ಚನ್ನಪಟ್ಟಣ: ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಎಂದೇ ಬಿಂಬಿಸಿಕೊಂಡಿದ್ದ ಪ್ರಸನ್ನ ಪಿ. ಗೌಡ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದ ನಂತರ ತಾಲ್ಲೂಕಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಿಲ್ಲದೆ ಮಂಕಾಗಿದ್ದು, ಸಮರ್ಥ ಅಭ್ಯರ್ಥಿಯ ಶೋಧ ನಡೆದಿದೆ.
ಪ್ರಸನ್ನ ಅವರು ತಾಲ್ಲೂಕಿನಲ್ಲಿ ಸಕ್ರಿಯರಾಗಿ ಮೊದಲ ಸುತ್ತಿನ ಪ್ರಚಾರ ಆರಂಭಿಸಿದ್ದರು. ಇದರ ಜೊತೆಗೆ ಆಯ್ದ ಗ್ರಾಮಗಳಲ್ಲಿ ಮಹಿಳಾ ಮತದಾರರ ಮನ ಗೆಲ್ಲಲು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವೆಡೆ ಧಾರ್ಮಿಕ ಪ್ರವಾಸ ಮಾಡಿಸಿದ್ದರು. ಜೊತೆಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ನ ಹಿಂಭಾಗ ತಮ್ಮ ಭಾವಚಿತ್ರ ಮುದ್ರಿಸಿ ಮನೆ-ಮನೆಗೆ ಹಂಚಲು ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಸನ್ನ ಅವರೇ ಕಾಂಗ್ರೆಸ್ ಅಭ್ಯರ್ಥಿ ಎನ್ನುವ ಹೊತ್ತಿನಲ್ಲಿ ಅವರು ಕಾಂಗ್ರೆಸ್ ತೊರೆದು, ತೆನೆ ಹೊತ್ತರು. ಇದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಯಸಿ ಒಟ್ಟು ಎಂಟು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಪ್ರಸನ್ನ ಪಿ. ಗೌಡ ಸೇರಿದಂತೆ ಮೂವರನ್ನು ಅಂತಿಮಗೊಳಿಸಲಾಗಿತ್ತು. ಉಳಿದ ಇಬ್ಬರು ಆಕಾಂಕ್ಷಿಗಳಾದ ಡಾ. ಭಗತ್ ರಾಂ, ಚಂದ್ರಸಾಗರ್ ಅವರು ಪ್ರಸನ್ನ ಅವರಿಗೆ ಬೆಂಬಲ ಸೂಚಿಸಿದ್ದರಿಂದಾಗಿ ಪ್ರಸನ್ನ ಅವರಿಗೆ ಟಿಕೆಟ್ ನೀಡಲು ಜಿಲ್ಲಾ ಕಾಂಗ್ರೆಸ್ ಸಮಿತಿ ಶಿಫಾರಸು ಮಾಡಿತ್ತು. ಇದೀಗ ಪ್ರಸನ್ನ ಕಾಂಗ್ರೆಸ್ ತೊರೆದ ಕಾರಣ, ಟಿಕೆಟ್ ಆಕಾಂಕ್ಷಿಗಳಾಗಿದ್ದ ಡಾ. ಭಗತ್ ರಾಂ, ಚಂದ್ರಸಾಗರ್ ಅವರ ಜತೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ್ ಅವರ ಹೆಸರುಗಳು ಮುನ್ನೆಲೆಗೆ ಬಂದಿವೆ.
ಈ ಪೈಕಿ ಡಾ. ಭಗತ್ ರಾಂ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದ್ದು, ಇವರು ಸರಳ, ಸಜ್ಜನಿಕೆಗೆ ಹೆಸರುವಾಸಿಯಾಗಿದ್ದಾರೆ. ಜತೆಗೆ ಹಿಂದುಳಿದ ವರ್ಗದವರು. ಅಲ್ಲದೆ, 1978ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ಬಿ.ಜೆ. ಲಿಂಗೇಗೌಡ ಅವರ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದ ಡಿ.ಟಿ. ರಾಮು ಅವರ ಅವರ ಮಗ ಎಂಬುದು ಇವರಿಗೆ ಪ್ಲಸ್ ಆಗಲಿದೆ. ಡಾ.ಭಗತ್ ರಾಂ ಅವರಿಗೆ ಟಿಕೆಟ್ ನೀಡಿದರೆ ಉತ್ತಮ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾ ಚಂದ್ರು ಅವರ ಪುತ್ರ ಚಂದ್ರಸಾಗರ್ ಹೆಸರು ಸಹ ಕೇಳಿಬರುತ್ತಿದೆ. ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಚಂದ್ರು ಅವರ ಪುತ್ರರೂ ಆಗಿರುವ ಚಂದ್ರಸಾಗರ್ ಹಲವು ವರ್ಷಗಳಿಂದ ತಾಲ್ಲೂಕು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಕೊರೊನಾ ವೇಳೆ ಜನರಿಗೆ ದಿನಸಿ ಕಿಟ್ ವಿತರಣೆಯಂತಹ ಸಮಾಜಸೇವಾ ಕಾರ್ಯ ಮಾಡಿದ್ದಾರೆ. ಇವರಿಗೆ ಟಿಕೆಟ್ ನೀಡಬೇಕು ಎಂದು ಮತ್ತೊಂದು ವರ್ಗ ವಾದಿಸುತ್ತಿದೆ.
ಇದರ ಜೊತೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ್ ಹೆಸರು ಕೇಳಿ ಬರುತ್ತಿದೆ. ಆದರೆ ಗಂಗಾಧರ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಗಂಗಾಧರ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿಲ್ಲ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ. ಪ್ರಸನ್ನ ಗೌಡ ಅವರು ಕಾಂಗ್ರೆಸ್ ತೊರೆದ ನಂತರ ಕಾಂಗ್ರೆಸ್ ಮುಖಂಡರು ಸರಣಿ ಸಭೆ ನಡೆಸುತ್ತಿದ್ದು, ಭಗತ್ ರಾಂ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಹೆಸರೇಳಲು ಇಚ್ಛಿಸದ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಚುನಾವಣೆ ಘೋಷಣೆಯಾಗಿದ್ದು, ಅಭ್ಯರ್ಥಿಯನ್ನು ಶೀಘ್ರವೇ ಆಯ್ಕೆ ಮಾಡುವ ಒತ್ತಡ ಕಾಂಗ್ರೆಸ್‌ಗೆ ಇದ್ದೇ ಇದೆ. ಜೆಡಿಎಸ್ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಟೋಟಿ ನೀಡಲು ಪಕ್ಷವು ಪ್ರಬಲ ಅಭ್ಯರ್ಥಿಯ ಆಯ್ಕೆ ಮಾಡುವುದು ಖಚಿತ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
ಹಲವು ಸಮಾಜಮುಖಿ ಕಾರ್ಯ
ರಾಜ್ಯ ಕಾಂಗ್ರೆಸ್ ವೈದ್ಯಕೀಯ ಘಟಕದ ಉಪಾಧ್ಯಕ್ಷರೂ ಆಗಿರುವ ಭಗತ್ ಕೊರೊನಾ ವೇಳೆ ವೈದ್ಯಕೀಯ ತಪಾಸಣೆಯ ಜವಾಬ್ದಾರಿ ನಿರ್ವಹಿಸಿದ್ದರು. ವೆಂಟಿಲೇಟರ್, ಆಕ್ಸಿಜನ್ ಕಾನ್ಸೆಂಟ್ರೇಟರ್‌ಗಳನ್ನು ಹಲವು ಆಸ್ಪತ್ರೆಗೆ ನೀಡಿದ್ದರು. ವೈದ್ಯಕೀಯ ಶಿಬಿರ ಆಯೋಜಿಸಿ ವೈದ್ಯಕೀಯ ಸೌಲಭ್ಯಗಳನ್ನು ನೀಡಿದ್ದರು. ಸಮಾಜಸೇವೆಯಲ್ಲೂ ಹೆಸರು ಮಾಡಿರುವ ಭಗತ್ ರಾಂ ಅವರಿಗೆ ಟಿಕೆಟ್ ನೀಡಬೇಕು ಎಂದು ಡಿ.ಟಿ. ರಾಮು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.
ರಮ್ಯಾ ಸೇರಿ ಹಲವರ ಹೆಸರು!
ಚನ್ನಪಟ್ಟಣ ಕ್ಷೇತ್ರದಿಂದ ನಟಿ ರಮ್ಯಾ ಆಲಿಯಾಸ್ ದಿವ್ಯ ಸ್ಪಂದನಾ ಸ್ಪರ್ಧಿಸುತ್ತಾರೆ ಎಂಬ ಗಾಳಿಸುದ್ದಿ ತಾಲ್ಲೂಕಿನಲ್ಲಿ ಹರಡುತ್ತಿದೆ. ಮೊದಲಿಗೆ ಇದೇ ರೀತಿ ರಮ್ಯಾ ಸ್ಪರ್ಧೆಯ ಬಗ್ಗೆ ಗುಸುಗುಸು ಆರಂಭವಾಗಿತ್ತು.
ರಮ್ಯಾ ಅವರನ್ನು ಒಪ್ಪಿಸುವ ಉದ್ದೇಶದಿಂದ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಪ್ರಸನ್ನ ಅವರ ಹೆಸರನ್ನು ಪ್ರಕಟಿಸಿರಲಿಲ್ಲ. ಆದರೆ ಪ್ರಸನ್ನ ಅದಕ್ಕೂ ಮೊದಲೇ ಕಾಂಗ್ರೆಸ್ ತೊರೆದಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.
ಇದರ ಜೊತೆಗೆ ಬಿಜೆಪಿ ಅಭ್ಯರ್ಥಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್‌ಗೆ ಬರುತ್ತಾರೆ, ಅವರೇ ಅಭ್ಯರ್ಥಿಯಾಗಲಿದ್ದಾರೆ. ಕನಕಪುರ ತಾಲ್ಲೂಕಿನ ಡಿ.ಎಂ. ವಿಶ್ವನಾಥ್ ಸ್ಪರ್ಧಿಸುತ್ತಾರೆ. ಡಿ.ಕೆ. ಶಿವಕುಮಾರ್ ಅಥವಾ ಡಿ.ಕೆ. ಸುರೇಶ್ ಪೈಕಿ ಒಬ್ಬರು ಸ್ಪರ್ಧೆ ಮಾಡಲಿದ್ದಾರೆ ಎಂಬ ಗಾಳಿ ಸುದ್ದಿಗಳು ಹರಿದಾಡುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.