ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುದೂರು | ಎತ್ತಿನಹೊಳೆ: 2ನೇ ಹಂತದಲ್ಲಿ ಕೃಷಿಗೆ ನೀರು: ಶಾಸಕ ಎನ್. ಶ್ರೀನಿವಾಸ್

Published : 12 ಸೆಪ್ಟೆಂಬರ್ 2024, 5:05 IST
Last Updated : 12 ಸೆಪ್ಟೆಂಬರ್ 2024, 5:05 IST
ಫಾಲೋ ಮಾಡಿ
Comments

ಕುದೂರು: ಎತ್ತಿನಹೊಳೆ ಯೋಜನೆಯ ಮೊದಲನೇ ಹಂತವನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಉದ್ಘಾಟನೆ ಮಾಡಿದ್ದು, ಈ ಭಾಗದ ಜನರ ಕುಡಿಯುವ ನೀರಿನ ತತ್ವಾರ ನೀಗುತ್ತಿದೆ. ಎರಡನೇ ಹಂತದಲ್ಲಿ ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ನೀರು ಬರಲಿದೆ ಎಂದು ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ತಿಳಿಸಿದರು.

ಸೋಲೂರು ಹೋಬಳಿಯ ಬಾಣವಾಡಿ, ಮೈಲನಹಳ್ಳಿ, ಪಾಲನಹಳ್ಳಿ ಗ್ರಾಮಗಳ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಎತ್ತಿನಹೊಳೆ ಒಂದನೇ ಹಂತದಲ್ಲಿ ಬಯಲು ಸೀಮೆಗೆ ನೀರು ಬಂದಿದ್ದು, ಎರಡನೇ ಹಂತದಲ್ಲಿ ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿಗೂ ನೀರು ಬರಲಿದೆ ಎಂದು ತಿಳಿಸಿದರು.

ಸೋಲೂರು ಭಾಗದಲ್ಲಿ ನೀರಾವರಿ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಎತ್ತಿನಹೊಳೆಯಿಂದ ಪ್ರಥಮ ಹಂತದಲ್ಲಿ ಕುಡಿಯಲು ನೀರು ತರಲಾಗುವುದು. ನಂತರ ಕೆರೆಕಟ್ಟೆ ತುಂಬಿಸಿ, ರೈತರ ನೀರಿನ ಸಮಸ್ಯೆಯನ್ನು ನೀಗಿಸಲಾಗುವುದು ಎಂದರು.

ಬಾಣವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹1ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ತಲಾ ₹25 ಲಕ್ಷ ರೂಪಾಯಿ ಪಾಲನಹಳ್ಳಿ ಹಾಗೂ ಬಾಣಾವಾಡಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸೋಲೂರು ಹೋಬಳಿ ವ್ಯಾಪ್ತಿಯಲ್ಲಿ ಇನ್ನೆರಡು ವರ್ಷದಲ್ಲಿ ಎಲ್ಲಾ ರಸ್ತೆಗೂ ಕಾಂಕ್ರೀಟ್ ಹಾಗೂ ಡಾಂಬರೀಕರಣ ಮಾಡಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಗದ್ದುಗೆ ಮಠಕ್ಕೆ ಭೇಟಿ ನೀಡಿದ ಶಾಸಕರು, ಮಠದ ಆವರಣದಲ್ಲಿ ₹75 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಅಳವಡಿಸಿ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಸೋಲೂರು ಗ್ಯಾಸ್ ಫ್ಯಾಕ್ಟರಿಯಿಂದ ಶ್ರೀಮಠದವರೆಗೆ ರಸ್ತೆ ನಿರ್ಮಿಸಲಾಗುವುದು ಎಂದು ಮಹಂತ ಸ್ವಾಮೀಜಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಆರ್ ಗೌಡ, ಮಾಜಿ ಸದಸ್ಯ ರಂಗಸ್ವಾಮಯ್ಯ, ಬಿಟ್ಟಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗರಂಗಯ್ಯ, ಲಕ್ಕೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾರಾಯಣಪ್ಪ, ಮಾಜಿ ಅಧ್ಯಕ್ಷ ಹನುಮಂತರಾಜು, ಕೃಷ್ಣಪ್ಪ, ಚೌಡಯ್ಯ, ಬಾನವಾಡಿ ಗ್ರಾಮ ಪಂಚಾಯತಿ ಸದಸ್ಯರಾದ ಭೈರೇಗೌಡ, ಲಕ್ಷ್ಮಣ್, ಆಲೂರು ನಾಗರಾಜು, ಗುರುಸಿದ್ದಯ್ಯ, ತೋಪೇಗೌಡ, ಉಮೇಶ್, ಲೋಕೇಶ್, ಪ್ರಭು, ಪಿಡಿಒ ರವಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT