ಬೆಂಗಳೂರು– ಮೈಸೂರು ಹೆದ್ದಾರಿ ಜಲಾವೃತ

ರಾಮನಗರ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇನ ಸಂಗನಬಸವನದೊಡ್ಡಿ ಅಂಡರ್‌ಪಾಸ್‌ನಲ್ಲಿ ಶುಕ್ರವಾರ ತಡರಾತ್ರಿ ಮಳೆ ನೀರು ಪ್ರವಾಹದಂತೆ ನುಗ್ಗಿದ್ದು, ಕತ್ತಲಲ್ಲಿ ಪ್ರಯಾಣಿಕರು ಪರದಾಡಿದರು.
ಮಧ್ಯರಾತ್ರಿ 1 ಗಂಟೆ ಆಸುಪಾಸು ರಾಮನಗರದಲ್ಲಿ ಮಳೆ ಆರಂಭಗೊಂಡಿದ್ದು, ರಾತ್ರಿ 2 ಗಂಟೆ ವೇಳೆಗೆ ಮಳೆ ನೀರು ಏಕಾಏಕಿ ಎಕ್ಸ್‌ಪ್ರೆಸ್‌ವೇಗೆ ನುಗ್ಗಿತು. ನೋಡುತ್ತಿದ್ದಂತೆಯೇ ಕೆಲವು ಅಡಿಗಳವರೆಗೂ ನೀರು ಸಂಗ್ರಹಗೊಂಡಿತು. ವಾಹನಗಳ ಒಳಗೂ ನೀರು ನುಗ್ಗಿದ್ದರಿಂದ ಹಲವು ಕಾರುಗಳು ಬಂದ್ ಆಗಿ ನಿಂತಲ್ಲೇ ನಿಂತವು. ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಇತರೆ ವಾಹನಗಳು ಗೊತ್ತಾಗದೇ ಡಿಕ್ಕಿಯಾದವು. ಇದರಿಂದ ಸರಣಿ ಅಪಘಾತವಾಗಿದ್ದು, ಹತ್ತಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಯಿತು.
ಬೇಸಿಗೆಯ ಮೊದಲ ಮಳೆಗೆ ಬೆಂಗಳೂರು–ಮೈಸೂರು ಹೆದ್ದಾರಿಯು ಮತ್ತೆ ಕೆರೆಯಂತಾಗತೊಡಗಿದ್ದು, ಬೆಳಿಗ್ಗೆ 8ರವರೆಗೂ ಮಳೆ ನೀರು ರಸ್ತೆಯನ್ನು ಆವರಿಸಿತ್ತು. ನಂತರದಲ್ಲಿ ನೀರು ಹರಿದುಹೋಗಲು ವ್ಯವಸ್ಥೆ ಮಾಡಲಾಯಿತು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ತುರ್ತು ಕಾಮಗಾರಿ: ಪ್ರಯಾಣಿಕರ ಪರದಾಟದ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಮಳೆ ನೀರು ಸುಗಮವಾಗಿ ಹರಿದುಹೋಗಲು ಅನುವಾಗುವಂತೆ ತುರ್ತು ಕಾಮಗಾರಿ ಗಳನ್ನು ಕೈಗೊಂಡರು.
ಹೆದ್ದಾರಿಯ ಸರ್ವೀಸ್ ರಸ್ತೆ ಪಕ್ಕದಲ್ಲಿ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಇನ್ನೊಂದು ರಸ್ತೆ ಇದ್ದು, ಸರ್ವೀಸ್ ರಸ್ತೆಯಿಂದ ಆ ರಸ್ತೆಗೆ ಓಡಾಡಲು ಮಳೆ ನೀರು ಹರಿದು ಹೋಗುವ ಚರಂಡಿ ಮೇಲೆ ಮಣ್ಣು ಸುರಿದಿದ್ದ ಪರಿಣಾಮ ಈ ಸಮಸ್ಯೆ ಆಗಿತ್ತು. ದೊಡ್ಡ ಪೈಪುಗಳನ್ನು ಅಳವಡಿಸಿ ಮಳೆ ನೀರು ಹರಿದುಹೋಗಲು ವ್ಯವಸ್ಥೆ ಮಾಡಲಾಯಿತು.
**
ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇ ಸಂಪೂರ್ಣ ಕಾಮಗಾರಿ ಮುಗಿಯುವ ತನಕ ಟೋಲ್ ಸಂಗ್ರಹ ಮಾಡಬಾರದು. ಜನರೂ ಟೋಲ್ ಕಟ್ಟಬಾರದು.
–ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ
**
ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದ ನಂತರ ಸಣ್ಣ ಪುಟ್ಟ ಸಮಸ್ಯೆಗಳಿವೆ. ಹೆದ್ದಾರಿ ಪ್ರಾಧಿಕಾರ ಅವುಗಳನ್ನು ಸರಿಪಡಿಸುತ್ತದೆ.
–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
Bengaluru-Mysuru Express Way I ಬದುಕಿನ ದಾರಿ ಮುಚ್ಚಿದ ದಶಪಥ ಹೆದ್ದಾರಿ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.