ಈ ರಸ್ತೆಯಲ್ಲಿ ಕೆಲವು ವಾಹನಗಳು ಮಾತ್ರ ಓಡಾಡುತ್ತವೆ. ಹೆದ್ದಾರಿಗೆ ಅತಿ ಸಮೀಪದಲ್ಲಿ ಈ ಸಂಪರ್ಕ ರಸ್ತೆ ಇರುವ ಕಾರಣ ಹೆಚ್ಚಿನ ಜನರು ಹೆದ್ದಾರಿಯಲ್ಲೇ ಓಡಾಡುವುದರಿಂದ ಈ ರಸ್ತೆ ಅಷ್ಟಾಗಿ ಬಳಕೆಯಾಗುತ್ತಿಲ್ಲ.

ಆದರೆ, ಹೆದ್ದಾರಿಯ ದಕ್ಷಿಣದ ರಸ್ತೆಯು ಹೆಚ್ಚು ಸಾರ್ವಜನಿಕರು ಓಡಾಡುವ ರಸ್ತೆಯಾಗಿದೆ. ಕುವೆಂಪು ನಗರ, ಮಂಜುನಾಥ ನಗರ, ವಿವೇಕಾನಂದ ನಗರ, ಮಂಗಳವಾರಪೇಟೆ ಸೇರಿದಂತೆ ಹಲವು ಬಡಾವಣೆಗಳಿಗೆ ತೆರಳುವ ಮಂದಿ ಕುವೆಂಪು ನಗರದಲ್ಲಿ ಹೆಚ್ಚು ಓಡಾಡುತ್ತಾರೆ. ಅವರಿಗೆ ಇಲ್ಲಿಯ ಸಂಪರ್ಕ ರಸ್ತೆ ಇದ್ದೂ ಇಲ್ಲದಂತೆ ಇದೆ ಎನ್ನುವ ಆರೋಪ ಕೇಳಿಬರುತ್ತಿದೆ.

ನಗರಸಭೆ ಅಧಿಕಾರಿಗಳು ದಕ್ಷಿಣದ ರಸ್ತೆಯನ್ನು ಸಹ ಅಲ್ಲಲ್ಲಿ ಸ್ವಚ್ಛ ಮಾಡಿಸಿ ಕಾಂಕ್ರೀಟ್ ಹಾಕಿಸಿದ್ದರೂ ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಈ ರಸ್ತೆ ಕೇವಲ ಕಸ ಹಾಕುವ ತಾಣವಾಗಿ ಬದಲಾಗಿದೆ. ಈ ರಸ್ತೆಯನ್ನು ನಿರ್ವಹಣೆ ಮಾಡುವಲ್ಲಿ ನಗರಸಭೆ ನಿರ್ಲಕ್ಷ್ಯವಹಿಸಿದೆ ಎಂದು ಇಲ್ಲಿನ ನಾಗರಿಕರಾದ ಮೋಹನ್, ದೀಪಕ್, ಸ್ವಾಮಿ ಆರೋಪಿಸುತ್ತಾರೆ.

ಕುವೆಂಪು ನಗರದ ಒಂದರಿಂದ 12ನೇ ಅಡ್ಡರಸ್ತೆಗಳಲ್ಲಿ ನಗರಸಭೆಯು ಅಲ್ಲಲ್ಲಿ ಹಲವು ಕಸದ ತೊಟ್ಟಿಗಳನ್ನು ನಿರ್ಮಾಣ ಮಾಡಿದ್ದರೂ ಕೆಲವು ಮಂದಿ ತೊಟ್ಟಿಗಳಲ್ಲಿ ಕಸ ಹಾಕದೆ, ಸಂಪರ್ಕ ರಸ್ತೆಗಳಲ್ಲಿ ಕಸವನ್ನು ಹಾಕುತ್ತಿದ್ದಾರೆ. ಇದು ನಗರಸಭೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಮೊದಲೇ ಸಮರ್ಪಕವಾಗಿ ಕಸ ವಿಲೇವಾರಿ ಮಾಡದೆ ಸಾರ್ವಜನಿಕರ ಶಾಪಕ್ಕೆ ಗುರಿಯಾಗಿರುವ ನಗರಸಭೆ ಸಂಪರ್ಕ ರಸ್ತೆಗಳ ಸ್ವಚ್ಛತೆಯನ್ನೇ ಮರೆತಿದೆ ಎಂದು ನಾಗರಿಕರಾದ ಜಯರಾಮಯ್ಯ, ಲೋಕೇಶ್, ವೆಂಕಟಪ್ಪ ದೂರುತ್ತಾರೆ.

ಸಂಪರ್ಕ ರಸ್ತೆಗಳಲ್ಲಿ ಕಸದ ರಾಶಿ ಇರುವ ಕಾರಣ ಈಗ ದ್ವಿಚಕ್ರವಾಹನ ಸವಾರರು, ಪಾದಚಾರಿಗಳು ಆ ರಸ್ತೆಗಳ ಅವ್ಯವಸ್ಥೆ ನೋಡಿ ಅಲ್ಲಿ ಓಡಾಡುವುದನ್ನೇ ಬಿಟ್ಟಿದ್ದಾರೆ. ಬದಲಾಗಿ ಒಂದು ಅಡ್ಡರಸ್ತೆಯಿಂದ ಇನ್ನೊಂದು ಅಡ್ಡರಸ್ತೆಗೆ ತೆರಳಲು ಸಂಚಾರ ನಿಯಮವನ್ನು ಉಲ್ಲಂಘಿಸಿ ಹೆದ್ದಾರಿಯ ಬಲಭಾಗದಲ್ಲಿ ತೆರಳುತ್ತಾರೆ. ಹೆದ್ದಾರಿಯ ಬಲಭಾಗದಲ್ಲಿ ರಸ್ತೆಗಳಲ್ಲಿ ವಾಹನಗಳು ಬಂದಾಗ ಹೆದ್ದಾರಿಯಲ್ಲಿ ಓಡಾಡುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಬರುವ ಕಾರಣ ಅಡ್ಡರಸ್ತೆಯಿಂದ ಬರುವ ವಾಹನಗಳು ಅಪಘಾತಕ್ಕೀಡಾಗುತ್ತಿವೆ ಎಂದು ಇಲ್ಲಿನ ನಿವಾಸಿಗಳಾದ ಶಿವಣ್ಣ, ಮೋಹನ್ ತಿಳಿಸುತ್ತಾರೆ.

ಸಂಪರ್ಕ ರಸ್ತೆಗಳನ್ನು ರಿಪೇರಿ ಮಾಡಿದ ಮೇಲೆ ಅವುಗಳನ್ನು ಸ್ವಚ್ಛವಾಗಿಟ್ಟು ಸಾರ್ವಜನಿಕರ ಉಪಯೋಗಕ್ಕೆ ಮುಕ್ತ ಮಾಡುವುದು ನಗರಸಭೆಯ ಕೆಲಸ. ಆದರೆ, ಅಧಿಕಾರಿಗಳು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಈ ಬಗ್ಗೆ ಗಮನ ಸೆಳೆದರೂ ಕೇವಲ ಕಸ ವಿಲೇವಾರಿ ಮಾಡಿ ಸುಮ್ಮನಾಗುತ್ತಾರೆ. ಸ್ವಲ್ಪ ದಿನದ ನಂತರ ಸಂಪರ್ಕ ರಸ್ತೆಗಳು ಮತ್ತೆ ಯಥಾಸ್ಥಿತಿಗೆ ಬರುತ್ತವೆ ಎಂದು ನಾಗರಿಕರಾದ ಅಭಿಲಾಷ್, ಕೃಷ್ಣಮೂರ್ತಿ ತಿಳಿಸುತ್ತಾರೆ.

ನಗರಸಭೆಯು ಒತ್ತುವರಿಯಾಗಿರುವ ಸಂಪರ್ಕ ರಸ್ತೆಗಳನ್ನು ತೆರವುಗೊಳಿಸಿ, ಇಲ್ಲಿ ಕಸ ಹಾಕದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ರಸ್ತೆಗಳ ಸ್ವಚ್ಛತೆಗೆ ಪ್ರತಿದಿನ ಆದ್ಯತೆ ನೀಡಬೇಕು. ಕಸ ಹಾಕುವ ಮಂದಿಯ ವಿರುದ್ಧ ಕ್ರಮಕೈಗೊಳ್ಳಬೇಕು. ಈ ರಸ್ತೆಗಳನ್ನು ಸಾರ್ವಜನಿಕ ಉಪಯೋಗಕ್ಕೆ ಸಜ್ಜುಗೊಳಿಸಬೇಕು. ಹೆದ್ದಾರಿಯಲ್ಲಿನ ವಾಹನ ದಟ್ಟಣೆ ತಡೆಯಲು ಮುಂದಾಗಬೇಕು ಎನ್ನುವುದು ಸಾರ್ವಜನಿಕರ
ಒತ್ತಾಯ.

ಸ್ವಚ್ಛತೆಗೆ ಆದ್ಯತೆ ನೀಡಿ

ಕುವೆಂಪು ನಗರದಲ್ಲಿ ಜನರ ಹಾಗೂ ವಾಹನಗಳ ಓಡಾಟ ಹೆಚ್ಚಾಗಿದೆ. ಹೆದ್ದಾರಿಯ ಅಕ್ಕಪಕ್ಕದಲ್ಲಿ ಬಹುತೇಕ ಅಂಗಡಿ ಮಳಿಗೆಗಳು ಇದ್ದು, ಇಲ್ಲಿಗೆ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ರೀತಿಯ ವಸ್ತುಗಳನ್ನು ಕೊಳ್ಳಲು ಸಾರ್ವಜನಿಕರು ಹೆಚ್ಚಾಗಿ ಬರುತ್ತಾರೆ. ಇವರು ಹೆಚ್ಚಾಗಿ ಸಂಪರ್ಕ ರಸ್ತೆಗಳನ್ನು ಬಳಸುತ್ತಾರೆ. ಈ ರಸ್ತೆಗಳ ಸ್ವಚ್ಛತೆಗೆ ನಗರಸಭೆ ಆದ್ಯತೆ ನೀಡಬೇಕು. ಸಂಪರ್ಕ ರಸ್ತೆಗಳನ್ನು ಸರಿಪಡಿಸಿದರೆ ಹೆದ್ದಾರಿಯಲ್ಲಿ ಆಗುವ ಅಪಘಾತಗಳನ್ನು ತಡೆಯಬಹುದು. ಸಂಪರ್ಕ ರಸ್ತೆಗಳು ಸ್ವಚ್ಛತೆ ಕಾಪಾಡಿಕೊಂಡರೆ ಪಾದಚಾರಿಗಳು ಸಹ ಅಲ್ಲಿಯೇ ಓಡಾಟ ಆರಂಭಿಸುತ್ತಾರೆ.

ಕೆ.ಎಸ್. ನಾಗರಾಜು,ಸ್ಥಳೀಯ ಮುಖಂಡ

ನಿರ್ಲಕ್ಷ್ಯ ಸರಿಯಲ್ಲ

ಕುವೆಂಪು ನಗರ ಬಡಾವಣೆ ನಿರ್ಮಾಣ ಮಾಡುವಾಗ ಹೆದ್ದಾರಿಯ ಎರಡೂ ಭಾಗಗಳಲ್ಲಿ ಸಂಪರ್ಕ ರಸ್ತೆಗಳಿಗೆ ಜಾಗ ಬಿಟ್ಟಿರುವ ಅಂದಿನವರ ದೂರದೃಷ್ಟಿ ನಿಜಕ್ಕೂ ಶ್ಲಾಘನೀಯ. ಆದರೆ, ಈ ರಸ್ತೆಗಳ ಸಮರ್ಪಕ ಉಪಯೋಗ ಆಗದಿರುವುದು ನಿಜಕ್ಕೂ ದುರಂತ. ಈ ರಸ್ತೆಗಳಲ್ಲಿ ಉತ್ತಮ ಚರಂಡಿ ವ್ಯವಸ್ಥೆ, ಕಾಂಕ್ರೀಟ್ ವ್ಯವಸ್ಥೆ ಮಾಡಿರುವ ನಗರಸಭೆ ಆ ನಂತರ ನಿರ್ಲಕ್ಷ್ಯ ಮಾಡಿರುವುದು ಸೂಕ್ತವಲ್ಲ. ಸಂಪರ್ಕ ರಸ್ತೆಗಳ ಉಪಯೋಗ ಸಾರ್ವಜನಿಕರಿಗೆ ಸಿಗುವಂತೆ ಮಾಡುವುದು ನಗರಸಭೆಯ ಕರ್ತವ್ಯ.

ಭರತ್,ಸ್ಥಳೀಯ ನಿವಾಸಿ

ಕಸ ವಿಲೇವಾರಿ ವಿಳಂಬ

ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವ ಕಾರಣ ಸಂಪರ್ಕ ರಸ್ತೆಗಳು ಸೇರಿದಂತೆ ಪಟ್ಟಣದಲ್ಲಿ ಕಸ ವಿಲೇವಾರಿ ಸ್ವಲ್ಪ ತಡವಾಗಿದೆ. ಎಲ್ಲೆಡೆ ಇರುವ ಕಸವನ್ನು ಶೀಘ್ರವೇ ವಿಲೇವಾರಿ ಮಾಡಲಾಗುವುದು. ಸಂಪರ್ಕ ರಸ್ತೆಗಳು ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಒತ್ತುವರಿ ಬಗ್ಗೆ ತಿಳಿದರೆ ಅದನ್ನು ತೆರವು ಮಾಡಿಸಲಾಗುವುದು. ಸಾರ್ವಜನಿಕರು ಸಂಪರ್ಕ ರಸ್ತೆಗಳಲ್ಲಿ ಕಸ ಹಾಕುವ ಪದ್ಧತಿ ಕೈಬಿಡಬೇಕು.

ಶಿವನಾಂಕರೀಗೌಡ,ಪೌರಾಯುಕ್ತ, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT