ಸೋಮವಾರ, ಮಾರ್ಚ್ 27, 2023
32 °C
ಕಾವೇರಿ ವನ್ಯಜೀವಿಧಾಮದಲ್ಲಿ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆ

ಬಿಳಿ ಸೀಳು ನಾಯಿ ಪತ್ತೆ: ಕಾವೇರಿ ವನ್ಯಜೀವಿಧಾಮದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕಾವೇರಿ ವನ್ಯಜೀವಿಧಾಮದ ಸಂಗಮ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬಿಳಿ ಸೀಳು ನಾಯಿ (ಅಲ್ಬಿನೊ) ಪತ್ತೆಯಾಗಿದೆ.

ರಾಜ್ಯದಲ್ಲಿ ಪತ್ತೆ ಆಗಿರುವ ಮೊದಲ ಅಲ್ಬಿನೊ ಸೀಳು ನಾಯಿ ಇದಾಗಿದೆ. ಸಾಮಾನ್ಯವಾಗಿ ಸೀಳು ನಾಯಿಗಳು ಕಂದು ಬಣ್ಣ ಹೊಂದಿದ್ದರೆ ಇದು ಭಾಗಶಃ ಬಿಳಿ ಬಣ್ಣ ಹೊದ್ದುಕೊಂಡಿದೆ.

ಜಿಲ್ಲೆಯ ಕನಕಪುರ ತಾಲ್ಲೂಕು ವ್ಯಾಪ್ತಿಯಲ್ಲಿನ ಸಂಗಮ ಅರಣ್ಯ ವಲಯ ಹಾಗೂ ಮಂಡ್ಯ ಜಿಲ್ಲೆಯ ಮುತ್ತತ್ತಿ ವಲಯದಲ್ಲಿ ಓಡಾಡುತ್ತಿರುವ ಕಂದು ವರ್ಣದ ಇತರೆ ಆರು ಸೀಳು ನಾಯಿಗಳ ಜೊತೆಗೆ ಈ ಬಿಳಿ ಸೀಳು ನಾಯಿ ಕಂಡುಬಂದಿದೆ. ಕಾಡಿನೊಳಗೆ ಅಳವಡಿಸಲಾದ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಈ ತಿಂಗಳ ಆರಂಭದಲ್ಲಿ ಇದರ ಚಲನವಲನ ಕಂಡುಬಂದಿದೆ.

ನೇಚರ್ ಕನ್ಸರ್ವೇಷನ್‌ ಫೌಂಡೇಶನ್ ಮತ್ತು ಹೊಳೆಮತ್ತಿ ಫೌಂಡೇಶನ್‌ನಿಂದ ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ನೇತೃತ್ವದ ತಂಡವು ಚಿರತೆಗಳ ಕುರಿತ ಅಧ್ಯಯನಕ್ಕಾಗಿ ವನ್ಯಜೀವಿಧಾಮದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿತ್ತು. ಅದರಲ್ಲಿ ಈ ಇದರ ಛಾಯಾಚಿತ್ರ ಸೆರೆಯಾಗಿದೆ. 

‘ಅಲ್ಬಿನಿಸಂ’ ಎನ್ನುವ ರೋಗದಿಂದ ಈ ಸೀಳು ನಾಯಿಯ ವರ್ಣವು ಕಂದು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿದೆ. ಮೆಲನಿನ್‌ ಎನ್ನುವ ರಾಸಾಯನಿಕ ಅಂಶ ದೇಹದಲ್ಲಿ ಕಡಿಮೆ ಆದಾಗ ಅದಕ್ಕೆ ತುತ್ತಾದ ಪ್ರಾಣಿಯ ಕೂದಲು ಮತ್ತು ಚರ್ಮ ಬಿಳಿ ಬಣ್ಣಕ್ಕೆ ತಿರುಗುತ್ತದೆ.

‘ಈ ಹಿಂದೆ ಬೇರೆ ಬೇರೆ ಪ್ರಾಣಿಗಳಲ್ಲಿ ಈ ರೀತಿಯ ಬಣ್ಣ ವ್ಯತ್ಯಾಸ ಆಗುವುದು ಕಂಡುಬಂದಿತ್ತು. ಆದರೆ, ಪ್ರಪಂಚದಲ್ಲೇ ಇದೇ ಮೊದಲ ಬಾರಿಗೆ ಸೀಳು ನಾಯಿಯೊಂದರಲ್ಲಿ ಈ ವರ್ಣ ಕಂಡುಬಂದಿದೆ’ ಎನ್ನುತ್ತಾರೆ ಸಂಜಯ್‌ ಗುಬ್ಬಿ.

‘ಈ ಅಲ್ಬಿನೊ ಸೀಳು ನಾಯಿ, ಬೀದಿ ನಾಯಿಯೊಡನೆ ಬೆರೆಕೆಯಾಗಿ ಹುಟ್ಟಿರುವ ಸಾಧ್ಯತೆಯೂ ಇದೆ. ಇದರ ಡಿಎನ್ಎ ಮಾದರಿಯನ್ನು ವಿಶ್ಲೇಷಿಸಿದರೆ ಮಾತ್ರ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಬಹುದು’ ಎನ್ನುತ್ತಾರೆ ಅವರು.

ಅಳಿವಿನಂಚಿನ ಪಟ್ಟಿಯಲ್ಲಿರುವ ಇವುಗಳಿಗೆ ಕನ್ನಡದಲ್ಲಿ ಸೀಳು ನಾಯಿ, ಕಾಡು ನಾಯಿ, ಕೆನ್ನಾಯಿ ಎಂದು ಕರೆಯುತ್ತಾರೆ. ಭಾರತ ಹೊರತುಪಡಿಸಿದರೆ ನೇಪಾಳ, ಬಾಂಗ್ಲಾದೇಶ, ಭೂತಾನ್, ಕಾಂಬೋಡಿಯ, ಚೀನಾ, ಇಂಡೋನೇಷ್ಯಾ ಸೇರಿದಂತೆ 11 ದೇಶಗಳಲ್ಲಷ್ಟೇ ಕಂಡುಬರುತ್ತವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು