ಮಂಗಳವಾರ, ಮೇ 24, 2022
25 °C

ಕರಕುಶಲಕರ್ಮಿಗಳಿಗೆ ಕಾರ್ಯಾಗಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಚನ್ನಪಟ್ಟಣದ ಗೊಂಬೆಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ತನ್ನದೇ ಆದ ಮಹತ್ವವಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ಅಭಿಪ್ರಾಯಪಟ್ಟರು.

ಪಟ್ಟಣದ ಖಾನ್ ಸಮುದಾಯ ಭವನದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ರಾಮನಗರ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಕರಕುಶಲ ಕಲೆಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕರಕುಶಲ ಕಲೆಯಲ್ಲಿ ತನ್ನದೇ ಆದ ಪರಂಪರೆ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಬೊಂಬೆನಾಡು ಚನ್ನಪಟ್ಟಣದಲ್ಲಿ ದೊರೆಯುವ ಗೊಂಬೆಗಳಿಗೆ ದೇಶ, ವಿದೇಶಗಳಲ್ಲಿ ಬಹಳ ಬೇಡಿಕೆ ಇದೆ. ಚನ್ನಪಟ್ಟಣದಲ್ಲಿನ ಕಲಾವಿದರ ಕೈಗಳಿಂದ ನಿರ್ಮಾಣವಾಗುವ ಗೊಂಬೆಗಳು ನೈಪುಣ್ಯ ಹೊಂದಿರುತ್ತವೆ. ಇದು ಇಲ್ಲಿನ ಕಲಾವಿದರ ಕೈಚಳಕಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅಲ್ಲದೆ ಕರಕುಶಲ ಅಭಿವೃದ್ಧಿಗಾಗಿ ವಿಶೇಷವಾದ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಲ್ತಾಫ್ ಮಾತನಾಡಿ, ಇಲ್ಲಿನ ಕಲಾವಿದರು ತಯಾರಿಸುವ ಗೊಂಬೆಗಳು ಗುಣಮಟ್ಟದಿಂದ ಕೂಡಿರುತ್ತವೆ. ಈ ಕಾರಣದಿಂದಲೇ ಹೊರ ರಾಷ್ಟ್ರಗಳಲ್ಲಿ ಇಲ್ಲಿನ ಗೊಂಬೆಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದರು.

ಮುಖಂಡ ಫರ್ವೀದ್ ಅಹಮ್ಮದ್ ಮಾತನಾಡಿ, ಕರಕುಶಲ ಚಟುವಟಿಕೆ ಯೋಜನೆಯಡಿ ಆಯ್ಕೆಯಾದ 274 ಫಲಾನುಭವಿಗಳಿಗೆ ನುರಿತ ಕಲಾವಿದರಿಂದ ಕರಕುಶಲ ಕಲೆಗಳ ಬಗ್ಗೆ ಉಪನ್ಯಾಸ ನೀಡಲಾಗುತ್ತಿದೆ. ಇಂತಹ ಕಾರ್ಯಾಗಾರಗಳ ಸದುಪಯೋಗವನ್ನು ಕರಕುಶಲಕರ್ಮಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿಗಮದ ವ್ಯವಸ್ಥಾಪಕ ಮುಜಾಮಿಲ್, ಜಿಲ್ಲಾ ವ್ಯವಸ್ಥಾಪಕ ಅಬ್ದುಲ್ ಮನ್ನಾನ್, ಜಿಲ್ಲಾ ಅಭಿಯಾನದ ವ್ಯವಸ್ಥಾಪಕ ರಾಮಕೃಷ್ಣ, ಸಂಪನ್ಮೂಲ ವ್ಯಕ್ತಿ ಗೋವಿಂದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು